More

    ಲಕ್ಷ್ಮೇಶ್ವರದಲ್ಲಿ ವ್ಯಾಪಕ ಬೆಂಬಲ

    ಲಕ್ಷ್ಮೇಶ್ವರ: ಭಾನುವಾರ ದೇಶಾದ್ಯಂತ ಎಲ್ಲ ಜನರೂ ಸ್ವಯಂಪ್ರೇರಿತವಾಗಿ ಕರ್ಪ್ಯೂ ವಿಧಿಸಿಕೊಂಡು ಮನೆಯಲ್ಲಿಯೇ ಇರುವ ಸಂಕಲ್ಪ ಮಾಡಬೇಕೆಂದು ಪ್ರಧಾನಿ ಮಾಡಿದ ಮನವಿಗೆ ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

    ಭಾನುವಾರ ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಇಡೀ ದೇಶವೇ ಸ್ತಬ್ಧಗೊಳ್ಳಲಿದೆ ಎಂಬ ಬಗ್ಗೆ ಮೊದಲೇ ಮಾಹಿತಿ ಇದ್ದ ಜನರು ಶನಿವಾರ ರಾತ್ರಿಯವರೆಗೂ ಅವಶ್ಯಕ ವಸ್ತುಗಳನ್ನು ಖರೀದಿಸಿ ಮಾನಸಿಕವಾಗಿ ಸಿದ್ಧವಾಗಿದ್ದರು. ಪೇಪರ್, ಹಾಲು ಹಾಕುವವರು ಮಾತ್ರ ತಮ್ಮ ಕರ್ತವ್ಯ ನಿರ್ವಹಿಸಿದ್ದನ್ನು ಬಿಟ್ಟರೆ ವಾಯುವಿಹಾರಕ್ಕೆ ಹೋಗುವವರೂ ಹೊರ ಬಂದಿರಲಿಲ್ಲ. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ದೂರದೂರುಗಳಿಂದ ರಾತ್ರಿಯೇ ಬಂದು ಬಸ್ ನಿಲ್ದಾಣದಲ್ಲಿ ತಂಗಿದ್ದ ಕೆಲವೇ ಜನ ಪ್ರಯಾಣಿಕರು ಪರಿಸ್ಥಿತಿಯನ್ನರಿತು ಸ್ವಂತದ, ಸಂಬಂಧಿಕರ ಕಾರು, ಬೈಕ್ ಕರೆಯಿಸಿಕೊಂಡು ತಮ್ಮ ಗೂಡು ಸೇರಿಕೊಂಡರು.

    ಬೀದಿ ಬದಿ ವ್ಯಾಪಾರ ನಾಲ್ಕೈದು ದಿನ ಮೊದಲೇ ಬಂದ್ ಆಗಿದ್ದು ಭಾನುವಾರ ಒಂದು ಸಣ್ಣ ಗೂಡಂಗಡಿಯೂ ಬಾಗಿಲು ತೆರೆದಿರಲಿಲ್ಲ. ಪರಿಸ್ಥಿತಿ ಏನಿದೆ ಎಂಬುದನ್ನು ನೋಡುವ ಕುತೂಹಲದಿಂದ ಹೊರ ಬಂದಿದ್ದ ಕೆಲವರು ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ, ಮುಖ್ಯ ರಸ್ತೆಗಳು, ದೇವಸ್ಥಾನ, ಮಸೀದಿ, ಪೆಟ್ರೋಲ್ ಬಂಕ್ ಎಲ್ಲವನ್ನೂ ಕಂಡು ಸಹವಾಸವೇ ಬೇಡ ಎಂದು ಮನೆ ಸೇರಿದರು.

    ಸೋಮೇಶ್ವರ ದೇವಸ್ಥಾನಕ್ಕೆ ಭಕ್ತರು ಬರದಂತೆ ಮುಖ್ಯ ದ್ವಾರ ಬಂದ್ ಮಾಡಿದ ಅರ್ಚಕ ಕರೊನಾ ವೈರಸ್ ನಿಗ್ರಹ, ಜನರ ಆರೋಗ್ಯ ವೃದ್ಧಿ ಮತ್ತು ಲೋಕ ಕಲ್ಯಾಣಕ್ಕಾಗಿ ಏಕಾದಶಿ ರುದ್ರಪಠಣ ವಿಶೇಷ ಪೂಜೆ ಮಾಡಲಾಯಿತು. ಶಿಗ್ಲಿ, ಸೂರಣಗಿ, ಬಾಲೇಹೊಸೂರ, ಅಡರಕಟ್ಟಿ, ಬಟ್ಟೂರ, ಗೊಜನೂರ, ಯಳವತ್ತಿ, ರಾಮಗೇರಿ ಸೇರಿ ಎಲ್ಲ ಹಳ್ಳಿಗಳಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿತು.

    ಸಂಜೆ 5 ಗಂಟೆಗೆ ಸಾಮಾಜಿಕ ಕಳಕಳಿಯ ಕಾರ್ಯ ಮಾಡಿದ ವೈದ್ಯರು, ಕಾರ್ವಿುಕರು, ಪೊಲೀಸರು, ಮಾಧ್ಯಮದವರು, ರೈತರು, ಸೈನಿಕರು, ಅಧಿಕಾರಿಗಳಿಗೆ ಮನೆಯಲ್ಲಿದ್ದ ಜನತೆ ಹೊರ ಬಂದು ಸಾಮೂಹಿಕ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.

    ಜನತಾ ಕರ್ಪ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ವ್ಯಾಪಾರಸ್ಥರು, ರೈತರು, ಪೊಲೀಸರು, ಸಾರಿಗೆ, ಪ್ರಯಾಣಿಕರು, ಮಹಿಳೆಯರು, ಮಕ್ಕಳು ಸೇರಿ ಸಹಕಾರ ನೀಡಿದ ಎಲ್ಲರ ಬೆಂಬಲಕ್ಕೆ ಧನ್ಯವಾದಗಳು. | ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್ ಲಕ್ಷ್ಮೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts