More

    ರೈತನಿಗೆ ಅರಣ್ಯ ಇಲಾಖೆಯಿಂದ ಕಿರುಕುಳ

    ರಿಪ್ಪನ್​ಪೇಟೆ: ಬಾಳೂರು ಗ್ರಾಪಂ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದ ಸರ್ವೆ ನಂ.49ರಲ್ಲಿ ತಲೆತಲಾಂತರದಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಬಡ ರೈತ ಶಿವಮೂರ್ತಿ ಜಮೀನಿನ ಬೇಲಿ ಕೀಳುವ ಮೂಲಕ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಘಂಟೆ ದೇವರಾಜ ಗೌಡ ಆರೋಪಿಸಿದರು.

    ಹಾಲುಗುಡ್ಡೆ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ವೆ ನಂ.46ರಲ್ಲಿ ಶಿವಮೂರ್ತಿ ಕುಟುಂಬದ 2.20 ಎಕರೆ ಖಾತೆ ಜಮೀನಿದ್ದು, ಇದರ ತಲಕಟ್ಟಿನಲ್ಲಿರುವ ಹುಲ್ಲುಬನಿ ಪ್ರದೇಶದಲ್ಲಿ 60-70 ವರ್ಷಗಳಿಂದ ಜಾನುವಾರುಗಳ ಮೇವಿಗೆ 3 ಎಕರೆ ಪ್ರದೇಶದಷ್ಟು ಬ್ಯಾಣ ಹಾಗೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ನಮೂನೆ 50, 53 ಮತ್ತು 57ರಲ್ಲಿ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಹೊಸನಗರ ವಲಯ ಅರಣ್ಯ ಇಲಾಖೆಯವರು ದುರುದ್ದೇಶದಿಂದ ಕಲ್ಲು ಕಂಬದ ತಂತಿ ಬೇಲಿ ಕಿತ್ತು ಹಾಕಿದ್ದಾರೆಂದು ದೂರಿದರು.

    ಈ ಬಗ್ಗೆ ವಿಚಾರಿಸಿದರೆ ಜಾಗ ಅರಣ್ಯ ವ್ಯಾಪ್ತಿಗೆ ಸೇರುತ್ತದೆ ಎನ್ನುತ್ತಾರೆ. ಪಹಣಿ ದಾಖಲೆಯಲ್ಲಿ 386 ಎಕರೆ ಹುಲ್ಲುಬನಿ ಜಾಡು ಎಂದು ನಮೂದಾಗಿದೆ. ಈ ಪ್ರದೇಶದಲ್ಲಿ ನೂರಾರು ರೈತರು ಅನಾದಿಕಾಲದಿಂದಲೂ ಕೃಷಿ ಮಾಡಿಕೊಂಡು ಜೀವಿಸುತ್ತಿದ್ದಾರೆ. ಆದರೆ ರೈತರ ಮೇಲೆ ಪ್ರಹಾರ ಮಾಡುತ್ತಿರುವ ಅರಣ್ಯ ಇಲಾಖೆ ನಡೆ ಖಂಡನೀಯ. ಅರಣ್ಯ ಇಲಾಖೆ ವರ್ತನೆ ಹೀಗೆಯೇ ಮುಂದುವರಿದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.

    ಗುರುಪಾದಪ್ಪ, ವಿಶ್ವನಾಥ, ಆದರ್ಶ, ಹರೀಶ, ಕೃಷ್ಣಮೂರ್ತಿ ಇದ್ದರು.

    ಪ್ರಸ್ತುತ ಕುಟುಂಬ ನಿರ್ವಹಣೆಯೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಇಲಾಖೆಯವರು ನನಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ದಯವಿಟ್ಟು ನನ್ನ ಜಮೀನಿನ ಬೇಲಿ ಕೀಳದೆ ಜೀವನ ಸಾಗಿಸಲು ಅರಣ್ಯ ಇಲಾಖೆ ಅವಕಾಶ ಕಲ್ಪಿಸಲಿ.

    | ಶಿವಮೂರ್ತಿ, ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts