More

    ಲಿಂಗ ಧರಿಸುವವರ ಸಂಖ್ಯೆ ಕಡಿಮೆ

    ಚನ್ನಗಿರಿ: ಲಿಂಗಾಯತ ಎಂದು ಹೇಳಿಕೊಳ್ಳುವ ನಾವು ಬಸವಣ್ಣನವರ ಒಂದು ಮಾತನ್ನೂ ಪಾಲಿಸದಿರುವುದು ವಿಷಾದನೀಯ ಎಂದು ಸಾಣೇಹಳ್ಳಿ ಮಠದ ಡಾ.ಶ್ರೀ ಪಂಡಿರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವತತ್ವ ಸಮ್ಮೇಳನ ಹಾಗೂ ವಿಶ್ವಗುರು ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

    ಲಿಂಗಾಯತ ಧರ್ಮದಲ್ಲಿರುವವರು ಎದೆಯ ಮಧ್ಯಭಾಗದಲ್ಲಿ ಲಿಂಗಧಾರಣೆ ಮಾಡಿಕೊಂಡು ನಿತ್ಯ ಪೂಜೆ ಮಾಡುತ್ತಾರೆ. ಆದರೆ, ಇತ್ತೀಚಿನ ದಿನಮಾನಗಳಲ್ಲಿ ಲಿಂಗ ಧರಿಸುವವರ ಸಂಖ್ಯೆ ಕಡಿಮೆ ಆಗಿದೆ. ಈ ಧರ್ಮದ ಆಚರಣೆಗಳನ್ನು ಮರೆಯುತ್ತಿರುವುದು ದುರಂತವಾಗಿದೆ ಎಂದರು.

    ಬೆಂಗಳೂರಿನ ಬಸವ ಮಂಟಪದ ಡಾ.ಮಾತೇ ಗಂಗಾದೇವಿತಾಯಿ ಮಾತನಾಡಿ, ಮನುಷ್ಯನು ಬಸವತತ್ವ ಅಳವಡಿಸಿಕೊಳ್ಳಲು ಗಟ್ಟಿತನ ಬೇಕಾಗಿವೆ. ಈ ತತ್ವದಲ್ಲಿ ಮೂಢನಂಬಿಕೆ, ಕಂದಾಚಾರ, ಮೂರ್ತಿ ಪೂಜೆ, ಜ್ಯೋತಿಷ್ಯ ಇಂತಹ ಅಂಶಗಳಿಗೆ ಅವಕಾಶವಿಲ್ಲ. ನಿತ್ಯವೂ ಲಿಂಗ ಪೂಜೆ ಮಾಡಿ ಕಾಯಕ ಮಾಡುವುದು ಈ ತತ್ವದ ಮೂಲ ಆಶಯವಾಗಿದೆ ಎಂದರು.

    ವಿಜಯಪುರದ ಬಸವತತ್ವ ಚಿಂತಕ ಜಗದೀಶ್ ಎಸ್.ಪಾಟೀಲ್ ಮಾತನಾಡಿ, ಶೋಷಿತ ಸಮುದಾಯಗಳನ್ನು ಸಂಘಟಿಸಿ, ಸ್ಥಾಪಿಸಿದ ಧರ್ಮವೇ ಲಿಂಗಾಯತ ಧರ್ಮವಾಗಿದೆ. ಈ ಧರ್ಮದ ಪ್ರಕಾರ ರಾಷ್ಟ್ರೀಯವಾದ ಎಂದರೆ ಎಲ್ಲರನ್ನು ಒಳಗೊಂಡು ಎಲ್ಲರು ನಮ್ಮವರು ಎನ್ನುವುದಾಗಿದೆ. ಯಾರನ್ನೂ ದ್ವೇಷಿಸದೆ ಎಲ್ಲರನ್ನು ಪ್ರೀತಿಸುವುದಾಗಿದೆ ಎಂದರು.

    ಪಾಂಡೋಮಟ್ಟಿ ವಿರಕ್ತ ಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ ಅವರ ಬರೆದ ಬೆಳಕಿನ ಬಂಡಿ ಪುಸ್ತಕವನ್ನು ರಾಜ್ಯ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಆರ್.ಸತೀಶ್ ಹೊಸಮನಿ ಬಿಡುಗಡೆಗೊಳಿಸಿದರು. ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬೀದರ್‌ನ ಬಸವರಾಜ ದನ್ನೂರ್ ಅವರಿಗೆ ವಿಶ್ವಗುರು ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಮೈಸೂರು ಹೊಸಮಠದ ಚಿದಾನಂದ ಸ್ವಾಮೀಜಿ, ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ, ನಿಜಲಿಂಗೇಶ್ವರ ದೇವರು, ಹಾಸನದ ತಣ್ಣೀರಳ್ಳಿ ಮಠದ ವಿಜಯಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತುಮ್‌ಕೋಸ್ ಅಧ್ಯಕ್ಷ ಆರ್.ಎಂ.ರವಿ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್, ಲಿಂಗರಾಜ್, ಕಾಕನೂರು ಎಂ.ಬಿ.ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts