More

    ಲಾಕ್​ಡೌನ್​ನಲ್ಲೂ ಲಿಕ್ಕರ್ ದಂಧೆ ಜೋರು

    ಬಾಬುರಾವ ಯಡ್ರಾಮಿ ಕಲಬುರಗಿ: ಲಾಕ್ಡೌನ್ ದುಡಿಯುವ ವರ್ಗ, ರೈತರು, ಬಡವರಿಗೆ ಶಾಪವಾಗಿ ಪರಿಣಮಿಸಿದ್ದರೆ, ಮದ್ಯದಂಗಡಿ ಮಾಲೀಕರು ಮತ್ತು ನೌಕರರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲೂ ಎಗ್ಗಿಲ್ಲದೆ ಲಿಕ್ಕರ್ ದಂಧೆ ಜೋರಾಗಿ ನಡೆದಿದೆ. ಅದೂ ಎರಡ್ಮೂರು ಪಟ್ಟು ಹೆಚ್ಚಿನ ದರಕ್ಕೆ.
    ವೈನ್ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು, ವೈನ್ ಮಾರ್ಟ, ಎಂಎಸ್ಐಎಲ್ ಅಂಗಡಿಗಳು ಹೀಗೆ ಎಲ್ಲವೂ ಲಾಕ್ಡೌನ್ ಘೋಷಣೆಯಾಗಿರುವ ಏ.23ರಿಂದಲೇ ಬಂದ್ ಅಗಿವೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಮೊದಲ ಕರೊನಾ ಸಾವು ಸಂಭವಿಸಿದ್ದರಿಂದ ಲಾಕ್ಡೌನ್ಗೆ ಮೊದಲೇ ಶೆಟರ್ ಕೆಳಗಿಳಿಸಿವೆ. ಸುಮಾರು 40 ದಿನಗಳಾದರೂ ಮದ್ಯದಂಗಡಿ ಮಾಲೀಕರು ಮತ್ತು ಅಬಕಾರಿ ಅಧಿಕಾರಿಗಳ ಹೊಂದಾಣಿಕೆ ಫಲವಾಗಿ ಮದ್ಯದ ಹೊಳೆ ಅಕ್ರಮ ಮಾರಾಟದ ರೂಪದಲ್ಲಿ ಹರಿಯುತ್ತಲೇ ಇದೆ.
    ಕುಡುಕರ ದೌರ್ಬಲ್ಯ ಮತ್ತು ಮದ್ಯಪ್ರಿಯರ ಆಸೆಯನ್ನೇ ಬಂಡವಾಳ ಮಾಡಿಕೊಂಡು ಜಿಲ್ಲೆಯ ಲಿಕ್ಕರ್ ಲಾಬಿಯಲ್ಲಿರುವ ಪ್ರಬಲರು ಸೇರಿ ತಮ್ಮ ವ್ಯವಸ್ಥಿತ ನೆಟ್ವವರ್ಕ ಮೂಲಕ ಸದ್ದಿಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಚೀಪ್ ಲಿಕ್ಕರ್ ಜತೆಗೆ ಬ್ರಾಂಡೇಡ್ ಲಿಕ್ಕರ್, ಬಿಯರ್ ಹೀಗೆ ಎಲ್ಲವೂ ಎರಡ್ಮೂರು ಪಟ್ಟು ಬೆಲೆಯಲ್ಲಿ ಸಿಗುತ್ತಿದೆ. ಇದು ಕಂಡೂ ಕಾಣದಂತೆ ಅಬಕಾರಿ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
    ಕಲಬುರಗಿ ನಗರ ಸೇರಿ ಚಿಂಚೋಳಿ, ಚಿತ್ತಾಪುರ, ಕಾಳಗಿ, ಸೇಡಂ, ಜೇವರ್ಗಿ , ಶಹಾಬಾದ್, ಅಫಜಲಪುರ, ಅಳಂದ ಮೊದಲಾದ ತಾಲೂಕು ಕೇಂದ್ರಗಳಲ್ಲಿ ಹೆಚ್ಚಿನ ದರದಲ್ಲಿ ಎಣ್ಣೆ ಮಾರಾಟ ನಡೆದಿದೆ. ಅದರಲ್ಲೂ ಕಲಬುರಗಿ ನಗರದಲ್ಲಿ ಅದರ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲ ಮದ್ಯ ಮಾರಾಟಗಾರರು, ಮಧ್ಯವರ್ತಿಗಳು ವರ್ಷವಿಡಿ ದುಡಿಯುವ ಹಣವನ್ನು ಕೆಲವೇ ದಿನಗಳಲ್ಲಿ ದುಡಿದು ಭರ್ಜರಿ ಜೇಬು ಭರ್ತಿ ಮಾಡಿಕೊಳ್ಳುತ್ತಿರುವುದು ಸುಳ್ಳಲ್ಲ.

    ಅಂಗಡಿ ಹಿಂಬಾಗಿಲಿನಿಂದ ಬಾಟಲಿ ಎತ್ತುವಳಿ
    ವೈನ್ ಸ್ಟೋರ್, ಬಾರಗಳು ಕ್ಲೋಸ್ ಆಗಿದ್ದರೂ ಎಲ್ಲಿಂದ ಮದ್ಯ ಬರುತ್ತಿದೆ ಎಂಬುದೇ ಕೆಲವರಿಗೆ ಯಕ್ಷಪ್ರಶ್ನೆ. ಆದರೆ ಇದರ ಬೆನ್ನು ಹತ್ತಿದಾಗ ಕಲಬುರಗಿ ನಗರ ಮತ್ತು ಜಿಲ್ಲೆಯ ಮದ್ಯದಂಗಡಿಗಳ ಹಿಂಬಾಗಿಲಿನಿಂದ ಬಾಟಲಿಗಳನ್ನು ಎತ್ತುವಳಿ ಆಗುತ್ತಿರುವ ಸಂಶಯ ಜಿಲ್ಲಾಡಳಿತಕ್ಕೆ ಬಲವಾಗಿ ಕಾಡುತ್ತಿದೆ. ಇನ್ನೊಂದೆಡೆ ಲಾಕ್ಡೌನ್ ಹೊತ್ತಿನಲ್ಲಿ ಎಲ್ಲ ಮದ್ಯದ ಅಂಗಡಿಗಳಿಗೆ ಮಾಡಿದ ಸೀಲ್ ಅಬಕಾರಿ ಅಧಿಕಾರಿಗಳು ಮತ್ತು ಅಂಗಡಿಯವರು ಸೇರಿ ಓಪನ್ ಮಾಡಿ ಮತ್ತೆ ಸೀಲ್ ಮಾಡಿರುವ ಬಗ್ಗೆ ದೂರುಗಳಿವೆ. ಕಲಬುರಗಿ ನಗರದ ಕೆಲವು ಮದ್ಯದಂಗಡಿಗಳು, ಖಜೂರಿ ಹೀಗೆ ಜಿಲ್ಲೆಯ ಹಲವು ಮದ್ಯದ ಅಂಗಡಿಯವರ ವಿರುದ್ಧ ಅಬಕಾರಿ ಆಯುಕ್ತರು, ಡಿಸಿಯವರಿಗೆ ದೂರುಗಳು ಹೋಗಿವೆ.


    ನೆರೆ ಜಿಲ್ಲೆಗಳಿಂದಲೂ ಕಲಬುರಗಿಗೆ ಮದ್ಯ
    ಲಾಕ್ಡೌನ್ ಮಧ್ಯೆಯೂ ಯಾದಗಿರಿ, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ತಮ್ಮ ಹಿಡಿತದದಲ್ಲಿರುವ ಅಂಗಡಿಗಳಿಂದಲೂ ಹೊಂದಾಣಿಕೆ ಮಾಡಿಕೊಂಡು ಮದ್ಯದ ಬಾಟಲಿಗಳನ್ನು ಜಿಲ್ಲೆಯ ಪ್ರಭಾವಿ ವ್ಯಾಪಾರಿಗಳು ಕಲಬುರಗಿಗೆ ತರಿಸಿ ತಮ್ಮ ಅನುಕೂಲಕ್ಕೆ ತಕ್ಕ ದರಕ್ಕೆ ಮದ್ಯ ಮಾರಾಟ ಮಾಡುವ ಕೆಲಸ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಇದೇ ಕಾರಣಕ್ಕೆ ಮದ್ಯ ಮಾರಾಟ ನಿಷೇಧದ 40 ದಿನ ಬಳಿಕವೂ ಕಾಳಸಂತೆಯಲ್ಲಿ ಎಣ್ಣೆ ಸಿಗುತ್ತಿದೆ. ಅಲ್ಲದೆ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಚಿಂಚೋಳಿ, ಸೇಡಂ ತಾಲೂಕಿನವರು ಅಲ್ಲಿನ ಮದ್ಯದ ಅಂಗಡಿಗಳಿಂದ ತರಿಸಿ ಕಲಬುರಗಿಗೆ ತಲುಪಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.


    ಲಾಕ್ಡೌನ್ ವೇಳೆ ಕಲಬುರಗಿ ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡಿಲ್ಲ. ಆದರೆ ಕಳ್ಳಬಟ್ಟಿ ಪ್ರಮಾಣ ಹೆಚ್ಚಿದ್ದರಿಂದ ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಸೀಲ್ ಒಡೆದ ಪ್ರಕರಣಗಳು ಕಂಡು ಬಂದಿಲ್ಲ, ಆದರೂ ವಿಶೇಷ ತಂಡ ರಚಿಸಿ ಮಾಹಿತಿ ಸಂಗ್ರಹಿಸಲಾಗುವುದು. ನಿಯಮ ಮೀರಿ ಮಾರುತ್ತಿರುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು.
    | ಎಫ್.ಎಚ್.ಚಲುವಾದಿ ಅಬಕಾರಿ ಡಿಸಿ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts