More

    ವಚನ ಚಳವಳಿಯಿಂದ ಕ್ರಾಂತಿ: ಕಾಯಕ ಶರಣರ ಜಯಂತಿಯಲ್ಲಿ ಎಡಿಸಿ ವಿಜಯ ಈ. ರವಿಕುಮಾರ್ ಹೇಳಿಕೆ

    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ವಚನ ರಚಿಸಿ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ ನೂರಾರು ಶರಣರಲ್ಲಿ ಮಾದಾರ ಚನ್ನಯ್ಯ, ಡೊಹರ ಕಕ್ಕಯ್ಯ, ಶರಣ ಹರಳಯ್ಯ ಪ್ರಮುಖರು ಎಂದು ಅಪರ ಜಿಲ್ಲಾಧಿಕಾರಿ ವಿಜಯ ಈ. ರವಿಕುಮಾರ್ ಹೇಳಿದರು.
    ದೇವನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾಯಕ ಶರಣರ ಜಯಂತಿಯಲ್ಲಿ ಮಾತನಾಡಿದರು.
    ವಚನ ಎಂದರೆ ಮಾತು, ಜಗತ್ತಿನ ಮೊದಲ ಸಂಸತ್ ಎಂದೇ ಖ್ಯಾತಿ ಪಡೆದಿರುವ ಅನುಭವ ಮಂಟಪದಲ್ಲಿ ಮಹಾಜ್ಞಾನಿಗಳ ಚಿಂತನೆ, ಆಗಿನ ಕಾಲಘಟ್ಟದಲ್ಲಿ ಕ್ರಾಂತಿಯನ್ನೇ ಮಾಡಿತ್ತು. ಅಂತಹ ಮಹನೀಯರ ಸ್ಮರಣೆಗಾಗಿ ರಾಜ್ಯ ಸರ್ಕಾರ ಕಾಯಕ ಶರಣರ ಜಯಂತಿ ಆಚರಿಸುತ್ತಿದೆ. ಅದರಲ್ಲೂ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಜನರ ಸುದೈವ ಎಂದರು.
    ಡೊಹರ ಕಕ್ಕಯ್ಯ ಗುರುಪೀಠದ ಗುರುಮಾತಾ ನಂದಾತಾಯಿ ಮಾತನಾಡಿ, ಬಸವ ಯುಗ ಎನ್ನುವುದು ದೀನ ದಲಿತರ ಪಾಲಿಗೆ ಆನೆಬಲ ತಂದುಕೊಟ್ಟ ಯುಗ. ಶರಣ ಸಿದ್ಧಾಂತ ಆಚಾರ-ವಿಚಾರಗಳನ್ನು ತಿಳಿದು, ಸಮಾಜಕ್ಕೆ ಕೊಟ್ಟ ಕೊಡುಗೆ ಅರಿತು ಅನುಸರಿಸುವುದು ಮುಖ್ಯ. ಕಾಯಕ ಶರಣರ ಸಮಾಜ ಯಾವುದರಲ್ಲೂ ಕಡಿಮೆ ಇಲ್ಲ. ಸಮಾನತೆ ಮಾನವೀಯತೆ ಜಾಗೃತಿ ಇಲ್ಲದೇ ಶೋಷಿತ ವರ್ಗ ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ಶರಣರ ವಿಚಾರಧಾರೆ ಅರಿಯುವುದು ಅಗತ್ಯ ಎಂದರು.


    ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಶೋಷಿತ ಸಮಾಜಗಳನ್ನು ಮುನ್ನೆಲೆಗೆ ತರಲು ಬೆಳಕಿನ ದಾರಿ ತೋರಿದವರು ಜಗಜ್ಯೋತಿ ಬಸವಣ್ಣನವರು. ಅಂಬೇಡ್ಕರ್ ಆಶಯ ಈಡೇರಬೇಕಾದರೆ ನಾವ್ಯಾರು ಕಿತ್ತಾಡಬಾರದು. ರಾಗದ್ವೇಷಗಳನ್ನು ಬಿಟ್ಟು ಒಟ್ಟಾಗಿ ಹೋಗಬೇಕು ಎಂದರು.
    ತಮಟೆ ಕಲಾವಿದ ಪದ್ಮಶ್ರೀ ಮುನಿವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು.
    ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್, ಪುರಸಭೆ ಉಪಾಧ್ಯಕ್ಷೆ ಗೀತಾ ಶ್ರೀಧರ್, ಮಾಜಿ ಪುರಸಭೆ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಎಂ.ಮೂರ್ತಿ, ಮಾದಿಗ ದಂಡೋರದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ಎಂ.ರಾಜಪ್ಪ ಇದ್ದರು.’

    ಸಹಭಾಗಿತ್ವ ಅಗತ್ಯ: 12ನೇ ಶತಮಾನದಲ್ಲಿ ಶರಣರು ಹಾಕಿಕೊಟ್ಟ ಭದ್ರಬುನಾದಿಯಲ್ಲಿ ನಾವು ಸಮಾನತೆಯ ಸಮಾಜ ಕಟ್ಟಲಾಗುತ್ತಿಲ್ಲ. ಯುವಕ-ಯುವತಿಯರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸುವ ಮೂಲಕ ಸುಶಿಕ್ಷಿತ ಶಿಕ್ಷಣವಂತರಾಗಬೇಕು ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts