More

    ವಸತಿ ಯೋಜನೆ ಮನೆಗಳಿಗೆ ಅನುದಾನ

    ಕಾರವಾರ: ವಸತಿ ಯೋಜನೆಯಲ್ಲಿ ಆಯ್ಕೆಯಾಗಿ ವಿವಿಧ ಕಾರಣಗಳಿಂದ ಬ್ಲಾಕ್ ಆಗಿದ್ದ ಮನೆಗಳಿಗೆ ಅನುದಾನ ನೀಡಲು ಸರ್ಕಾರ ಅವಕಾಶ ನೀಡಿದೆ ಎಂದು ಜಿಲ್ಲಾ ಪಂಚಾಯಿತಿ ತಿಳಿಸಿದೆ.

    ಇಂದಿರಾ ಆವಾಸ್, ಬಸವ ವಸತಿ ಯೋಜನೆ ಸೇರಿ ರಾಜೀವಗಾಂಧಿ ವಸತಿನಿಗಮದ ಅಡಿ ಫಲಾನುಭವಿಗಳಾಗಿ ಆಯ್ಕೆಯಾಗಿದ್ದ ಜಿಲ್ಲೆಯ 13094 ಮನೆಗಳಿಗೆ ಅನುದಾನ ನೀಡಲು ಸರ್ಕಾರ ತಡೆಯೊಡ್ಡಿತ್ತು. ವಸತಿ ನಿಗಮದ ವೆಬ್​ಸೈಟ್​ನಲ್ಲಿ ಈ ಫಲಾನುಭವಿಗಳ ಹೆಸರಿನ ಮುಂದೆ ಬ್ಲಾಕ್ಡ್ ಎಂದು ತೋರಿಸುತ್ತಿತ್ತು. ಅದನ್ನು 1 ತಿಂಗಳ ಅವಧಿಗೆ ತೆರವು ಮಾಡುವಂತೆ ವಸತಿ ಇಲಾಖೆ ಅಧೀನ ಕಾರ್ಯದರ್ಶಿ ಸದಾನಂದ ಪಾವಸ್ಕರ್ ಫೆ. 14 ರಂದು ಆದೇಶಿಸಿದ್ದಾರೆ.

    ಅದರಂತೆ ರಾಜೀವ ಗಾಂಧಿ ವಸತಿ ನಿಗಮ ಕ್ರಮ ವಹಿಸಿದೆ. ಫಲಾನುಭವಿಗಳಿಗೆ ಗ್ರಾಪಂಗಳು ಈ ಕುರಿತು ಮಾಹಿತಿ ನೀಡಲು ಸೂಚಿಸಲಾಗಿದೆ.ಮನೆಗಳ ನಿರ್ಮಾಣ ಪ್ರಗತಿಯಾಗಿದ್ದಲ್ಲಿ ಅಂಥ ಮನೆಗಳ ನಿರ್ವಣದ ಪ್ರಗತಿಯ ಬಗ್ಗೆ ಮಾರ್ಚ್ 14 ರೊಳಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಇಬ್ಬರು ಅಧಿಕಾರಿಗಳಿಂದ ಜಂಟಿ ಸರ್ವೆ ಮಾಡಿ ಯೋಜನೆಯ ಆಪ್​ನಲ್ಲಿ ಜಿಪಿಎಸ್ ಮಾಡಿ ಅಪ್​ಲೋಡ್ ಮಾಡಿದಲ್ಲಿ ಹಣ ಬಿಡಗಡೆ ಮಾಡಲಾಗುವುದು ಎಂದು ವಸತಿ ನಿಗಮ ತಿಳಿಸಿದೆ. ಇದರ ಪ್ರಯೋಜನವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದೆ.

    ಬ್ಲಾಕ್ ಏಕೆ?: ಆಧಾರ ಕಾರ್ಡ್ ಸಂಖ್ಯೆ ಹೊಂದಿಕೆಯಾಗಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯ 289 ಮನೆಗಳನ್ನು ಬ್ಲಾಕ್ ಮಾಡಲಾಗಿತ್ತು. ಜಮೀನಿನ ಮಾಲೀಕನ ಹೆಸರು ಮತ್ತು ಆಯ್ಕೆಯಾದ ಫಲಾನುಭವಿಯ ಹೆಸರು ಹೊಂದಿಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ 2,305 ಮನೆಗಳನ್ನು ಬ್ಲಾಕ್ ಮಾಡಲಾಗಿತ್ತು. ನಿಗದಿತ ಅವಧಿಯಲ್ಲಿ ಮನೆ ನಿರ್ಮಾಣ ಕಾಮಗಾರಿ ಪ್ರಗತಿ ತೋರಿಸಿಲ್ಲ ಎಂಬ ಕಾರಣಕ್ಕೆ 10,455 ಮನೆಗಳನ್ನು ಬ್ಲಾಕ್ ಮಾಡಲಾಗಿತ್ತು. ಅಲ್ಲದೆ, 45 ಮನೆಗಳ ಅನುದಾನ ತಡೆ ಹಿಡಿಯಲಾಗಿತ್ತು. ಒಟ್ಟಾರೆ ಜಿಲ್ಲೆಯಲ್ಲಿ ಆಯ್ಕೆಯಾದ 13,094 ಫಲಾನುಭವಿಗಳಿಗೆ ಸರ್ಕಾರದಿಂದ ಅನುದಾನ ಸಿಗಲು ವಿಳಂಬವಾಗಿತ್ತು.

    ಮಾರ್ಚ್ 14 ರವರೆಗೆ ರಾಜೀವ ಗಾಂಧಿ ವಸತಿ ನಿಗಮವು ಬ್ಲಾಕ್ ಆದ ಮನೆಗಳ ಮರು ಪರಿಶೀಲನೆಗೆ ಅವಕಾಶ ನೀಡಿದೆ. ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ಅಷ್ಟರೊಳಗೆ ಮನೆಯ ಫೌಂಡೇಶನ್ ಹಾಕಿಕೊಂಡು ಜಿಪಿಎಸ್ ಮಾಡಿಸಿಕೊಂಡಲ್ಲಿ ಅನುದಾನ ಬಿಡುಗಡೆಗೆ ಅವಕಾಶವಿದೆ. ಇಲ್ಲದಿದ್ದಲ್ಲಿ ಫಲಾನುಭವಿಯ ಹೆಸರನ್ನು ಶಾಶ್ವತವಾಗಿ ಕೈ ಬಿಡಲಾಗುವುದು. ಮುಂದೆ ಯಾವತ್ತೂ ವಸತಿ ಯೋಜನೆ ಫಲಾನುಭವಿ ಎಂದು ಪರಿಗಣಿಸಲು ಅವಕಾಶವಿಲ್ಲ.

    | ಎಂ. ರೋಶನ್ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts