More

    ಲಘು ವಾಹನಗಳಿಗೆ ಅವಕಾಶ ನೀಡಿ

    ಕುಮಟಾ: ರಸ್ತೆ ಕಾಮಗಾರಿ ನಿಮಿತ್ತ ಕುಮಟಾ- ಶಿರಸಿ ಮಾರ್ಗದಲ್ಲಿ 18 ತಿಂಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸದೇ ಲಘು ವಾಹನಗಳ ಓಡಾಡಕ್ಕೆ ಅವಕಾಶ ನೀಡಬೇಕು. ದೇವಿಮನೆ- ಬಂಡಲ ಘಟ್ಟದ ಪ್ರದೇಶದಲ್ಲಿ ದೊಡ್ಡ ಸೇತುವೆ ಕಾಮಗಾರಿಯ ಸಂದರ್ಭದಲ್ಲಿ ಮಾತ್ರ ವಾಹನ ಸಂಚಾರ ನಿಷೇಧಿಸಬಹುದು ಎಂದು ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ತಿಳಿಸಿದರು.

    ಕುಮಟಾ- ಶಿರಸಿ ರಸ್ತೆ ಮೇಲ್ದರ್ಜೆ ಕಾಮಗಾರಿ ಕುರಿತು ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಕುಮಟಾ- ಶಿರಸಿ ರಸ್ತೆ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಲಘು ವಾಹನಕ್ಕೂ ವರ್ಷಾನುಗಟ್ಟಲೇ ಬಂದ್ ಮಾಡಲು ಸಾಧ್ಯವಿಲ್ಲ. ಈಗಾಗಲೇ ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಘಟ್ಟದ ಪ್ರದೆಶ ಹೊರತು ಪಡಿಸಿ ಇತರ ಭಾಗದಲ್ಲಿ ಕಾಮಗಾರಿ ನಡೆಯುವಾಗ ರಸ್ತೆಯ ಒಂದು ಬದಿಯಲ್ಲಿ ಲಘು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

    ಪರ್ಯಾಯ ಮಾರ್ಗದ ಚಿಂತನೆ ನಡೆಸಿದ ಅವರು, ಕುಮಟಾದಿಂದ ಯಾಣ ರಸ್ತೆಯ ಮೂಲಕ ಶಿರಸಿಗೆ ಸಂಪರ್ಕ ಕಲ್ಪಿಸುವುದು ಸಾಧ್ಯವಿದೆ. ಇಲ್ಲಿ ಒಳ ಮಾರ್ಗವನ್ನು ಸ್ವಲ್ಪ ದುರಸ್ತಿ ಮಾಡಿದರೆ ಲಘು ವಾಹನಗಳಿಗೆ ಎಲ್ಲ ಕಾಲದಲ್ಲೂ ಕುಮಟಾ- ಶಿರಸಿ ನಡುವೆ ಉತ್ತಮ ಸಂಪರ್ಕ ರಸ್ತೆಯಾಗಲಿದೆ. ಈ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸೋಣ ಎಂದು ರೈ ಅಧಿಕಾರಿಗಳಿಗೆ ಸೂಚಿಸಿದರು.

    ಗುತ್ತಿಗೆದಾರ, ಆರ್. ಎನ್ ಶೆಟ್ಟಿ ಕಂಪನಿಯ ಎಜಿಎಂ ಗೋವಿಂದ ಭಟ್ ಮಾತನಾಡಿ, ಸದ್ಯದಲ್ಲೇ ರಸ್ತೆ ಕಾಮಗಾರಿಯನ್ನು ಶಿರಸಿ ಕಡೆಯಿಂದ ಆರಂಭಿಸುತ್ತಿದ್ದೇವೆ. ಮೊದಲಿಗೆ ಮರಗಳ ಕಟಾವು ನಡೆಯಲಿದ್ದು, ಈ ವೇಳೆ ಸಂಚಾರ ನಿಭಾಯಿಸುವುದು ಕಷ್ಟ. ಕೆಲವೆಡೆ ವಾಹನ ಸಂಚಾರ ನಿಲ್ಲಿಸಬೇಕಾಗಬಹುದು ಎಂದರು.

    ಅಜಿತ್ ರೈ ಪ್ರತಿಕ್ರಿಯಿಸಿ, ಮರ ಕಟಾವಿಗಾಗಿ ಸಂಚಾರ ಬಂದ್ ಅಗತ್ಯವಿಲ್ಲ. ಕಾಮಗಾರಿಯ ಯಾವುದೇ ಸಂದರ್ಭದಲ್ಲಿ ಲಘುವಾಹನ ಸಂಚಾರವನ್ನೂ ನಿಲ್ಲಿಸಬೇಕಾಗಿದ್ದರೆ ಗುತ್ತಿಗೆದಾರರು ಹಾಗೂ ಹೆದ್ದಾರಿ ಪ್ರಾಧಿಕಾರದವರು ಮೊದಲೇ ತಿಳಿಸಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ ಲಘುವಾಹನ ಸಂಚಾರ ಸಾಧ್ಯವೇ ಇಲ್ಲವೆಂದಾದಲ್ಲಿ ಮಾತ್ರ ಕಾಮಗಾರಿ ನಡೆಯುವಷ್ಟು ಭಾಗದ ರಸ್ತೆ ಬಂದ್ ಮಾಡಿ ಪ್ರಕಟಣೆ ನೀಡುತ್ತೇವೆ ಎಂದರು.

    ಶಿರಸಿಯಿಂದ 5 ಕಿಮೀ ದೂರದ ಹನುಮಂತಿ ಬಳಿ ಟೋಲ್​ನಾಕಾ ನಿರ್ವಿುಸಲಾಗುತ್ತದೆ ಎಂಬ ವಿಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ತಾಂತ್ರಿಕ ಅಧಿಕಾರಿ ಕಿರಣ್ ಹುಬ್ಬಣ್ಣವರ ತಿಳಿಸಿದರು. ಸಭೆಯಲ್ಲಿ ತಾಪಂ ಇಒ ಸಿ.ಟಿ.ನಾಯ್ಕ, ಪಿಎಸ್​ಐ ಆನಂದಮೂರ್ತಿ, ಪಿಡಬ್ಲು್ಯಡಿ ಇಂಜಿನಿಯರ್ ರಾಜು ಶಾನಭಾಗ, ಜಿಪಂ ಇಂಜಿನಿಯರ್ ರಾಮದಾಸ ಗುನಗಿ ಇದ್ದರು.

    ನಮಗೆ ಜವಾಬ್ದಾರಿ ವಹಿಸಿ..!
    ಕಾಮಗಾರಿಯ ಸರ್ವೆ ಹಾಗೂ ಪರ್ಯಾಯ ಮಾರ್ಗದ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ತಾಂತ್ರಿಕ ಅಧಿಕಾರಿ ಕಿರಣ್ ಹುಬ್ಬಣ್ಣವರ ಸರಿಯಾಗಿ ಉತ್ತರಿಸಲಿಲ್ಲ. ಶಿರಸಿಯಿಂದ ಪರ್ಯಾಯ ಮಾರ್ಗದಲ್ಲಿ ಕುಮಟಾಕ್ಕೆ ಅಂತರವೆಷ್ಟು ಎಂದು ಕೇಳಿದರೆ ಮೊಬೈಲ್​ನಲ್ಲಿ ಹುಡುಕುತ್ತ ತಡಬಡಾಯಿಸಿದರು. ಇದರಿಂದ ಬೇಸರಗೊಂಡ ಅಜಿತ್ ರೈ, ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಕೆಟ್ಟ ಕಾರ್ಯವೈಖರಿಯನ್ನು ಕಂಡಿದ್ದೇವೆ. ಯೋಜನಾಬದ್ಧವಾಗಿ ಕೆಲಸ ಮಾಡದೇ ಕಣ್ಣೆದುರಿಗೆ ಇರುವ ಲೋಪದೋಷಗಳನ್ನು ಕಡೆಗಣಿಸಿದ್ದರಿಂದ ನಿರಂತರವಾಗಿ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದೇವೆ. ಕಾಮಗಾರಿಯಲ್ಲಿ ಗಂಭೀರ ಲೋಪಗಳಾದರೂ ಗುತ್ತಿಗೆ ಕಂಪನಿಗೆ ಒಂದು ನೋಟಿಸ್ ಕೊಟ್ಟಿಲ್ಲ. ಇದೇ ರೀತಿ ಕುಮಟಾ-ಶಿರಸಿ ರಸ್ತೆಯನ್ನೂ ಮಾಡಬೇಡಿ, ಗುತ್ತಿಗೆದಾರರಿಂದ ಸರಿಯಾಗಿ ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡಿಸಿ. ನಿಮ್ಮಿಂದ ಆಗದಿದ್ದರೆ ನಮಗೆ ಜವಾಬ್ದಾರಿ ವಹಿಸಿ, ನಾವು ಸರಿಯಾಗಿ ಮಾಡಿಸುತ್ತೇವೆ ಎಂದು ಖಡಕ್ಕಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts