More

    ವರ್ತಳ ರಸ್ತೆ ಸಂಚಾರಕ್ಕೆ ‘ಹೈಟೆನ್ಷನ್’!

    ಹುಬ್ಬಳ್ಳಿ: ರಾಜ್ಯದ ಎರಡನೇ ರಾಜಧಾನಿ ಹುಬ್ಬಳ್ಳಿ- ಧಾರವಾಡ ಮಹಾನಗರದ ವಾಹನ ದಟ್ಟಣೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಗರದ ಹೊರ ವಲಯದಲ್ಲಿ ನಿರ್ವಿುಸುತ್ತಿರುವ ರಿಂಗ್ ರಸ್ತೆಗೆ ತಂತಿಯೊಂದರಿಂದ ಹೈಟೆನ್ಷನ್ ಶುರುವಾಗಿದೆ!

    ರಸ್ತೆ ಕಾಮಗಾರಿ ಬಹುತೇಕವಾಗಿ ಮುಕ್ತಾಯಗೊಂಡಿದ್ದು, ಉದ್ಘಾಟನೆಗೆ ಮುಂಚಿತವಾಗಿಯೇ ಇಲ್ಲಿ ವಾಹನ ಸಂಚಾರ ಸಾಗಿದೆ. ಆದರೆ, ರಸ್ತೆಯ ಒಂದು ಭಾಗದಲ್ಲಿ ಮಾತ್ರ ದೊಡ್ಡ ವಾಹನಗಳು ಸಾಗಾಟಕ್ಕೆ ಅಡಚಣೆ ಉಂಟಾಗಿದೆ. ಹೈಟೆನ್ಷನ್ ವೈರ್ ಕಡಿಮೆ ಎತ್ತರದಲ್ಲಿ ಹಾದುಹೋಗಿರುವುದೇ ಇದಕ್ಕೆ ಕಾರಣವಾಗಿದೆ.

    ಕುಸುಗಲ್ ರಸ್ತೆ (ಹುಬ್ಬಳ್ಳಿ- ಸೊಲ್ಲಾಪುರ ), ಗದಗ ರಸ್ತೆ (ಹುಬ್ಬಳ್ಳಿ- ಹೊಸಪೇಟೆ) ಹಾಗೂ ಪುಣೆ-ಬೆಂಗಳೂರು ರಸ್ತೆ, ಪುಣೆ- ಅಂಚಟಗೇರಿ ಬಳಿಯ ಕಾರವಾರ ರಸ್ತೆ (ಅಂಕೋಲಾ- ಗೂಟಿ) – ಈ ನಾಲ್ಕೂ ರಾಷ್ಟ್ರೀಯ ಹೆದ್ದಾರಿಗಳನ್ನು ಹುಬ್ಬಳ್ಳಿಯ ಹೊರವಲಯದಲ್ಲಿ ಜೋಡಿಸಲು ರಿಂಗ್ ರಸ್ತೆ ನಿರ್ವಿುಸಲಾಗುತ್ತಿದೆ. ಪರವೂರಿಗೆ ಸಾಗುವ ವಾಹನಗಳು ಅನಗತ್ಯವಾಗಿ ನಗರದ ಒಳಗೆ ಬರುವುದನ್ನು ತಪ್ಪಿಸುವ ಮೂಲಕ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶವು ಈ ರಿಂಗ್ ರಸ್ತೆ ನಿರ್ವಣದ ಹಿಂದಿದೆ. ಒಟ್ಟು 19 ಕಿ.ಮೀ. ದೂರದ ಚತುಷ್ಪಥ ರಿಂಗ್ (ಹಾಲ್ಪ್ ರಿಂಗ್) ರಸ್ತೆ ಇದಾಗಿದ್ದು, ಸದ್ಯ ಕಾಮಗಾರಿ ಕೊನೆಯ ಹಂತ ತಲುಪಿದೆ.

    2017ರಲ್ಲಿ ರಿಂಗ್ ರಸ್ತೆ ಕಾಮಗಾರಿ ಆರಂಭಗೊಂಡಿದ್ದು, ಈಗ ಸರಿಸುಮಾರು ಶೇ. 80ರಷ್ಟು ಮುಗಿದಿದೆ. ಪೂರ್ಣಗೊಳ್ಳುವ ಮೊದಲೇ ಈ ರಸ್ತೆಯ ಬಳಕೆ ಶುರುವಾಗಿದೆ. ನಗರದ ಒಳಗೆ ಬರುವ ಅವಶ್ಯಕತೆ ಇಲ್ಲದ ವಾಹನಗಳು ಒಂದು ರಾಷ್ಟ್ರೀಯ ಹೆದ್ದಾರಿಯಿಂದ ಇನ್ನೊಂದಕ್ಕೆ ಸಾಗಬೇಕಾದ ವಾಹನಗಳಿಗೆ ಈ ರಸ್ತೆ ಅನುಕೂಲಕರವಾಗಿ ಪರಿಣಮಿಸಿದೆ. ಆದರೆ, ಈ ರಸ್ತೆಯ ಮಧ್ಯದಲ್ಲೊಂದು ಅಡಚಣೆ ಉಂಟಾಗಿದೆ. ವಾಹನ ಚಾಲಕರ ಭೀತಿಗೂ ಇದು ಕಾರಣವಾಗಿದೆ.

    ಇದೇ ಹೈಟೆನ್ಷನ್ ವೈರ್!

    ಕುಸುಗಲ್ಲ ರಸ್ತೆಯಿಂದ ಗದಗ ರಸ್ತೆಯನ್ನು ಈ ರಿಂಗ್ ರೋಡ್ ಮೂಲಕ ಸಂರ್ಪಸುವ ಮಧ್ಯದಲ್ಲಿ ಈ ವೈರ್ ಸಮಸ್ಯೆ ಸೃಷ್ಟಿಸಿದೆ. ಕುಸುಗಲ್ಲ ರಸ್ತೆಯಿಂದ 400 ಮೀಟರ್ ಅಂತರದಲ್ಲಿ ರಿಂಗ್ ರೋಡ್​ಗೆ ಅಡ್ಡಲಾಗಿ ವಿದ್ಯುತ್ ಹೈಟೆನ್ಷನ್ ವೈರ್ ಹಾದುಹೋಗಿದೆ. ಈ ಮೊದಲು ಈ ವೈರ್ ನೆಲದಿಂದ 20 ಅಡಿ ಎತ್ತರದಲ್ಲಿತ್ತು. ಆದರೆ, ರಿಂಗ್ ರಸ್ತೆಯು ನೆಲದಿಂದ ಏಳೆಂಟು ಅಡಿ ಎತ್ತರದಲ್ಲಿ ನಿರ್ವಿುಸಲಾಗಿದೆ. ಹೀಗಾಗಿ, ರಸ್ತೆಯಿಂದ ಸುಮಾರು 12 ಅಡಿ ಎತ್ತರದಲ್ಲಿ ಮಾತ್ರ ಈ ವೈರ್ ಈಗ ಉಳಿದುಕೊಂಡಿದೆ. ಹೀಗಾಗಿ, ಸಣ್ಣ-ಪುಟ್ಟ ವಾಹನಗಳು ಯಾವುದೇ ಅಡ್ಡಿ ಇಲ್ಲದೆ ಸಂಚರಿಸುತ್ತಿವೆ. ಆದರೆ, ಬೃಹತ್ ಲಾರಿಗಳು, ಕಂಟೇನರ್​ಗಳಿಗೆ ಇದು ಅಪಾಯಕಾರಿಯಾಗಿದೆ. ಇದನ್ನು ಮತ್ತೆ 20 ಅಡಿಯಷ್ಟು ಎತ್ತರಕ್ಕೆ ಏರಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ (ಎನ್​ಎಚ್) ಇಲಾಖೆ ಆದಷ್ಟು ಬೇಗ ಈ ಕಾರ್ಯ ಪೂರ್ಣಗೊಳಿಸಬೇಕಿದೆ. ಈ ಮೂಲಕ ನಗರದ ಸಂಚಾರ ದಟ್ಟಣೆ ತಡೆಗಟ್ಟಬಹುದಾಗಿದೆ.

    ಇಲ್ಲಿ ಸಮಸ್ಯೆ ನಿವಾರಣೆ

    ಗದಗ ರಸ್ತೆ ಹಾಗೂ ಪುಣೆ-ಬೆಂಗಳೂರು ರಸ್ತೆ ಸಂರ್ಪಸುವ ರಿಂಗ್ ರಸ್ತೆಯ ಮಧ್ಯದಲ್ಲಿಯೂ ಇದೇ ರೀತಿ ಎರಡು ಕಡೆಗಳಲ್ಲಿ ಹೈಟೆನ್ಷನ್ ವೈರ್​ಗಳಿದ್ದವು. ಇವುಗಳ ಎತ್ತರವನ್ನು ಈಗಾಗಲೇ ಹೆಚ್ಚಿಸಲಾಗಿದೆ. ಹೀಗಾಗಿ, ಇಲ್ಲಿ ವಾಹನಗಳು ನಿರಾತಂಕವಾಗಿ ಸಂಚರಿಸುತ್ತಿವೆ.

    ಮೂರು ವರ್ಷದಿಂದಲೂ ಸಮಸ್ಯೆ

    ರಿಂಗ್ ರೋಡ್ ಕಾಮಗಾರಿ ಗುತ್ತಿಗೆ ಪಡೆದಿರುವ ಕಾನ್​ಕಾರ್ಡ್ ಕನ್​ಸ್ಟ್ರಕ್ಷನ್ ಕಂಪನಿಯವರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಕೆಪಿಟಿಸಿಎಲ್​ಗೆ ಮನವಿ ಮಾಡಿದ್ದರು. ಕುಸುಗಲ್ ರಸ್ತೆ – ಗದಗ ರಸ್ತೆ ನಡುವಿನ ರಿಂಗ್ ರಸ್ತೆಯಲ್ಲಿರುವ ಹೈಟೆನ್ಶನ್ ವೈರ್ ಎತ್ತರವನ್ನು ಮತ್ತಷ್ಟು ಏರಿಸಲು ಅನುಮತಿ ಕೋರಿದ್ದರು. ಆದರೆ, ತಾಂತ್ರಿಕ ಕಾರಣಗಳಿಂದ ಈವರೆಗೂ ಈ ಸಮಸ್ಯೆ ನಿವಾರಣೆಯಾಗಿಲ್ಲ ಎನ್ನಲಾಗಿದೆ.

    ಹೈಟೆನ್ಷನ್ ವೈರ್ ಮತ್ತಷ್ಟು ಎತ್ತರಕ್ಕೇರಿಸಲು ಕೆಪಿಟಿಸಿಎಲ್​ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಅನುಮತಿ ದೊರೆತಿದೆ. ಶೀಘ್ರದಲ್ಲೇ ಹೈಟೆನ್ಶನ್ ವೈರ್ ಎತ್ತರಿಸುವ ಕಾರ್ಯ ನಡೆಯಲಿದೆ.

    | ವಸಂತ ನಾಯಕ, ಅಧೀಕ್ಷಕ ಇಂಜಿನಿಯರ್, ಪಿಡಬ್ಲ್ಯುಡಿ ರಾಷ್ಟ್ರೀಯ ಹೆದ್ದಾರಿ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts