More

    ಲಾರಿ ಚಾಲಕರಿಗೆ ಉಚಿತ ಊಟದ ಸೇವೆ

    ಯಲ್ಲಾಪುರ: ಲಾಕ್​ಡೌನ್ ಆರಂಭದ ದಿನದಿಂದ ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿಗಳ ಚಾಲಕರಿಗೆ ಪಟ್ಟಣ ಪಂಚಾಯಿತಿ ಸದಸ್ಯ ಸತೀಶ ನಾಯ್ಕ ನೇತೃತ್ವದ ಯುವಕರ ತಂಡ ನಿತ್ಯವೂ ಉಚಿತವಾಗಿ ಊಟ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

    ನಿತ್ಯವೂ ಪಲಾವ್ ಮಾಡಿಸಿಕೊಂಡು ಅದನ್ನು 150ಕ್ಕೂ ಹೆಚ್ಚು ಪಾಕೆಟ್​ಗಳನ್ನು ಮಾಡಿ ಪಟ್ಟಣದ ಜೋಡುಕೆರೆ ಬಳಿ ತರುತ್ತಾರೆ. ಮಧ್ಯಾಹ್ನ 1 ಗಂಟೆಯಿಂದ ಸುಮಾರು ಎರಡು ತಾಸುಗಳ ಕಾಲ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಓಡಾಡುವ ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿಗಳ ಚಾಲಕರಿಗೆ ಪಲಾವ್ ಹಾಗೂ ನೀರಿನ ಬಾಟಲಿಯನ್ನು ಉಚಿತವಾಗಿ ನೀಡುತ್ತಾರೆ. ಕಳೆದ 24-25 ದಿನಗಳಿಂದ ಒಂದು ದಿನವೂ ತಪ್ಪದೇ ಈ ಸೇವೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಪಪಂ ಸದಸ್ಯ ಸತೀಶ ನಾಯ್ಕ ಅವರ ನೇತೃತ್ವದಲ್ಲಿ ಸ್ಥಳೀಯರಾದ ಶ್ರೀನಿವಾಸ ಪಟಗಾರ, ಪ್ರಶಾಂತ ನಾಯ್ಕ, ರಾಮಾ ಮರಾಠೆ ಎಂಬುವವರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಯುವಕರ ತಂಡಕ್ಕೆ ಸ್ಥಳೀಯ ಮುಖಂಡರು, ಸಾರ್ವಜನಿಕರೂ ಸಹಕಾರ ನೀಡುತ್ತಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಜನರ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೊಲೀಸರು, ಕರೊನಾ ಹರಡದಂತೆ ಮುಂಜಾಗ್ರತೆ ವಹಿಸುತ್ತಿರುವ ಆರೋಗ್ಯ ಇಲಾಖೆಯವರು, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಪ್ರಮುಖರಿಗೆ ಮಾತ್ರ ಎಲ್ಲ ಸಂಘ-ಸಂಸ್ಥೆಗಳು, ಸರ್ಕಾರ ಸೌಲಭ್ಯಗಳನ್ನು ನೀಡುತ್ತಿವೆ. ಆದರೆ, ಅಗತ್ಯ ಸಾಮಗ್ರಿಗಳನ್ನು ನಮಗೆ ತಲುಪಿಸುವಲ್ಲಿ ಅವರಷ್ಟೇ ಶ್ರಮ ವಹಿಸಿ ದುಡಿಯುತ್ತಿರುವ ಶ್ರಮಿಕರಿಗೆ ಊಟ ನೀಡುವ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎನ್ನುತ್ತಾರೆ ಈ ಯುವಕರು.

    ನಿರಂತರವಾಗಿ ಲಾರಿ ಚಾಲಕರಿಗೆ ಊಟ ನೀಡುವ ಕಾರ್ಯ ಮಾಡುತ್ತಿದ್ದೇವೆ. ಊಟ-ತಿಂಡಿ ಇಲ್ಲದೆ ಹೈರಾಣಾಗುವ ಅವರು, ಊಟ ನೀಡಿದ ತಕ್ಷಣ ಖುಷಿಯಿಂದ ನಮ್ಮನ್ನು ಹರಸಿ ಹೋಗುತ್ತಿದ್ದಾರೆ. ನಮ್ಮ ಶ್ರಮ ನಿಜವಾಗಿ ಸಾರ್ಥಕವಾಗುತ್ತಿದೆ ಎಂಬ ಸಂತಸವಿದೆ.

    | ಸತೀಶ ನಾಯ್ಕ, ಪಟ್ಟಣ ಪಂಚಾಯಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts