More

    ಲಕ್ಷ್ಮೇಶ್ವರ ಪುರಸಭೆಗೆ ಗ್ರಹಣ

    ಲಕ್ಷ್ಮೇಶ್ವರ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಜರುಗಿ ಒಂದೂವರೆ ವರ್ಷ ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಆಯ್ಕೆಯಾದ ಸದಸ್ಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ.

    ಪಟ್ಟಣದ ಪುರಸಭೆಗೆ 2018, ಆ.31ರಂದು ಚುನಾವಣೆ ನಡೆದು ಸೆಪ್ಟೆಂಬರ್ 3ರಂದು ಸದಸ್ಯರು ಆಯ್ಕೆಯಾಗಿದ್ದರೂ ಇದುವರೆಗೂ ಅವರಿಗೆ ಅಧಿಕಾರ ಸಿಗದೆ ಕೈಕಟ್ಟಿ ಕುಳಿತುಕೊಂಡಿದ್ದಾರೆ. ಒಟ್ಟು 23 ಸದಸ್ಯರ ಬಲ ಇರುವ ಪುರಸಭೆಗೆ ಗ್ರಹಣ ಹಿಡಿದಂತಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.

    ಲಕ್ಷ್ಮೇಶ್ವರ ಪುರಸಭೆ ಸದಸ್ಯರ ಬಲಾಬಲ: ಪುರಸಭೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-9, ಬಿಜೆಪಿ-7, ಜೆಡಿಎಸ್-2 ಮತ್ತು ಪಕ್ಷೇತರ 5 ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದೆ ಅತಂತ್ರ ಸ್ಥಿತಿಯಿದೆ. ಪಕ್ಷೇತರರ ಬೆಂಬಲ ನಿರ್ಣಾಯಕ ಆಗಿರುವುದರಿಂದ, ಆಯ್ಕೆಯಾದ ಪ್ರಾರಂಭದಲ್ಲಿ ಪಕ್ಷೇತರರು ಅತ್ತಿಂದಿತ್ತ- ಇತ್ತಿಂದತ್ತ ಓಡಾಡಿದ್ದರು. ಹಳೆಯ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ಬ ವರ್ಗದ ಮಹಿಳೆಗೆ ಮೀಸಲಾಗಿದೆ.

    ಆಯ್ಕೆಯಾದ ವಾರ್ಡ್​ನ ಸದಸ್ಯರಿಗೆ ಯಾವುದೇ ಅಧಿಕಾರ ಇಲ್ಲವಾದ್ದರಿಂದ ಅವರು ನಾಮ್ಾವಾಸ್ತೆ ಎನ್ನುವಂತಾಗಿದ್ದಾರೆ. ಅಧಿಕಾರದ ಅಸ್ತ್ರ ಇಲ್ಲದ್ದರಿಂದ ವಾರ್ಡ್​ನ ಮತದಾರರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸದಸ್ಯರು ಅಸಹಾಯಕತೆ ತೋರುತ್ತಿದ್ದಾರೆ. ಕಳೆದ 2 ವರ್ಷದಿಂದ ಸಾಮಾನ್ಯ ಸಭೆಗಳು ಜರುಗದೆ, ಬಜೆಟ್ ಮಂಡನೆಯಾಗದೆ, ಜನಸಾಮಾನ್ಯರ ಅಹವಾಲುಗಳು ಕಸದ ಬುಟ್ಟಿಗೆ ಸೇರಿವೆ. ಮುಖ್ಯವಾಗಿ ಪುರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ವಣಕ್ಕೆ ಅನುಮತಿ ಸಿಗದೆ ಜನತೆ ಪರದಾಡುತ್ತಿದ್ದಾರೆ. ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಸ್ಥಗಿತಗೊಂಡಿದೆ. ಆಡಳಿತ ಮಂಡಳಿ ಇದ್ದರೆ ಕಾನೂನಾತ್ಮಕ ಸಮಸ್ಯೆಗಳಿಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು, ಜನಸಾಮಾನ್ಯರ ಸಮಸ್ಯೆ ಈಡೇರಿಸಬಹುದಾಗಿದೆ ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಬಹುದಾಗಿದೆ. ಆದರೆ, ಆಗಾಗ್ಗೆ ವರ್ಗಾವಣೆಗೊಂಡು ಬಂದು ಹೋಗುವ ಅಧಿಕಾರಿಗಳು ಯಾವುದಕ್ಕೂ ಗಮನ ನೀಡದೆ ಕಾಟಾಚಾರಕ್ಕೆಂಬಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಚುನಾಯಿತ ಸದಸ್ಯರ ಆರೋಪವಾಗಿದೆ.

    ಇನ್ನಾದರೂ ಸಮಸ್ಯೆ ಬಗೆಹರಿದೀತೆೆ?: ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ತನ್ನ ಅಧಿಕಾರದ ಅಸ್ತಿತ್ವಕ್ಕಾಗಿಯೇ ವರ್ಷ ಕಳೆದಿದೆ. ಈಗ ಸಚಿವ ಸಂಪುಟ ವಿಸ್ತರಣೆಯಾಗಿ ಸಂಬಂಧಪಟ್ಟ ಪೌರಾಡಳಿತ ಇಲಾಖೆಗೂ ಹೊಸ ಸಚಿವರು ನೇಮಕವಾಗಿದ್ದಾರೆ. ಇನ್ನಾದರೂ ಒಂದೂವರೆ ವರ್ಷದಿಂದ ನಿಂತು ನೀರಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಹಿಡಿದ ಗ್ರಹಣ ಬಿಡಿಸುವಲ್ಲಿ ಸರ್ಕಾರ ಚಿತ್ತ ಹರಿಸಬೇಕಾಗಿದೆ. ಮೀಸಲಾತಿ ಗೊಂದಲವನ್ನು ಕಾನೂನಾತ್ಮಕವಾಗಿ ಬಗೆಹರಿಸಿದರೆ ಮಾತ್ರ ಸ್ಥಳೀಯ ಸಂಸ್ಥೆಗಳ ಆಡಳಿತವಿರುವ ಪ್ರದೇಶಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದು ಜನರ ಮತ್ತು ಜನಪ್ರತಿನಿಧಿಗಳ ಒತ್ತಾಸೆಯಾಗಿದೆ.

    ಹೊಸ ಅಧಿಸೂಚನೆಗೆ ವಿಳಂಬ: ಚುನಾವಣೆ ಫಲಿತಾಂಶ ಪ್ರಕಟವಾದ 2018 ಸೆ.3 ರಂದೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಹೊರಬಿದ್ದಿತ್ತು. ಅಂದೇ ಈ ಮೀಸಲಾತಿ ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಮುಂದೆ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ಸರ್ಕಾರ ಮರು ಮೀಸಲಾತಿ ನಿಗದಿಪಡಿಸಿ 2019 ನ.7 ರೊಳಗಾಗಿ ಹೊಸ ಅಧಿಸೂಚನೆ ಹೊರಡಿಸುವುದಾಗಿ ಕೋರ್ಟ್​ಗೆ ತಿಳಿಸಿತ್ತು. ಆದರೆ, ಸರ್ಕಾರ ಈ ಕುರಿತು ಹೊಸ ಅಧಿಸೂಚನೆ ಹೊರಡಿಸದೆ ವಿಳಂಬ ಮಾಡುತ್ತಿರುವುದು ಅತಂತ್ರ ಸ್ಥಿತಿಗೆ ಕಾರಣವಾಗಿದೆ.

    ಮೀಸಲಾತಿ ಗೊಂದಲ ಬಗೆಹರಿಸುವಲ್ಲಿ ಸರ್ಕಾರ ಗಮನಹರಿಸದ್ದರಿಂದ ವರ್ಷಗಳು ಕಳೆದರೂ ಪುರಸಭೆ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿಯುವಂತಾಗಿದೆ. ಚುನಾಯಿತ ಪ್ರತಿನಿಧಿಗಳು ಹೆಸರಿಗೆ ಮಾತ್ರ ಎನ್ನುವಂತಾಗಿ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಅಖಂಡ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಮತ್ತು ಪೌರಾಡಳಿತ ಸಚಿವರ ಭೇಟಿಗೆ ತೆರಳಲಿದ್ದೇವೆ.

    | ಮಹೇಶ ಹೊಗೆಸೊಪ್ಪಿನ, ಪುರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts