More

    ವರುಣ ಕ್ಷೇತ್ರ ಅಭಿವೃದ್ಧಿಗೆ ಶ್ರಮ

    ತಿ.ನರಸೀಪುರ: ಕ್ಷೇತ್ರದ ಜನತೆ ಅವರಿಗೆ 15 ವರ್ಷ ಅವಕಾಶ ಕೊಟ್ಟಿದ್ದೀರಿ. ಈ ಬಾರಿ ನನಗೆ ಅವಕಾಶ ಮಾಡಿಕೊಡಿ. 15 ವರ್ಷಗಳಲ್ಲಾಗದ ಅಭಿವೃದ್ಧಿಯನ್ನು ಕೇವಲ 5 ವರ್ಷಗಳ ಅವಧಿಯಲ್ಲಿ ಮಾಡಿ ತೋರಿಸುತ್ತೇನೆ ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.

    ವರುಣ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ರೋಡ್ ಶೋ ಮೂಲಕ ಮತಯಾಚಿಸಿ ಅವರು ಮಾತನಾಡಿದರು. ಕ್ಷೇತ್ರದ ಜನತೆ 15 ವರ್ಷಗಳಿಂದಲೂ ಅವರನ್ನೇ(ಸಿದ್ದರಾಮಯ್ಯ, ಯತೀಂದ್ರ) ಆಯ್ಕೆ ಮಾಡುತ್ತಾ ಬಂದಿದ್ದೀರಿ. ಈ ಬಾರಿ ನನಗೊಂದು ಅವಕಾಶ ಕೊಡಿ. ಬೆಂಗಳೂರಿನ ಗೋವಿಂದರಾಜನಗರ ಮಾದರಿಯಲ್ಲಿ ವರುಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ ಎಂದರು.

    ನಾನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಗರಡಿಯಲ್ಲಿ ಬೆಳೆದವನು. 30 ವರ್ಷಗಳ ಕಾಲ ಅವರೊಂದಿಗೆ ಶಾಸಕ, ಸಚಿವ, ಕಾರ್ಪೊರೇಟರ್ ಆಗಿ ಕೆಲಸ ಮಾಡಿದ್ದೇನೆ. ಉಪ ಚುನಾವಣೆಯಲ್ಲಿ ದೇವೇಗೌಡರಿಗೆ ನಾನೊಬ್ಬನೇ ಏಕಾಂಗಿಯಾಗಿ ಸಾಥ್ ನೀಡಿದ್ದೆ. ಕ್ಷೇತ್ರ ನನಗೆ ಹೊಸತಾದರೂ ಇನ್ನೆರಡು ತಿಂಗಳಲ್ಲಿ ಗ್ರಾಮಗಳ ಇತಿಹಾಸವನ್ನು ನಾನೇ ಹೇಳುತ್ತೇನೆ. ಎಲ್ಲೆಡೆ ಸುತ್ತಾಡಿ ಜನರ ನಾಡಿಮಿಡಿತ ಅರಿತು ಅವರ ಆಶಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವುದು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದಿದೆ ಎಂದರು.

    ಕ್ಷೇತ್ರ ವ್ಯಾಪಿ ಸುತ್ತಾಡಿದ ವೇಳೆ ರೈತರಿಗೆ ಆಗಬೇಕಾದ ನೀರಾವರಿ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿವೆ. ಕ್ಷೇತ್ರದಲ್ಲಿ ಜನರ ಜೀವನ, ಮೂಲ ಸೌಕರ್ಯಗಳು ಯಾವುದೂ ಸಮರ್ಪಕವಾಗಿಲ್ಲ. ಹಾಗಾಗಿ ನಿಮ್ಮ ಆಶೀರ್ವಾದ ಇದ್ದರೆ ನನ್ನ 45 ವರ್ಷಗಳ ರಾಜಕೀಯ ಜೀವನವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ ಎಂದರು.
    ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಪಡಿತರ ವ್ಯವಸ್ಥೆಯಲ್ಲಿ ಬಡ ಕುಟುಂಬದವರಿಗೆ ಅಕ್ಕಿ ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಕೊಡುತ್ತಿದ್ದಾರೆ ಎಂಬ ತಪ್ಪು ಮಾಹಿತಿ ಜನರಲ್ಲಿದೆ. ಸಿದ್ದರಾಮಯ್ಯ ಅಕ್ಕಿಯ ಚೀಲ ಕೊಡುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದ ಅವರು, ಬಸವರಾಜ ಬೊಮ್ಮಾಯಿ ನಾಡಿನ ಜನರ ಸಮಸ್ಯೆ ಬಗೆಹರಿಸುತ್ತಿದ್ದಾರೆ ಎಂದರು.

    ಹುನುಗನಹಳ್ಳಿ, ಕಟ್ಟೇಹುಂಡಿ, ರಂಗನಾಥಪುರ, ರಂಗಾಚಾರಿಹುಂಡಿ, ರಂಸಮುದ್ರ, ಎಳೇಗೌಡನಹುಂಡಿ, ಹಿಟ್ಟುವಳ್ಳಿ, ಕುಪ್ಯ, ಬೊಮ್ಮನಾಯಕನಹಳ್ಳಿ, ಅಗಸ್ತಯ್ಯ ಕೆಂಪಯ್ಯನಹುಂಡಿ, ಹುಣಸೂರು, ಬಿಲಿಗೆರೆಹುಂಡಿಕಿರಗಸೂರು, ಮನ್ನೇಹುಂಡಿ, ಕೂಡ್ಲೂರು ಹಾಗೂ ಡಣಾಯಕನಪುರ ಗ್ರಾಮಗಳಲ್ಲಿ ಸೋಮಣ್ಣ ಬಿರುಸಿನ ಮತ ಯಾಚನೆ ಮಾಡಿದರು. ಪ್ರತಿ ಗ್ರಾಮಕ್ಕೆ ಭೇಟಿ ಕೊಟ್ಟ ವೇಳೆ ಗ್ರಾಮದಲ್ಲಿ ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರ ಹಾಕಿ ಸ್ವಾಗತ ಕೋರಲಾಯಿತು.

    ಜಿ.ಪಂ.ಮಾಜಿ ಸದಸ್ಯ ಬಿ.ಎನ್.ಸದಾನಂದ, ಸಿದ್ದೇಗೌಡ, ಕಲ್ಮಳ್ಳಿ ವಿಜಯಕುಮಾರ್, ಪಿಎಸಿಸಿ ಅಧ್ಯಕ್ಷ ಬಿ.ವೀರಭದ್ರಪ್ಪ, ಪುರಸಭಾ ಸದಸ್ಯ ಎಸ್.ಕೆ.ಕಿರಣ್, ಮಾಜಿ ಅಧ್ಯಕ್ಷ ಪರಶಿವಮೂರ್ತಿ, ಕೆಂಪಯ್ಯನಹುಂಡಿ ಅಂದಾನಿಗೌಡ, ಸ್ವಾಮಿ, ತುಂಬಲ ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗೂನಾಯಕ್, ಮೆಲ್ಲಹಳ್ಳಿ ಮಹದೇವಸ್ವಾಮಿ, ಸ್ವಾಮಿ, ಸುರೇಂದ್ರ, ಚೇತನ್, ಹೊಂಬೇಗೌಡ, ನವೀನ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts