More

    ಲೇಔಟ್ ನಿರ್ವಣಕ್ಕೆ ಪ್ರಾಧಿಕಾರ ಪರದಾಟ

    ಗದಗ: ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಕಲ ಸೌಲಭ್ಯವುಳ್ಳ ಲೇಔಟ್ ನಿರ್ವಣದ ಯೋಜನೆಗಳಿಗೆ ಜಮೀನು ನೀಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಪ್ರಾಧಿಕಾರದ ಮಹತ್ವಾಕಾಂಕ್ಷೆ ಯೋಜನೆಗಳು ನನೆಗುದಿಗೆ ಬಿದ್ದಿವೆ.

    ಭೂಮಿ ಮಾಲೀಕರು ತಮ್ಮ ಭೂಮಿ ಯನ್ನು ನಿವೇಶನ ಮಾಡಬೇಕೆಂಬ ಆಸಕ್ತಿ ಹೊಂದಿದ್ದರೆ ಅಂಥವರು ಪ್ರಾಧಿಕಾರದ ಕಚೇರಿ ಸಂರ್ಪಸಬಹುದಾಗಿದೆ. ಪ್ರಾಧಿಕಾರವು ಫಿಫ್ಟಿ-ಫಿಪ್ಟಿ ಮಾದರಿಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ಎಲ್ಲ ಸೌಲಭ್ಯಗಳನ್ನು ಹೊಂದಿದ ನಿವೇಶನ ನೀಡುತ್ತದೆ.

    ಭೂಮಿ ಮಾಲೀಕ ತನ್ನ ಭೂಮಿಯನ್ನು ಮೊದಲು ಒಪ್ಪಂದದ ಮೂಲಕ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕು. ಮಾಲೀಕನಿಂದ ಪಡೆದ ಭೂಮಿಯನ್ನು ಪ್ರಾಧಿಕಾರವು ಅಭಿವೃದ್ಧಿಪಡಿಸಿ ನಿವೇಶನ (ಸೈಟ್)ಗಳನ್ನಾಗಿ ಪರಿವರ್ತಿಸುತ್ತದೆ. ಅವುಗಳಲ್ಲಿ ಅರ್ಧ ನಿವೇಶನಗಳನ್ನು ಮಾಲೀಕನಿಗೆ ನೀಡುತ್ತದೆ. ಉಳಿದ ನಿವೇಶನಗಳನ್ನು ಪ್ರಾಧಿಕಾರ ಉಳಿಸಿಕೊಂಡು ಮಾರಾಟ ಮಾಡುತ್ತದೆ.

    ಪ್ರಾಧಿಕಾರವು ಕೃಷಿ ಭೂಮಿಯನ್ನು ಖರೀದಿಸಿ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ನೀರು ಪೂರೈಕೆ, ರಸ್ತೆ, ಒಳಚರಂಡಿ, ವಿದ್ಯುತ್ ಸಂಪರ್ಕ ಕಲ್ಪಿಸುತ್ತದೆ. ಜತೆಗೆ ಪ್ರಾಧಿಕಾರದ ಕಚೇರಿಯಲ್ಲಿ ಅಂತಿಮ ಅನುಮೋದನೆ ಪಡೆದ ಅರ್ಹ ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವುದು ಮತ್ತೊಂದು ಪ್ರಕ್ರಿಯೆ.

    ಇವೆರಡು ಯೋಜನೆ ಜಾರಿಗೆ ಪ್ರಾಧಿಕಾರ ಮುಂದಾಗಿದೆ. ಇದಕ್ಕಾಗಿ ಕೃಷಿ ಭೂಮಿ ಖರೀದಿಗಾಗಿ ಅವಳಿ ನಗರದ ವಿವಿಧೆಡೆ ಪರಿಶೀಲನೆ ನಡೆಸಿದೆ. ಆದರೆ, ಪ್ರಾಧಿಕಾರದ ಫಿಫ್ಟಿ-ಫಿಫ್ಟಿ ಮಾದರಿ ಯೋಜನೆಗೆ ಜನರು ಒಪ್ಪುತ್ತಿಲ್ಲ. ಯೋಜನೆ ಸಲುವಾಗಿ ಪ್ರಾಧಿಕಾರವು ಭೂಮಿ ಖರೀದಿಗಾಗಿ ಒಂದು ವರ್ಷದಿಂದ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಪ್ರಾಧಿಕಾರ ಅಧ್ಯಕ್ಷ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಪ್ರತಿ ಸಭೆಯಲ್ಲೂ ಇದರ ಬಗ್ಗೆ ಚರ್ಚೆಯಾಗುತ್ತದೆ. ಈ ಕುರಿತು ಎರಡು ಬಾರಿ ಪತ್ರಿಕಾ ಪ್ರಕಟಣೆ ನೀಡಿದರೂ ಉಪಯೋಗವಾಗಿಲ್ಲ. ಜಮೀನಿಲ್ಲದೆ ಏನು ಮಾಡುವುದು ಎಂದು ಅಧಿಕಾರಿಗಳು ಕೈಚೆಲ್ಲಿದ್ದಾರೆ.

    ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ನೇತೃತ್ವದಲ್ಲಿ ಜಮೀನು ಖರೀದಿಗಾಗಿ ಮತ್ತೊಂದು ಸುತ್ತಿನ ಪ್ರಯತ್ನ ನಡೆಸಲಾಗುತ್ತಿದೆ. ರೈತರ ಮನವೊಲಿಸಿ ಜಮೀನು ಖರೀದಿಸುವ ಆಶಾಭಾವವನ್ನು ಅಧಿಕಾರಿಗಳು ಹೊಂದಿದ್ದಾರೆ. ಆದರೆ, ರೈತರು ಖಾಸಗಿ ಬಿಲ್ಡರ್​ಗಳಿಗೆ ಜಮೀನು ಮಾರಾಟ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಏಕೆ ಜಮೀನು ನೀಡುತ್ತಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

    ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ಎರಡೂ ಯೋಜನೆಗಳಿಗೆ ಬೆಟಗೇರಿ ಹೊರವಲಯ, ಸಂಭಾಪುರ, ಮುಂಡರಗಿ ಮತ್ತು ಕಳಸಾಪುರ ರಸ್ತೆಯಲ್ಲಿ ಭೂಮಿ ಹುಡುಕಾಟ ನಡೆಸಲಾಗಿದೆ. ಆದರೆ, ಭೂಮಿಯನ್ನು ನೀಡಲು ರೈತರು ಮುಂದೆ ಬರುತ್ತಿಲ್ಲ. ಪ್ರಾಧಿಕಾರದಿಂದಲೇ ಲೇಔಟ್ ಮಾಡಿ ತೋರಿಸಬೇಕೆಂದರೆ ಜಮೀನು ಸಿಗುತ್ತಿಲ್ಲ. ಇನ್ನೊಂದು ಸಲ ಪ್ರಕಟಣೆ ಹೊರಡಿಸಿ ಪ್ರಯತ್ನ ಮುಂದುವರಿಸುತ್ತೇವೆ.
    | ರಮೇಶ, ಆಯುಕ್ತ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ

    ನಗರಾಭಿವೃದ್ಧಿ ಪ್ರಾಧಿಕಾರದಿಂದ ಫಿಫ್ಟಿ ಫಿಫ್ಟಿ ಸ್ಕೀಮ್ಲ್ಲಿಯೇ ಲೇಔಟ್ ಮಾಡಬೇಕು ಎಂದು ಸರ್ವ ಪ್ರಯತ್ನ ನಡೆಸಲಾಗಿದೆ. ಸುಮಾರು 40- 50 ಎಕರೆ ಜಮೀನಿನಲ್ಲಿ ಲೇಔಟ್ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೇವೆ. ಆದರೆ, ನಗರದ ಸುತ್ತಮುತ್ತ ಬಿಲ್ಡರ್​ಗಳು ಜಮೀನು ಖರೀದಿಸಿ ನಿವೇಶನ ಮಾಡಿದ್ದಾರೆ. ಹೀಗಾಗಿ ನಮಗೆ ನಗರದ ಸಮೀಪ ಜಮೀನು ಸಿಗುತ್ತಿಲ್ಲ. ಆದರೂ ಪ್ರಯತ್ನ ಮುಂದುವರಿಸಿದ್ದೇವೆ.
    | ಸಂಗಮೇಶ ದುಂದೂರ, ಅಧ್ಯಕ್ಷ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts