More

    ರೈತರ ಅಂತರಾಳ ಅರಿಯದ ಸರ್ಕಾರ

    ನರಗುಂದ: ಬಾರದ ನೀರಿಗೆ ಕಂದಾಯ ವಿಧಿಸಿದ ಸರ್ಕಾರದ ವಿರುದ್ಧ ರೈತರು 1980ರಲ್ಲಿ ಉಗ್ರ ಹೋರಾಟ ಮಾಡಿದ್ದಕ್ಕಾಗಿ ನರಗುಂದಕ್ಕೆ ಬಂಡಾಯದ ನಾಡು ಎಂದು ಹೆಸರು ಬರುವಂತಾಯಿತು. ಆದರೆ, ಸರ್ಕಾರಗಳು ಮಾತ್ರ ಇದುವರೆಗೂ ರೈತರ ಅಂತರಾಳದ ಕೂಗು ಏನಾಗಿತ್ತು ಎಂಬುದರ ಕುರಿತು ಅರಿತುಕೊಂಡಿಲ್ಲ. ಇದು ಈ ಭಾಗದ ರೈತರ ದುರ್ದೈವ ಎಂದು ಪತ್ರಿವನಮಠದ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ವಿಷಾದ ವ್ಯಕ್ತಪಡಿಸಿದರು.

    ಪಟ್ಟಣದ ರೇಣುಕಾ ಚಿತ್ರಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಐತಿಹಾಸಿಕ ನರಗುಂದ ಬಂಡಾಯ ಚಲನಚಿತ್ರ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    1980 ಜುಲೈ 21 ರಂದು ಸರ್ಕಾರದ ವಿರುದ್ಧ ನರಗುಂದ ಪಟ್ಟಣದಲ್ಲಿ ದುರ್ಘಟನೆ ಒಂದು ನಡೆದು ಹೋಗಿದೆ. ಈ ಇತಿಹಾಸ ಅಳಿಸಿ ಹೋಗದಂತೆ, ಅಂದು ರೈತರ ನೈಜ ಬೇಡಿಕೆ ಏನಾಗಿತ್ತು? ಸರ್ಕಾರ ಮತ್ತು ಆಡಳಿತ ನಡೆಸುವ ಅಧಿಕಾರಿಗಳ ಕಾರ್ಯಭಾರ ಹೇಗಿತ್ತು ಎಂಬುದರ ಕುರಿತು ಸಿದ್ದೇಶ ವಿರಕ್ತಮಠ ಅವರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನರಗುಂದ ಬಂಡಾಯದ ಚಲನಚಿತ್ರ ನಿರ್ವಿುಸಿದ್ದಾರೆ. ಅದರಂತೆಯೇ ಕಳೆದ ಐದು ವರ್ಷಗಳಿಂದ ನರಗುಂದ ಭಾಗದಲ್ಲಿ ಮಹದಾಯಿ ನದಿ ನೀರಿಗಾಗಿ ರೈತರು ನಿರಂತರ ಹೋರಾಟ ಮಾಡಿದ್ದರಿಂದಾಗಿ ಈ ಮಹತ್ವದ ಯೋಜನೆಗೆ ಇದೀಗ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ರಾಜ್ಯ ಸರ್ಕಾರ ಈ ಯೋಜನೆಗೆ 500 ಕೋಟಿ ರೂ. ಅನುದಾನ ನೀಡಿದ್ದು, ಇನ್ನುಳಿದ ವಿವಿಧ ಬೇಡಿಕೆಗಳಿಗೆ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

    ಡಿವೈಎಸ್ಪಿ ಶಿವಾನಂದ ಕಟಗಿ ಮಾತನಾಡಿ, 40 ವರ್ಷಗಳ ಹಿಂದೆ ಸರ್ಕಾರ, ತಹಸೀಲ್ದಾರ್ ಹಾಗೂ ಪೊಲೀಸರ ವಿರುದ್ಧ ರೈತರು ನಡೆಸಿದ ಹೋರಾಟ ಅತ್ಯಂತ ಘನಘೊರ ಆಗಿತ್ತು. ಇದೀಗ ನರಗುಂದದಲ್ಲಿ ಅದೇ ಮಾದರಿಯಲ್ಲಿ ರೈತರು ಕಳೆದ 5 ವರ್ಷಗಳಿಂದ ಮಹದಾಯಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಪೊಲೀಸರು ಈ ಹೋರಾಟಕ್ಕೆ ಸಾಕಷ್ಟು ಸಹಕಾರ ನೀಡಿದ್ದರಿಂದ ರೈತರ ಹೋರಾಟಕ್ಕೆ ಜಯ ದೊರೆತಂತಾಗಿದೆ ಎಂದರು.

    ಸಿಪಿಐ ಡಿ.ಬಿ. ಪಾಟೀಲ, ಕಳಸಾ-ಬಂಡೂರಿ ಕೇಂದ್ರ ಯುವ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಮಾತನಾಡಿದರು. ವಿಜಯ ಕೋತಿನ, ರವಿ ಚಿಂತಾಲ, ಕೃಷ್ಣಾ ಗೊಂಬಿ, ಗೂಳಪ್ಪ ಕಡ್ಲಿಕೊಪ್ಪ, ಚನ್ನು ನಂದಿ, ರಾಘವೇಂದ್ರ ಗುಜಮಾಗಡಿ, ಶ್ರೀಪಾದ ಆನೇಗುಂದಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts