More

    ಲೇಸರ್ ಬೆಳಕಿನಲ್ಲಿ ಬೆಳಗಲಿದೆ ಸಿದ್ಧರಬೆಟ್ಟ, 16ರಂದು ನಡೆಯುವ ಹನುಮ ಜಯಂತಿ ಹಿನ್ನೆಲೆಯಲ್ಲಿ ಮಾಲಾಧಾರಿಗಳ ಸ್ವಾಗತಕ್ಕೆ ಸಜ್ಜು

     

    ಚಿಕ್ಕರಾಜು ದಾಬಸ್‌ಪೇಟೆ
    ಈ ಬಾರಿಯ ಹನುಮ ಜಯಂತ್ಯುತ್ಸವಕ್ಕೆ ಸೋಂಪುರ ಹೋಬಳಿಯ ನಿಜಗಲ್ ಸಿದ್ಧರಬೆಟ್ಟ ಸಜ್ಜುಗೊಳ್ಳುತ್ತಿದ್ದು, ಸಾವಿರಾರು ಹನುಮ ಮಾಲಾಧಾರಿಗಳ ಸ್ವಾಗತಕ್ಕೆ ಎದುರು ನೋಡುತ್ತಿದೆ.

    ಡಿ.16ರಂದು ನಡೆಯಲಿರುವ ಹನುಮ ಜಯಂತಿ ಹಿನ್ನೆಲೆಯಲ್ಲಿ ಬೆಟ್ಟ ಸಿಂಗಾರಗೊಳ್ಳುತ್ತಿದ್ದು, ಕಳೆದ ಬಾರಿ ಇಡೀ ಬೆಟ್ಟಕ್ಕೆ ಸಿಂಗರಿಸಿದ್ದ ಲೇಸರ್ ಬೆಳಕಿನ ವೈಭವ ಮರಳಿಸಲು ಸಕಲ ಸಿದ್ಧತೆ ಭರದಿಂದ ಸಾಗಿದೆ. ಬೆಂ.ಗ್ರಾಮಾಂತರ, ರಾಮನಗರ, ತುಮಕೂರು ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸುವ ಹನುಮ ಮಾಲಾಧಾರಿಗಳ ಜಮಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ.

    ಜಿಲ್ಲೆಯಲ್ಲಿಯೇ ಇದೊಂದು ವಿಸ್ಮಯಕಾರಿ ಧಾರ್ಮಿಕ ಕ್ಷೇತ್ರವಾಗಿ ಗಮನ ಸೆಳೆಯುತ್ತಿದೆ. ಭಕ್ತರ ಪಾಲಿಗೆ ಚಮತ್ಕಾರಗಳನ್ನು ಸಿದ್ಧಿಸುವ ಧಾರ್ಮಿಕ ಸ್ಥಳವಾಗಿ ಜನಪ್ರಿಯತೆ ಗಳಿಸಿದೆ.

    ಗಮನ ಸೆಳೆದ ಲೇಸರ್ ಲೈಟ್: 3,562 ಅಡಿ ಎತ್ತರವಿರುವ ಬೆಟ್ಟವನ್ನು ಕಳೆದ ಬಾರಿ ಲೇಸರ್ ಬೆಳಕಿನಿಂದ ಸಿಂಗರಿಸುವ ಮೂಲಕ ನಿಜಗಲ್ಲು ಸಿದ್ಧರಬೆಟ್ಟ ಸೇವಾ ಸಮಿತಿ ರಾಜ್ಯದ ಗಮನ ಸೆಳೆದಿತ್ತು. ಈ ಬಾರಿಯೂ ಇದೇ ವ್ಯವಸ್ಥೆ ಮಾಡಲಿದೆ. ಇದರೊಂದಿಗೆ ಇಲ್ಲಿನ ದೈವ ಸಿದ್ದಪ್ಪ ದೇವರ ಮೂರ್ತಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ನೆರವೇರಲಿದ್ದು, ಹನುಮನ ಆರಾಧಕರನ್ನು ಪುಳಕಗೊಳಿಸಲಿದೆ.

    ಸಿದ್ಧರಬೆಟ್ಟದ ಇತಿಹಾಸ: ನಿಜಗಲ್ ಸಿದ್ಧರಬೆಟ್ಟ ಸಾಂಸ್ಕೃತಿಕ ಪರಂಪರೆಯೊಂದಿಗೆ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿತ್ತು. ಇದನ್ನು ರತ್ನಪುರಿ ಪಟ್ಟಣ, ಶೂರರಗಿರಿ, ಉದ್ದಂಡಯ್ಯನ ಬೆಟ್ಟವೆಂತಲೂ ಕರೆಯಲಾಗುತ್ತಿತ್ತು. ಇದರ ಬಗ್ಗೆ ಕ್ರಿ.ಶ.1288ರ ಹೊಯ್ಸಳರ ಕಾಲದ ಶಾಸನದಲ್ಲಿ ಉಲ್ಲೇಖವಿದೆ ಎನ್ನಲಾಗಿದೆ. ಇದರಲ್ಲಿ ನಿಜಗಲೀಪುರ ಎಂಬ ಹೆಸರು ಪ್ರಸಿದ್ಧವಾಗಿದೆ. ಬೆಟ್ಟದಲ್ಲಿದ್ದ ಸಿದ್ಧರು ಒಂದು ಬಗೆಯ ರಸದಿಂದ ಲೋಹಗಳನ್ನು ಬಂಗಾರವಾಗಿ ಪರಿವರ್ತಿಸುತ್ತಿದ್ದುದ್ದರಿಂದ ಈ ಬೆಟ್ಟಕ್ಕೆ ರಸಸಿದ್ಧರ ಬೆಟ್ಟ ಎಂದೂ ಹೆಸರಿದೆ.

    ದುರ್ಗಾಸ್ತ್ತಮಾನದಲ್ಲಿ ವಿವರ: ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರು, ಚಿತ್ರದುರ್ಗದ ಪಾಳೇಗಾರ ಆಳ್ವಿಕೆಗೆ ಒಳಪಟ್ಟಿದ್ದು ಕ್ರಿ.ಶ 1770ರಲ್ಲಿ ನಡೆದ ಮೈಸೂರು ಮತ್ತು ಮರಾಠರ ಯುದ್ಧದಲ್ಲಿ ನಿಜಗಲ್ಲು ಬೆಟ್ಟ ಮರಾಠರ ವಶವಾಗುತ್ತದೆ, ಯುದ್ಧದ ಸಂದರ್ಭದಲ್ಲಿ ಮರಾಠರು ಫಿರಂಗಿಗಳಿಂದ ದಾಳಿ ನಡೆಸಿರುವ ಬಗ್ಗೆ ಕುರುಹುಗಳನ್ನು ಕೋಟೆಯ ಕಲ್ಲುಗಳಲ್ಲಿ ಇಂದಿಗೂ ನೋಡಬಹುದು. ಈ ಯುದ್ಧ ಹಾಗೂ ನಿಜಗಲ್ ದುರ್ಗದ ಬಗ್ಗೆ ತ.ರಾ.ಸು ಅವರ ‘ದುರ್ಗಾಸ್ತಮಾನ’ ಕಾದಂಬರಿಯಲ್ಲಿ ವರ್ಣರಂಜಿತವಾಗಿ ವಿವರಿಸಲಾಗಿದೆ. ಕೋಟೆ ಪೂರ್ವ ಭಾಗದಲ್ಲಿ ಗುಹಾಂತರ ದೇವಾಲಯವಿದ್ದು, ಗರ್ಭಗುಡಿಯಲ್ಲಿ ಬಾಣಲಿಂಗವಿದೆ, ಹಿಂದೆ ಇದು ಬಿಲ್ವಿದ್ಯೆ ತರಬೇತಿ ಕೇಂದ್ರವಾಗಿತ್ತು, ಇಲ್ಲಿನ ಬಂಡೆಯ ಮೇಲೆ ವೀರಭದ್ರ, ಗಾಯತ್ರಿ, ಕಾಲಭೈರವ, ಸುಬ್ರಹ್ಮಣ್ಯ ದೇವರ ಉಬ್ಬು ಶಿಲ್ಪಗಳಿವೆ. ಈ ಗುಹಾಂತರ ದೇವಾಲಯ ಸಿದ್ಧಗಂಗಾ ಮಠದ ಶ್ರೀ ಉದ್ಧಾನ ಶಿವಯೋಗಿಗಳ ತಪೋ ಭೂಮಿಯಾಗಿತ್ತು ಎಂಬ ಐತಿಹ್ಯವಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts