More

    ಲ್ಯಾಪ್​ಟಾಪ್ ಹಿಡಿದ ಕೈಯಲ್ಲೀಗ ಸಲಿಕೆ, ಗುದ್ದಲಿ

    ಲಕ್ಷೇಶ್ವರ: ಕರೊನಾ 2ನೇ ಅಲೆಯ ಅಬ್ಬರಕ್ಕೆ ಕಡಿವಾಣ ಹಾಕಲು ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದ್ದರಿಂದ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕರು ತವರಿಗೆ ತವರಿಗೆ ಬಂದಿದ್ದಾರೆ. ಹಳ್ಳಿಗಳತ್ತ ವಲಸೆ ಬರುತ್ತಿರುವ ಯುವಕರ ಬದುಕಿಗೆ ನರೇಗಾ ಯೋಜನೆ ಆಸರೆಯಾಗಿದೆ.

    ಪ್ರತಿ ವರ್ಷ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳ ಜನರು ಉದ್ಯೋಗ ಅರಸಿ ಗುಳೆ ಹೋಗಬಾರದು ಮತ್ತು ಅವರಿಗೆ ಸ್ಥಳೀಯವಾಗಿಯೇ ಉದ್ಯೋಗ ಸೃಜಿಸಿ ಸಂಪನ್ಮೂಲ ಹೆಚ್ಚಿಸುವ ಉದ್ದೇಶ ಉದ್ಯೋಗ ಖಾತ್ರಿ ಯೋಜನೆಯದ್ದಾಗಿದೆ. ಆದರೆ, ಕಳೆದ 2 ವರ್ಷದಿಂದ ನರೇಗಾ ಯೋಜನೆ ಕರೊನಾ ಸಂಕಷ್ಟದಲ್ಲಿ ಸಿಲುಕಿರುವ ಗ್ರಾಮೀಣ ಜನರಿಗೆ ಆಶಾಕಿರಣವಾಗಿದೆ. ಏಕಾಏಕಿ ಪಟ್ಟಣ ಪ್ರದೇಶಗಳಿಂದ ಹಳ್ಳಿಗಳತ್ತ ಬಂದಿರುವ ಖಾಸಗಿ ಕಂಪನಿ ಉದ್ಯೋಗಿಗಳು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪಟ್ಟಣ ಸೇರಿರುವ ನಿರುದ್ಯೋಗಿ ವಿದ್ಯಾವಂತ ಯುವಕರು, ಪದವೀಧರ ಯುವಕರು ಉದ್ಯೋಗ

    ಇಲ್ಲದೇ ಹಳ್ಳಿಯಲ್ಲಿ ಜೀವನ ನಡೆಸುವುದು ಹೇಗೆ ಎಂಬ ಪ್ರಶ್ನೆಗೆ ನರೇಗಾ ಉತ್ತರ ನೀಡಿದೆ.

    ನರೇಗಾದಡಿ ಕೃಷಿ, ಅರಣ್ಯ ಮತ್ತು ಗ್ರಾಪಂದಿಂದ ಗ್ರಾಮೀಣ ಪ್ರದೇಶಗಳಲ್ಲಿ ಬದುವು ನಿರ್ವಣ, ಕೆರೆ ಹೂಳೆತ್ತುವುದು, ರೈತ ಸಂಪರ್ಕ ರಸ್ತೆ ಅಭಿವೃದ್ಧಿ ಇತರೆ ಕಾರ್ಯಗಳು ನಡೆಯುತ್ತಿವೆ. ಹಳ್ಳಿಗಳತ್ತ ಬಂದಿರುವ ಯುವಕರು ಊರಲ್ಲಿ ಕಾಲಹರಣ ಮಾಡುವ ಬದಲು ಖಾತ್ರಿ ಕೆಲಸದಲ್ಲಿ ತೊಡಗಿದ್ದಾರೆ. ಕೈಯಲ್ಲಿ ಲ್ಯಾಪ್​ಟಾಪ್, ಮೊಬೈಲ್​ಫೋನ್, ಬುಕ್, ಪೆನ್ ಹಿಡಿಯಬೇಕಾದ ಯುವಕರು ಹೆಗಲ ಮೇಲೆ ಗುದ್ದಲಿ, ಕೈಯಲ್ಲಿ ಸಲಿಕೆ, ತಲೆ ಮೇಲೆ ಬುಟ್ಟಿ ಹೊರುತ್ತಿದ್ದಾರೆ. ಆದ್ರಳ್ಳಿ, ಯಳವತ್ತಿ, ಅಡರಕಟ್ಟಿ, ಶಿಗ್ಲಿ, ಗೊಜನೂರ ಸೇರಿ ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಕೆಲಸದಲ್ಲಿ ನಿತ್ಯ 3600 ಜನರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಸುಮಾರು 740ಕ್ಕೂ ಹೆಚ್ಚು 60 ವರ್ಷ ವಯೋಮಿತಿ ಮೀರಿದವರು, 586 ಪದವೀಧರ ಯುವಕರು, 120 ಅಂಗವಿಕಲರು ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಅರಸಿ ಗೋವಾ, ಮಂಗಳೂರು, ಉಡುಪಿ, ಬೆಂಗಳೂರು

    ಮತ್ತಿತರ ಕಡೆ ಹೋಗಿದ್ದ ಅನೇಕ ಯುವಕರು ಆದ್ರಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದಾರೆ. ನಿತ್ಯ 299 ರೂಪಾಯಿ ಕೂಲಿ ಹಣ ದೊರೆಯುತ್ತಿರುವುದು ಜೀವನಕ್ಕೆ ಆಸರೆಯಾಗಿದೆ.

    ಬೆಳಗಾವಿಯ ಗೊಗಟೆ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಬಿಇ ಸಿವಿಲ್ ವಿಭಾಗದಲ್ಲಿ ಓದುತ್ತಿರುವ ನಾನು ಕರೊನಾ ಎಫೆಕ್ಟ್​ನಿಂದಾಗಿ ಸ್ವಗ್ರಾಮ ಆದ್ರಳ್ಳಿ ತಾಂಡಾಕ್ಕೆ ಬಂದಿದ್ದೇನೆ. ನಮ್ಮದು ಬಡ ಕುಟುಂಬ. ಮನೆಯಲ್ಲಿ ಪಾಲಕರು ನಿತ್ಯ ನಸುಕಿನಲ್ಲಿ ನರೇಗಾ ಕೆಲಸಕ್ಕೆ ಹೋಗುತ್ತಿದ್ದರು. ನಮಗಾಗಿ ಕಷ್ಟಪಟ್ಟು ದುಡಿಯುತ್ತಿರುವ ತಂದೆ-ತಾಯಿಗಳ ಜತೆ ನಾನೂ ಕೆಲಸ ಮಾಡಿದರೆ ಕುಟುಂಬಕ್ಕೆ ಆಸರೆಯಾಗುತ್ತದೆ. ರೈತ ಉಪಯೋಗಿ ನರೇಗಾ ಕೆಲಸಕ್ಕೆ ಕೈ ಜೋಡಿಸಿದಂತಾಗುತ್ತದೆ ಎಂದು 15 ದಿನಗಳಿಂದ ನರೇಗಾದಡಿ ಕೆಲಸ ಮಾಡುತ್ತಿದ್ದೇನೆ. ಈ ಕೆಲಸ ನನಗೆ ಬದುಕಿನ ಪಾಠ, ಪ್ರಾಯೋಗಿಕ ಅನುಭವ ಕಲಿಸಿದೆ. ಸರ್ಕಾರದ ಈ ಯೋಜನೆ ಅತ್ಯಂತ ಮಹತ್ವಪೂರ್ಣವಾಗಿದೆ.

    | ಪ್ರವೀಣ ಸಕ್ರಪ್ಪ ಲಮಾಣಿ ಸಿವಿಲ್ ಇಂಜಿನಿಯರ್ ವಿದ್ಯಾರ್ಥಿ

    ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಕರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬರುತ್ತಿದ್ದಾರೆ. ಅವರಿಗೆ ಕೂಡಲೆ, ಜಾಬ್​ಕಾರ್ಡ್ ನೀಡಿ ಉದ್ಯೋಗ ಕಲ್ಪಿಸಲಾಗುತ್ತಿದೆ. ಈ ವೇಳೆ ಕರೊನಾ ಮಾರ್ಗಸೂಚಿ ಪಾಲಿಸುವ ಮೂಲಕ ಯುವಕರು ನರೇಗಾ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು.

    | ಆರ್.ವೈ. ಗುರಿಕಾರ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts