More

    ವಸತಿ ನಿಲಯ ಬಳಕೆಗೆ ನಿರಾಸಕ್ತಿ

    ಯರಗಟ್ಟಿ: ರಾಜ್ಯದ ಅದೆಷ್ಟೋ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸರ್ಕಾರ ಶಿಕ್ಷಕರಿಗೆ ವಸತಿ ನಿಲಯಗಳನ್ನು ಇನ್ನೂ ನಿರ್ಮಿಸಿಕೊಟ್ಟಿಲ್ಲ. ಬಜೆಟ್‌ನಲ್ಲಿ ವಸತಿ ನಿಲಯ ನಿರ್ಮಾಣದ ಭರವಸೆ ನೀಡುವ ಸರ್ಕಾರ ನಂತರ ತನ್ನ ಮಾತು ಮರೆಯುತ್ತಿದೆ. ಆದರೆ, ಯರಗಟ್ಟಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ 8 ವಸತಿ ಗೃಹಗಳನ್ನು ಬಳಕೆ ಮಾಡದ ಕಾರಣ ಹಾಳಾಗಿದ್ದು, ಕುಡಕರ ಅಡ್ಡೆಯಾಗಿ ರೂಪುಗೊಂಡಿದೆ. ಜನರ ತೆರಿಗೆ ಹಣವೂ ಪೋಲಾಗಿದೆ.

    ಡಾ.ನಂಜುಂಡಪ್ಪ ವರದಿ ಅನ್ವಯ ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಶಿಕ್ಷಕರಿಗಾಗಿ ವಸತಿ ಗೃಹ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಯರಗಟ್ಟಿಯ ಜಕಾತಿ ಸರ್ಕಾರಿ ಕಾಲೇಜಿನ ಹಿಂಬದಿಯಲ್ಲಿ 2010ರಲ್ಲಿ ಎಂಟು ವಸತಿ ನಿಲಯ ನಿರ್ಮಿಸಲಾಗಿತ್ತು. ಈ ನಿಲಯಗಳು ಎರಡು ಬೆಡ್ ರೂಮ್, ಶುದ್ಧ ಕುಡಿಯುವ ನೀರಿನ ಯಂತ್ರ, ಫ್ಯಾನ್ ಸೇರಿ ಮತ್ತಿತರ ಮೂಲ ಸೌಲಭ್ಯ ಒಳಗೊಂಡಿವೆ. ಆದರೆ, ಯಾವುದೇ ಶಿಕ್ಷಕರು ಅಲ್ಲಿ ವಾಸವಾಗದ ಕಾರಣ 11 ವರ್ಷಗಳಿಂದ ನಿಲಯಗಳಿಗೆ ಬೀಗ ಜಡಿಯಲಾಗಿದೆ.

    ವಸತಿ ನಿಲಯವು ಶಿಕ್ಷಣ ಇಲಾಖೆಗೆ ಸಂಬಂಧಿಸಿದೆ ಎನ್ನುವುದು ಅನೇಕ ಅಧಿಕಾರಿಗಳಿಗೆ ಇನ್ನೂ ಗಮನಕ್ಕೆ ಬಾರದಿರುವುದು ಅಧಿಕಾರಿಗಳ ಕಾರ್ಯ ವೈಖರಿಯ ಗುಣಮಟ್ಟವನ್ನು ಪ್ರಶ್ನಿಸುವಂತಿದೆ. ಅಲ್ಲದೆ, ನಿಲಯದ ಪಕ್ಕ ಕಾಲೇಜು ಇದ್ದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಈ ನಿಲಯದ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಮುಂದಾಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

    ಕಚೇರಿ ಆರಂಭಕ್ಕೆ ಸೂಕ್ತ: ಯರಗಟ್ಟಿ ನೂತನ ತಾಲೂಕು ಎಂದು ಘೋಷಣೆಯಾಗಿ ಎರಡು ವರ್ಷ ಕಳೆದಿದೆ. ಇಲ್ಲಿ ಸರ್ಕಾರದ ವಿವಿಧ
    ಇಲಾಖೆಗಳ ಕಚೇರಿಗಳು ಆರಂಭವಾಗುತ್ತಿವೆ. ಆದ್ದರಿಂದ ಖಾಲಿ ಇರುವ ವಸತಿ ನಿಲಯಗಳನ್ನು ದುರಸ್ತಿ ಮಾಡಿ ಅಲ್ಲಿ ಕಚೇರಿ ಆರಂಭಿಸಬೇಕು. ಇದರಿಂದ ನಮಗೆ ದೂರದ ಸವದತ್ತಿಗೆ ಅಲೆದಾಡುವುದು ತಪ್ಪುತ್ತದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಕಿಡಿಗೇಡಿಗಳ ಆಟಾಟೋಪ

    ವಸತಿ ನಿಲಯಗಳು ಖಾಲಿ ಇರುವುದನ್ನು ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ವಸತಿ ನಿಲಯದ ಅಂದವನ್ನು ಹಾಳು ಮಾಡಿದ್ದಾರೆ. ಅವರ ಆಟಾಟೋಪಕ್ಕೆ ನಿಲಯದಲ್ಲಿ ಕಾಣಸಿಗುವ ಒಡೆದ ಕಿಟಕಿ ಗಾಜು, ನೀರಿನ ಪೈಪ್, ವಿದ್ಯುತ್ ದೀಪ, ಗೋಡೆ ಮೇಲೆ ಗೀಚಿದ ಕೆಟ್ಟ ಬರಹ ಹಾಗೂ ಸಾರಾಯಿ ಬಾಟಲಿಗಳು ರಾರಾಜಿಸುತ್ತಿವೆ. ಶಿಕ್ಷಕರು ಇರುವ ಸ್ಥಳ ಹೀಗಾದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

    ಯರಗಟ್ಟಿಯಲ್ಲಿರು ಶಿಕ್ಷಕರ ವಸತಿ ನಿಲಯಕ್ಕೆ ಯಾರೂ ಬಾರದ ಕಾರಣ ಸಮಸ್ಯೆಯಾಗಿದೆ. ಈ ಕುರಿತು ಮೇಲಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    | ಎ.ಎನ್.ಕಾಂಬೋಗಿ ಬಿಇಒ ಸವದತ್ತಿ

    ಖಾಲಿ ಇರುವ ಶಿಕ್ಷಕರ ವಸತಿ ಗೃಹಗಳಿಗೆ ಶೀಘ್ರ ಭೇಟಿ ನೀಡಿ, ಪರಿಶೀಲಿಸಲಾಗುವುದು. ಅಲ್ಲಿ ತಾಲೂಕು ಕಚೇರಿ ನಿರ್ಮಾಣ ಆಗುವವರೆಗೆ ಶಿಕ್ಷಣ ಇಲಾಖೆ ಅನುಮತಿ ಪಡೆದು ಅಲ್ಲಿಯೇ ಬಿಇಒ ಕಚೇರಿ ಸೇರಿ ವಿವಿಧ ಇಲಾಖೆಗಳ ಪ್ರಾರಂಭಿಸಲು ಕ್ರಮ ಜರುಗಿಸಲಾಗುವುದು.
    | ಆನಂದ ಮಾಮನಿ ವಿಧಾನಸಭೆ ಉಪಸಭಾಧ್ಯಕ್ಷ

    | ಸಿದ್ದು ಪೂಜಾರ ಯರಗಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts