More

    ಲಸಿಕೆ ಹಾಕಿಸಿಕೊಳ್ಳಲು ಗ್ರಾಮಸ್ಥರ ಹಿಂದೇಟು

    ಕುಮಟಾ: ಕಳೆದ ವರ್ಷ 7 ಮಂದಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದ ಯಾಣದ ಸುತ್ತಮುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಯಮಾವಳಿಯಂತೆ ಮುಂಜಾಗ್ರತೆ ಲಸಿಕೆ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ. ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳಲು ತಯಾರಿಲ್ಲ. ಈ ಪ್ರದೇಶದಲ್ಲಿ ಪುನಃ ಮಂಗನ ಕಾಯಿಲೆ ಕಾಣಿಸಿಕೊಂಡರೆ ಅಪಾಯವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ತಿಳಿಸಿದರು.

    ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

    ಪ್ರತಿಕ್ರಿಯಿಸಿದ ಇಒ ಸಿ.ಟಿ. ನಾಯ್ಕ, ಇಂಥ ಪರಿಸ್ಥಿತಿಯಲ್ಲಿ ತಾಲೂಕಾಡಳಿತವೇ ಗ್ರಾಮಕ್ಕೆ ತೆರಳಿ ಜನರ ಮನವೊಲಿಸಬೇಕು. ಇದಕ್ಕಾಗಿ ಶೀಘ್ರವೇ ದಿನಾಂಕ ನಿಗದಿಪಡಿಸಿ ಎಂದರು.

    ಕರೊನಾ ವೈರಸ್​ಗೆ ತಾಲೂಕಿನ ಜನ ಭಯಪಡುವ ಅಗತ್ಯವಿಲ್ಲ. ಇಲಾಖೆಯಿಂದ ಸಾರ್ವತ್ರಿಕವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಜನರು ಎಚ್ಚರ ವಹಿಸಬೇಕು ಎಂದರು.

    ತೋಟಗಾರಿಕೆ ಸಹಾಯಕ ನಿರ್ದೇಶಕ ಚೇತನ ನಾಯ್ಕ ಮಾತನಾಡಿ, ವನ್ನಳ್ಳಿ ಭಾಗದಲ್ಲಿ ಉಳ್ಳಾಗಡ್ಡಿ ಬೆಳೆಗೆ ರೋಗ ತಗುಲಿದೆ. ಸದ್ಯದಲ್ಲೇ ತಜ್ಞರು ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದರು.

    ತಾಲೂಕಿನ 19 ಶಾಲೆಗಳಲ್ಲಿ ತಲಾ 12 ಸಾವಿರ ರೂ. ವೆಚ್ಚದಲ್ಲಿ ಪೌಷ್ಟಿಕ ತೋಟ ನಿರ್ವಿುಸಲಾಗುತ್ತಿದ್ದು, ಬಿಸಿಯೂಟದ ಅಗತ್ಯಗಳನ್ನು ಅಲ್ಲಿಂದಲೇ ಪೂರೈಸಲು ಅನುಕೂಲವಾಗಲಿದೆ ಎಂದರು.

    ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, ಬಡ್ಡಿ ರಹಿತ ಸಾಲ ಸೌಲಭ್ಯ ಮೀನುಗಾರರಿಗೆ ದೊರಕುತ್ತಿಲ್ಲ. ಇಲ್ಲಿಯೂ ಸಾಲ ಕೊಡಿಸಲು ಏಜೆಂಟರು ಹುಟ್ಟಿಕೊಂಡಿದ್ದಾರೆ. ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

    ಪ್ರತಿಕ್ರಿಯಿಸಿದ ಸಹಾಯಕ ನಿರ್ದೇಶಕ ರವೀಂದ್ರ ತಳೇಕರ, ಸಾಲ ಕಟಬಾಕಿ, ಸರಿಯಾದ ವ್ಯವಹಾರ ಇಲ್ಲದಿರುವುದು ಹಾಗೂ ಬೇರೊಂದು ಸಾಲ ಇರುವ ಕಾರಣ ಹೇಳಿ ಮಂಜೂರಾದ ಸಾಲವನ್ನು ಕೊಡಲು ಬ್ಯಾಂಕ್​ಗಳು ನಿರಾಕರಿಸುತ್ತಿವೆ ಎಂದರು.

    ಈಶ್ವರ ನಾಯ್ಕ ಮಾತನಾಡಿ, ಮಿರ್ಜಾನ, ಕೋಡ್ಕಣಿ, ದಿವಗಿ ಇತರ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಧ ಗಂಟೆಗೊಮ್ಮೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ಖಂಡಗಾರನಂತಹ ಅರಣ್ಯಪ್ರದೇಶದಲ್ಲಿ ಸಮಸ್ಯೆಯಾದರೆ ಎಲ್ಲೆಡೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ಮಿರ್ಜಾನದಲ್ಲಿ ಗ್ರಿಡ್ ಅಳವಡಿಸಿ ಎಂದು ಹಲವು ವರ್ಷಗಳ ಹಿಂದೆಯೇ ಪ್ರಸ್ತಾವನೆ ಕಳುಹಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಇನ್ನೊಮ್ಮೆ ಪ್ರಸ್ತಾವನೆ ಕಳುಹಿಸಿ ಎಂದು ಹೆಸ್ಕಾಂ ಇಂಜಿನಿಯರ್ ಎಂ.ಎ. ಪಠಾಣ ಅವರಿಗೆ ತಿಳಿಸಿದರು. ತಾಪಂ ಅಧ್ಯಕ್ಷೆ ವಿಜಯಾ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts