More

    ರೇಷ್ಮೆ ಮಾರುಕಟ್ಟೆಗೂ ಸೋಂಕು

    ಶಿರಹಟ್ಟಿ: ಕರೊನಾ ಬಿರುಗಾಳಿಗೆ ಸಿಲುಕಿ ಪಟ್ಟಣದ ರೇಷ್ಮೆ ಗೂಡು ಖರೀದಿ ಮಾರುಕಟ್ಟೆ ಹಾಗೂ ನೂಲು ಉತ್ಪಾದನೆ ಉದ್ಯಮ ತಲ್ಲಣಗೊಂಡಿದೆ.

    ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದ ರೇಷ್ಮೆ ಬೆಳೆಗಾರರು ತಾವು ಉತ್ಪಾದಿಸಿದ ರೇಷ್ಮೆ ಗೂಡಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಇಲ್ಲಿನ ರೇಷ್ಮೆ ಮಾರುಕಟ್ಟೆ ಹಾಗೂ ನೂಲು ಬಿಚ್ಚಣಿಕೆ ಕೇಂದ್ರಕ್ಕೆ ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ಹಾವೇರಿ, ಬಳ್ಳಾರಿ, ದಾವಣಗೆರೆ, ರಾಯಚೂರ, ಧಾರವಾಡ ಜಿಲ್ಲೆಗಳಿಂದ ರೈತರು ರೇಷ್ಮೆ ಗೂಡುಗಳನ್ನು ಮಾರಾಟಕ್ಕೆ ತರುತ್ತಾರೆ. ತಿಂಗಳಿಗೆ ಅಂದಾಜು 40 ಲಕ್ಷ ಟನ್ ಗೂಡು ವಹಿವಾಟು ನಡೆಯುತ್ತದೆ. ಇದರಿಂದ ಶುಲ್ಕ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಜಮೆಯಾಗುತ್ತದೆ. ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರವೂ ಇಲ್ಲಿರುವುದರಿಂದ ನಿತ್ಯ 50-60 ಕೂಲಿ ಕಾರ್ವಿುಕರು ನೂಲು ಬಿಚ್ಚಣಿಕೆ ಕಾರ್ಯದಲ್ಲಿ ತೊಡಗಿರುತ್ತಾರೆ.

    ಈ ಮೊದಲು ಉತ್ತಮ ಗೂಡಿಗೆ ಪ್ರತಿ ಕೆ.ಜಿ.ಗೆ 350ರಿಂದ 420 ರೂ.ವರೆಗೆ ನೀಡಲಾಗುತ್ತಿತ್ತು. ಇದರಿಂದಾಗಿ ಪ್ರತಿನಿತ್ಯ 3 ಟನ್​ವರೆಗೂ ಗೂಡು ಬರುತ್ತಿತ್ತು. ಆದರೆ, ಈಗ ಲಾಕ್ ಡೌನ್​ನಿಂದಾಗಿ ಮಾರುಕಟ್ಟೆ ತಲ್ಲಣಗೊಳಿಸಿದೆ. ವಿಶೇಷವಾಗಿ, ಇಲ್ಲಿಯ ಮಾರುಕಟ್ಟೆಗಿಂತ ಹೆಚ್ಚಿನ ದರ ಸಿಗುತ್ತದೆ ಎನ್ನುವ ಕಾರಣಕ್ಕೆ ಬೆಂಗಳೂರು, ರಾಮನಗರ, ಮೈಸೂರು ಮಾರುಕಟ್ಟೆಗೆ ರೇಷ್ಮೆ ಗೂಡು ಕೊಂಡೊಯ್ಯುತ್ತಿದ್ದ ರೈತರು ಕರೊನಾ ವೈರಸ್​ಗೆ ಹೆದರಿ ಶಿರಹಟ್ಟಿ ಮಾರುಕಟ್ಟೆ ಅವಲಂಬಿಸಿದ್ದಾರೆ. ಹೀಗಾಗಿ, ಸ್ಥಳೀಯ ರೀಲರ್ಸ್​ಗಳು ಮಾತ್ರ ಗೂಡು ಖರೀದಿಸುವಂತಾಗಿದ್ದು ದಿನೇದಿನೆ ಧಾರಣೆ ಇಳಿಯುತ್ತ ಸದ್ಯ ಪ್ರತಿ ಕೆ.ಜಿ. ಗೂಡಿಗೆ 170 ರಿಂದ 230 ರೂ. ಮಾತ್ರ ದರ ನಿಗದಿ ಮಾಡಲಾಗುತ್ತಿದೆ. ತಮ್ಮ ಗೂಡಿಗೆ ಯೋಗ್ಯ ದರ ನಿಗದಿ ಮಾಡದೇ ಮನಸೋ ಇಚ್ಛೆ ಖರೀದಿಸುವ ರೀಲರ್ಸ್​ಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪ್ರತಿ ಎಕರೆಯಲ್ಲಿ ರೇಷ್ಮೆಗೂಡು ಉತ್ಪಾದಿಸಲು ಎಲ್ಲ ಖರ್ಚು ವೆಚ್ಚ ಸೇರಿ 25 ಸಾವಿರ ರೂ. ತಗಲುತ್ತದೆ. ಸದ್ಯ ಮಾರುಕಟ್ಟೆಯಲಿ ದರ ಕುಸಿತದಿಂದಾಗಿ ಬೆಳೆಗೆ ಮಾಡಿರುವ ಖರ್ಚು ಕೂಡ ವಾಪಸ್ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಹೊಸಪೇಟೆಯ ರೈತ ಶಿವಪ್ಪ ರಾಮಸಾಗರ, ಕುಷ್ಟಗಿಯ ಜಯಪ್ಪ ವೈಲಾರ.

    ಸಿಬ್ಬಂದಿ ಕೊರತೆ: ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆ ಕಳೆದೊಂದು ವರ್ಷದಿಂದ ಸಿಬ್ಬಂದಿಯ ಕೊರತೆ ಅನುಭವಿಸುತ್ತಿದೆ. ಇದು ಮಾರುಕಟ್ಟೆಗೆ ಮಾರಕವಾಗಿ ಪರಿಣಮಿಸಿದೆ. ಈ ಸಂಗತಿ ರೇಷ್ಮೆ ಇಲಾಖೆ ಮೇಲಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಾರುಕಟ್ಟೆ ವಿಸ್ತೀರಣಾಧಿಕಾರಿ, ಪ್ರದರ್ಶಕ, ಪ್ರವರ್ತಕ ಮತ್ತು ನಿರೀಕ್ಷಕ ಸೇರಿ 4 ಹುದ್ದೆಗಳು ಖಾಲಿ ಇವೆ. ನಿವೃತ್ತಿ ಅಂಚಿನಲ್ಲಿರುವ ರವಿಕಾಂತ ಹುಲ್ಲಣ್ಣವರ ಎಂಬುವವರು ನಿರೀಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

    ಲಾಕ್ ಡೌನ್​ನಿಂದಾಗಿ ಮಾರುಕಟ್ಟೆ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೂರದ ಜಿಲ್ಲೆಗಳಿಂದ ರೈತರು ಬರುತ್ತಾರೆ ಎಂಬ ಕಾರಣಕ್ಕೆ ನಮಗೆಟುವ ದರದಲ್ಲಿ ಗೂಡು ಖರೀಸುತ್ತೇವೆ. ಟನ್​ಗಟ್ಟಲೆ ಖರೀದಿಸಿದ ಗೂಡೆಲ್ಲ (ನುರಿಸುವ) ಬಿಚ್ಚಣಿಕೆ ಮಾಡುವ ಸಾಮರ್ಥ್ಯ ಇಲ್ಲ. ಮತ್ತೊಂದೆಡೆ ಸಿದ್ಧಪಡಿಸಿದ ರೇಷ್ಮೆ ನೂಲು ರಾಯದುರ್ಗ, ರಾಮನಗರ, ಬೆಂಗಳೂರು ಮಾರುಕಟ್ಟೆಗೆ ಸಾಗಿಸಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಅಲ್ಲಿಯ ಮಾರುಕಟ್ಟೆ ಸ್ತಬ್ಧವಾಗಿವೆ. ಹೀಗಾಗಿ, ನಾವು ಖರೀದಿಗೆ ಎಷ್ಟಂತ ದುಡ್ಡು ಹಾಕೋಣ ಹೇಳ್ರಿ. ರೈತರಿಗೆ ಅನ್ಯಾಯ ಮಾಡುವ ಇಚ್ಛೆ ನಮಗಿಲ್ಲ. ಪರಿಸ್ಥಿತಿ ಹಾಗಿದೆ.
    | ಚಂದ್ರಕಾಂತ ಅಕ್ಕಿ, ರೀಲರ್ಸ್ ಸಂಘದ ಅಧ್ಯಕ್ಷ

    ಕಳೆದೊಂದು ವರ್ಷದಿಂದ ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆ ಬೆಳೆಗಾರ ರೈತರ ಸ್ಥಿತಿಗತಿ ಬಗ್ಗೆ ಸರ್ಕಾರ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಅಧಿಕಾರಿಗಳ ಅನಾದರದಿಂದಾಗಿ ಮಾರುಕಟ್ಟೆ ವ್ಯವಸ್ಥೆ ಹದಗೆಡಿಸಿದೆ. ಲಾಕ್ ಡೌನ್ ನೆಪದಲ್ಲಿ ಸದ್ಯದ ದರಕ್ಕೆ ಗೂಡು ಮಾರಿದರೆ ರೈತನ ಕೈಯಲ್ಲಿ ಚಿಪ್ಪು ಗ್ಯಾರಂಟಿ. ಒಲ್ಲದ ಮನಸ್ಸಿನಿಂದ ರೈತರು ಗೂಡು ಮಾರಿ ನಷ್ಟ ಅನುಭವಿಸುತ್ತಿದ್ದಾರೆ.
    | ಎಚ್.ಎಂ. ದೇವಗಿರಿ, ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ

    ಮಾರುಕಟ್ಟೆಯಲ್ಲಿ ಅಗತ್ಯ ಸಿಬ್ಬಂದಿಯ ಕೊರತೆಯಿದೆ. ಲಾಕ್ ಡೌನ್ ವ್ಯವಸ್ಥೆಯಿಂದ ಸ್ಥಳೀಯ ರೀಲರ್ಸ್​ಗಳು ದರ ನಿಗದಿ ಮಾಡಿ ಖರೀದಿಸುತ್ತಾರೆ. ಪರಿಸ್ಥಿತಿ ರೈತರಿಗೂ ಮನವರಿಕೆಯಾಗಿದೆ. ಅವರು ಉತ್ಪಾದಿಸಿದ ಗೂಡು ಇಡುವಂತಿಲ್ಲ, ಮಾಡಿದ ಖರ್ಚಾದರೂ ಬರಲಿ ಎಂದು ಮಾರಾಟ ಮಾಡುತ್ತಾರೆ.
    | ರವಿಕಾಂತ ಹುಲ್ಲಣ್ಣವರ, ಸ್ಥಳೀಯ ಮಾರುಕಟ್ಟೆ ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts