More

    ವರುಣನ ಅವಾಂತರಕ್ಕೆ ಅಪಾರ ಹಾನಿ

    ಹೊಳೆನರಸೀಪುರ: ಪಟ್ಟಣದಲ್ಲಿ ಬುಧವಾರ ಸುರಿದ ಅಪಾರ ಮಳೆಗೆ ರಸ್ತೆಗಳು, ಮನೆಗಳು, ವಾಣಿಜ್ಯ ಸಂಕೀರ್ಣ, ಅಂಗಡಿ ಮಳಿಗೆಗಳು ಜಲಾವೃತಗೊಂಡು ಅವಾಂತರ ಸೃಷ್ಟಿಸಿತು.

    ಮಧ್ಯಾಹ್ನ 2.45 ರಿಂದ 3.30 ರವರೆಗೆ ಸುರಿದ ಭಾರಿ ಮಳೆಯಿಂದ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಆಗಿದೆ. ಬಸವ ಭವನ ಹಾಗೂ ಬಸ್ ನಿಲ್ದಾಣ ಪ್ರವೇಶದ್ವಾರದ ಸಮೀಪ ಚರಂಡಿಗಳಲ್ಲಿ ನೀರು ಹರಿಯಲು ಸಾಧ್ಯವಾಗದೆ ಮಳೆ ನೀರು ಚರಂಡಿ ನೀರಿನ ಜತೆ ಸೇರಿ ಬಸವಭವನ ಹಾಗೂ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿತ್ತು.

    ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪ ರಸ್ತೆಯಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಶಿವಣ್ಣ, ಸಾರಥಿ, ಶಿಕ್ಷಕ ಬಸವರಾಜು ಮನೆಗಳ ನೀರಿನ ಸಂಪಿಗೆ ಚರಂಡಿ ನೀರು ಹರಿದಿದ್ದು ಸಂಪಿನಲ್ಲಿದ್ದ ಶುದ್ಧ ನೀರೆಲ್ಲ ಮಲಿನಗೊಂಡಿತ್ತು.
    ಮಳೆಯ ಅಬ್ಬರಕ್ಕೆ ಕಾಲುವೆ ಏರಿ ಬೀದಿಯಿಂದ ಕಾರ್ಯಾಲಯ ಬಡಾವಣೆವರೆಗಿನ ಮುಖ್ಯರಸ್ತೆಯ ಬದಿಯಲ್ಲಿರುವ ಪಶು ವೈದ್ಯ ಆಸ್ಪತ್ರೆ, ಚೇತನ ಪ್ರೌಢಶಾಲೆ, ಕಾರ್ಮಿಕ ಇಲಾಖೆ, ಹೋಟೆಲ್, ಎಲೆಕ್ಟ್ರಿಕಲ್ ಅಂಗಡಿ, ಬೇಕರಿ, ಆಟೋಮೊಬೈಲ್ಸ್ ಸ್ಟೋರ್, ವರ್ಕ್ ಶಾಪ್‌ಗಳಿಗೆ ಮಳೆಯ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿದ್ದವು. ರೈಲ್ವೆ ಸ್ಟೇಷನ್ ಮುಂಭಾಗದ ರಸ್ತೆ ಸಂಪೂರ್ಣ ಜಲಮಯವಾಗಿತ್ತು.

    ಚೇತನ ಪ್ರೌಢಶಾಲೆಯ ಕೊಠಡಿಯೊಳಗೆ ನೀರು ನುಗ್ಗಿ ವಿದ್ಯಾರ್ಥಿಗಳು ಪರದಾಡಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ನೀರನ್ನು ಹೊರಹಾಕಿದರು. ಒಂದು ತಾಸು ಸುರಿದ ಭಾರಿ ಮಳೆಗೆ ಜಲಾವೃತಗೊಂಡ ಅಂಗಡಿ ಮಾಲೀಕರು ಹೈರಾಣ ಆಗಿ ಹೋದರು. ಪಶು ವೈದ್ಯ ಆಸ್ಪತ್ರೆಯ ಸುತ್ತ ನೀರು ನಿಂತು ಕೆರೆಯಂತಾಗಿತ್ತು.

    ನೀರು ನುಗ್ಗಿರುವ ವಿಷಯ ತಿಳಿಯುತ್ತಿದ್ದಂತೆ ಜೆಸಿಬಿ, ಟ್ರಾೃಕ್ಟರ್ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಕಾರ್ಯಾಚರನೆ ನಡೆಸಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts