More

    ಲಾಕ್​ಡೌನ್​ಗೆ ದೊರಕದ ಸಂಪೂರ್ಣ ಬೆಂಬಲ

    ಹುಬ್ಬಳ್ಳಿ: ಭಾನುವಾರ ಇಡೀ ದಿನ ಲಾಕ್​ಡೌನ್ ಇದ್ದರೂ ವಾಹನಗಳ ಸಂಚಾರ ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಂಡಿರಲಿಲ್ಲ.

    ಇನ್ನುಳಿದ ವಿನಾಯಿತಿ ಲಾಕ್​ಡೌನ್​ನಂತೆ ನಗರದಲ್ಲಿ ಭಾನುವಾರವೂ ವಾಹನ ಸಂಚಾರ ಕಂಡುಬಂದಿತು. ಆದರೆ ಪಾದಚಾರಿಗಳ ಓಡಾಟ ವಿರಳವಾಗಿತ್ತು.

    ಬೆಳಗ್ಗೆಯಿಂದಲೇ ಲಾಕ್​ಡೌನ್ ಇದ್ದರೂ ಬೈಕ್, ಕಾರು, ಆಟೋಗಳು ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿದ್ದವು. ಅನಗತ್ಯವಾಗಿ ತಿರುಗುತ್ತಿದ್ದ ವಾಹನಗಳನ್ನು ಪೊಲೀಸರು ಸ್ಟೇಷನ್ ರಸ್ತೆಯಲ್ಲಿ ತಡೆದು ವಿಚಾರಿಸುತ್ತಿದ್ದರು. ಆದರೆ, ಇನ್ನುಳಿದ ಪ್ರಮುಖ ರಸ್ತೆಗಳಲ್ಲಿ ಬಿಗಿ ಕಾವಲು ಇರಲಿಲ್ಲ.

    ಚನ್ನಮ್ಮ ವೃತ್ತ, ಸವೋದಯ ವೃತ್ತ, ಸ್ಟೇಷನ್ ರಸ್ತೆ, ಕೇಶ್ವಾಪುರ, ಕುಸುಗಲ್ಲ ರಸ್ತೆ, ಕಾರವಾರ ರಸ್ತೆ, ವಿದ್ಯಾನಗರ, ಗೋಕುಲ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚು ಕಂಡುಬಂದಿತು. ಕೆಲವೆಡೆ ರಸ್ತೆಗಳ ಮಧ್ಯೆ ಬ್ಯಾರಿಕೇಡ್​ಗಳನ್ನು ಹಾಕಿ, ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು.

    ಜನತಾ ಬಜಾರ, ಎಂ.ಜಿ. ಮಾರ್ಕೆಟ್ ಸೇರಿ ಮಾರುಕಟ್ಟೆ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ಅಂಗಡಿಗಳು ಮುಚ್ಚಿದ್ದವು. ಬೆಳಗ್ಗೆ ಎಂ.ಜಿ. ಮಾರುಕಟ್ಟೆ ಹೊರಭಾಗದಲ್ಲಿ ಹೂವು, ತರಕಾರಿ, ಹಣ್ಣುಗಳ ಮಾರಾಟ ನಡೆದಿತ್ತಾದರೂ, ಬೆಳಗ್ಗೆ 10 ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಲ್ಲಿನ ವ್ಯಾಪಾರಸ್ಥರನ್ನು ಕಳುಹಿಸಿದರು.

    ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಸಿಬಿಟಿಗಳು ಬಸ್ ಹಾಗೂ ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದವು. ಭಾನುವಾರ ಸರ್ಕಾರಿ ರಜೆ ದಿನವಾದ್ದರಿಂದ ಮಿನಿ ವಿಧಾನಸೌಧದಲ್ಲಿ ತುರ್ತು ಕಾರ್ಯನಿರ್ವಹಣೆಯ ಅಧಿಕಾರಿ-ಸಿಬ್ಬಂದಿ ಮಾತ್ರ ಇದ್ದರು. ಮಹಾನಗರ ಪಾಲಿಕೆಯಲ್ಲಿ ಬೆರಳೆಣಿಕೆ ಸಿಬ್ಬಂದಿ ಹಾಜರಿದ್ದರು.

    ಲಾಕ್​ಡೌನ್ ಪರಿಶೀಲಿಸಿದ ಸಚಿವ ಶೆಟ್ಟರ್

    ಹುಬ್ಬಳ್ಳಿ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ನಗರದ ಸಿಬಿಟಿ, ಗದಗ ರಸ್ತೆ, ದುರ್ಗದಬೈಲ್, ಹೊಸೂರ, ಚಾಣಕ್ಯಪುರಿ ಮತ್ತಿತರೆಡೆ ಸಂಚರಿಸಿ ಭಾನುವಾರದ ಲಾಕ್​ಡೌನ್ ಪರಿಶೀಲಿಸಿದರು.

    ನಂತರ ಸರ್ಕ್ಯೂಟ್ ಹೌಸ್​ನಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರೊಂದಿಗೆ ರ್ಚಚಿಸಿ, ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು.

    ಧಾರವಾಡ ಸಂಪೂರ್ಣ ಬಂದ್

    ಧಾರವಾಡ: ಭಾನುವಾರದ ಲಾಕ್​ಡೌನ್​ಗೆ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ನಗರ ಸಂಪೂರ್ಣ ಸ್ತಬ್ಧವಾಗಿತ್ತು. ವಾಹನ, ಜನ ಸಂಚಾರವಿಲ್ಲದೆ ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶ ಬಿಕೋ ಎನ್ನುತ್ತಿದ್ದವು.

    ಈಗಾಗಲೇ ಜಿಲ್ಲೆಯಲ್ಲಿ ಜು. 15ರಿಂದ ಹತ್ತು ದಿನಗಳ ಕಾಲ ಲಾಕ್​ಡೌನ್ ಘೊಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಮಧ್ಯಾಹ್ನ 12ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ಭಾನುವಾರದ ಲಾಕ್​ಡೌನ್​ಗೆ ಈ ನಿಯಮ ಅನ್ವಯವಾಗದ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಬಂದ್ ಆಗಿತ್ತು.

    ಆಂಬುಲೆನ್ಸ್, ಅಗತ್ಯ ವಸ್ತುಗಳ ಸರಕು ಸಾಗಣಿಕೆ ವಾಹನ ಹೊರತುಪಡಿಸಿ, ನಗರ ಸಾರಿಗೆ ಹಾಗೂ ಖಾಸಗಿ ವಾಹನಗಳು ರಸ್ತೆಗೆ ಇಳಿದಿರಲಿಲ್ಲ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ಅನಗತ್ಯವಾಗಿ ಓಡಾಡುವವರ ನಿಯಂತ್ರಣಕ್ಕಾಗಿ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರು. ನಗರದ ಸುಭಾಷ್ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಹು-ಧಾ ಮುಖ್ಯ ರಸ್ತೆ, ಜುಬಿಲಿ ವೃತ್ತ, ಕೋರ್ಟ್ ವೃತ್ತ ಸೇರಿ ವಿವಿಧ ಕಡೆಗಳಲ್ಲಿ ಬ್ಯಾರಿಕೇಡ್ ಅವಳವಡಿಸಿ ವಾಹನ ಸವಾರರ ತಪಾಸಣೆ ನಡೆಸಿದ್ದರು. ಅಗತ್ಯ ಕಾರ್ಯಗಳಿಗೆ ತೆರಳುತ್ತಿದ್ದರೆ ಸುಮ್ಮನೆ ಬಿಡುತ್ತಿದ್ದರು. ಸಕಾರಣವಿಲ್ಲದೆ ಓಡಾಟ ನಡೆಸಿದ್ದ ಜನರ ಬೈಕ್​ಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಜನ ಸಂಚಾರ ಎಂದಿನಂತೆ

    ಅಳ್ನಾವರ: ತಾಲೂಕಿನಲ್ಲಿ ಭಾನುವಾರ ಜನ ಸಂಚಾರ ಎಂದಿನಂತಿತ್ತು. ಅಲ್ಲದೆ, ಕೆಲವರು ಮಾಸ್ಕ್ ಧರಿಸದಿರುವುದು ಕಂಡುಬಂತು. ನಿತ್ಯ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯುತ್ತಿವೆ. ಗಡಿ ಭಾಗದಲ್ಲಿ ಸ್ಥಾಪಿಸಿರುವ ಚೆಕ್​ಪೋಸ್ಟ್​ಗಳಲ್ಲಿ ಹೊರ ಪ್ರದೇಶಗಳಿಂದ ಆಗಮಿಸುವ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts