More

    ರೈತರಿಗೆ ಭತ್ತದ ಬೆಳೆ ಮಾಹಿತಿ

    ಮೂಡಿಗೆರೆ: ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಮಲೆನಾಡಿನ ರೈತರ ಮೊಗದಲ್ಲಿ ಸಂತಸ ಮೂಡಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಮುನೇಗೌಡ ತಿಳಿಸಿದ್ದಾರೆ.

    ತಾಲೂಕಿನ ಹೊರಟ್ಟಿ ಗ್ರಾಮದ ಭತ್ತದ ಗದ್ದೆಗೆ ಭೇಟಿ ನೀಡಿ ಕೃಷಿ ಚಟುವಟಿಕೆ ಬಗ್ಗೆ ರೈತರಿಗೆ ಮಾಹಿತಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜೂನ್‌ನಲ್ಲಿ ಮಳೆಯಾಗದೆ ರೈತರು ಆತಂಕ ಎದುರಿಸುವ ವಾತಾವರಣ ಸೃಷ್ಟಿಯಾಗಿತ್ತು. ಭತ್ತದ ಸಸಿ ಮಡಿ ತಯಾರಿಕಾ ಕಾರ್ಯವು ಕೂಡ ಕುಂಠಿತವಾಗಿತ್ತು. ಕಳೆದ 5 ದಿನದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದು ರೈತರಿಗೆ ವರದಾನವಾಗಿದೆ. ಭತ್ತದ ಸಸಿಮಡಿ ಕಾರ್ಯ ಚುರುಕುಗೊಂಡಿದೆ ಎಂದು ತಿಳಿಸಿದರು.
    ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಮಾತನಾಡಿ, ಈ ವರ್ಷ ತಾಲೂಕಿನಲ್ಲಿ ಒಟ್ಟು 3.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಗುರಿ ಹೊಂದಿದ್ದು ಪ್ರಸ್ತುತ ರೈತರು ಭೂಮಿ ಹದಗೊಳಿಸಿ ಸಸಿ ಮಾಡಿ ತಯಾರಿಕಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಾಲಿನಲ್ಲಿ ತಾಲೂಕಿನಾದ್ಯಂತ ಉತ್ತಮ ಭತ್ತದ ತಳಿಗಳಾದ ತುಂಗಾ, ಇಂಟಾನ್, ಬಾಂಗ್ಲಾ, ಐಆರ್ 64, ಕೆ.ಎಚ್.ಪಿ 13 ಸೇರಿ ಒಟ್ಟು 268 ಕ್ವಿಂಟಾಲ್ ಬಿತ್ತನೆ ಬೀಜ ಪೂರೈಕೆಯಾಗಿದೆ.
    ರೈತ ಸಂಪರ್ಕ ಕೇಂದ್ರಗಳ ಮೂಲಕ 210 ಕ್ವಿಂಟಾಲ್ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಈಗಾಗಲೆ ವಿತರಣೆ ಮಾಡಲಾಗಿದೆ. ಒಂದು ತಿಂಗಳ ಬಿಡುವಿನ ಬಳಿಕ ಮಳೆ ಆರಂಭಗೊಂಡಿದ್ದರಿಂದ ಮಲೆನಾಡಿಗೆ ಸೂಕ್ತವಾದ ಕಡಿಮೆ ಅವಧಿಯ ತಳಿಗಳು ಹಾಗೂ ಬೇಸಾಯ ಕ್ರಮಗಳ ತಾಂತ್ರಿಕತೆಗಳ ಬಗ್ಗೆ ರೈತರಿಗೆ ತಿಳಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
    ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತದ ಬೆಳೆಯನ್ನು ಅಧಿಸೂಚಿತ ಬೆಳೆಯನ್ನಾಗಿ ಘೋಷಿಸಿದ್ದು ತಾಲೂಕಿನ ರೈತರು ಆಗಸ್ಟ್ 16ರೊಳಗೆ ಸಂಬಂಧಪಟ್ಟ ಬ್ಯಾಂಕ್‌ಗಳಲ್ಲಿ ಅಥವಾ ಸಹಕಾರ ಸಂಘಗಳಲ್ಲಿ 1275 ರೂ. ವಿಮಾಕಂತನ್ನು ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಕೃಷಿ ಇಲಾಖೆ ಅಧಿಕಾರಿ ವೆಂಕಟೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts