More

    ರೈತರಿಗೆ ಹರ್ಷ ತಂದ ಮುಂಗಾರು

    ಮೂಡಲಗಿ: ಕರೊನಾ ಮಹಾಮಾರಿ ಆರ್ಭಟದಿಂದ ಕೆಂಗೆಟ್ಟಿದ್ದ ಮೂಡಲಗಿ ತಾಲೂಕಿನ ರೈತರನ್ನು ವಾರದಿಂದ ಸುರಿಯುತ್ತಿರುವ ಮೃಗಶಿರ ಮಳೆ ಹೊಲದೆಡೆಗೆ ಮುಖ ಮಾಡುವಂತೆ ಮಾಡಿದೆ. ಮುಂಗಾರು ಹಂಗಾಮಿನ ಬಿತ್ತನೆಗಾಗಿ ಮಳೆ ನಿರೀಕ್ಷೆಯಲ್ಲಿದ್ದ ರೈತರು ಇದೀಗ ಹದಗೊಳಿಸಿಟ್ಟ ಭೂಮಿಯಲ್ಲಿ ಬಿತ್ತನೆ ಮಾಡುತ್ತಿದ್ದಾರೆ.

    ಮೂಡಲಗಿ ತಾಲೂಕಿನಲ್ಲಿ ವಾರದಿಂದ ಜಿಟಿಜಿಟಿ ಸುರಿಯುತ್ತಿರುವ ಮಳೆ ಭೂಮಿಯನ್ನು ಸಾಕಷ್ಟು ತೇವಗೊಳಿಸಿದೆ. ಇದರಿಂದ ಭೂಮಿ ಹದಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ಈಗಾಗಲೇ ರೈತರು ಬೀಜ, ಗೊಬ್ಬರ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಮುಂಗಾರು ಆರಂಭದಲ್ಲಿ ರೋಹಿಣಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಮತ್ತೆ ಬರ ಭೀತಿಯಲ್ಲಿ ಆಕಾಶದತ್ತ ದೃಷ್ಟಿ ನೆಟ್ಟು ನೋಡುತ್ತಿದ್ದ ರೈತರು, ಬಿಟ್ಟೂ ಬಿಡದೇ ಸುರಿಯುತ್ತಿರುವ ಮೃಗಶಿರ ಮಳೆಯಿಂದ ಭೂತಾಯಿಗೆ ಪೂಜೆ ಸಲ್ಲಿಸಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ದೊಡ್ಡ ರೈತರು ಅತ್ಯಾಧುನಿಕ ಯಂತ್ರೋಪಕರಣ ಬಳಕೆ ಮಾಡಿ ಬಿತ್ತನೆ ಮಾಡಿದರೆ, ಸಣ್ಣ ಹಿಡುವಳಿದಾರರು ಉಳುಮೆಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಎತ್ತುಗಳನ್ನು ಬಳಸುತ್ತಾರೆ.

    ತಾಲೂಕಿನ್ಯಾದ್ಯಂತ ಅರಿಶಿಣ, ಗೋವಿನ ಜೋಳ, ಕಬ್ಬು, ಸೋಯಾಬೀನ್, ಶೇಂಗಾ, ಹೆಸರು, ಹತ್ತಿ, ಸಜ್ಜಿ ಬಿತ್ತನೆ ಮಾಡಲಾಗುತ್ತಿದೆ. ತಿಂಗಳ ಹಿಂದೆ ಮಳೆ ಇಲ್ಲದ್ದರಿಂದ ಅರಿಶಿಣ ಬೀಜ ಮಾರಾಟಗಾರರು ಚಿಂತಿತರಾಗಿದ್ದರು. ಈಗ ಉತ್ತಮ ಮಳೆ ಸುರಿಯುತ್ತಿರುವುದರಿಂದ ರೈತರು ಅರಿಶಿಣ ಖರೀದಿಗೆ ಧಾವಿಸುತ್ತಿದ್ದಾರೆ. ಇದರಿಂದ ಅರಿಶಿಣ ಬೀಜ ಮಾರಾಟಗಾರರಿಗೂ ಖುಷಿ ನೀಡಿದೆ.

    ಮುಂಗಾರು ಕಾಲಿಡುತ್ತಿದ್ದಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದೇವೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳೆದ ತರಕಾರಿ ಹಾಳಾದವು. ಸರ್ಕಾರ ಸಮರ್ಪಕ ಬೆಂಬಲ ಬೆಲೆ ನೀಡಬೇಕು.
    | ಗಿರಿಮಲ್ಲಪ್ಪ ನುಚ್ಚುಂಡಿ ರೈತ, ಹಳ್ಳೂರ

    ಮೇ ತಿಂಗಳಲ್ಲಿ ರೋಹಿಣಿ ಮಳೆ ಕಡಿಮೆ ಸುರಿದಿದ್ದರಿಂದ ಮುಂಗಾರು ಬಿತ್ತನೆಯನ್ನು ಜೂನ್ ತಿಂಗಳಲ್ಲಿ ಮಾಡುವಂತಾಗಿದೆ. ಮೃಗಶಿರ ಮಳೆ ಖುಷಿ ತಂದಿದೆ.
    | ಬಸವರಾಜ ಕೆ. ರೈತ, ಮೂಡಲಗಿ

    | ಮಲ್ಲು ಬೋಳನವರ ಮೂಡಲಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts