More

    ರೇಷ್ಮೆಗೂಡು ಸ್ಥಳಾಂತರ ಕ್ರಮಕ್ಕೆ ವಿರೋಧ : 20ರಂದು ರಾಮನಗರ ಬಂದ್

    ರಾಮನಗರ : ನಗರಸಭೆಯ ಜನವಿರೋಧಿ ನೀತಿ ಹಾಗೂ ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಸ್ಥಳಾಂತರಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ ಫೆ.20ರ ಶನಿವಾರ ಹಮ್ಮಿಕೊಂಡಿರುವ ಬಂದ್‌ಗೆ ನಗರ ಮತ್ತು ತಾಲೂಕಿನ ಜನತೆ ಬೆಂಬಲ ನೀಡಬೇಕು ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇಷಾದ್ರಿ ಮನವಿ ಮಾಡಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಯಲ್ಲಿ ಇ-ಖಾತೆ ಮಾಡುವ ವಿಚಾರದಲ್ಲಿ ಅಲ್ಲಿನ ಸಿಬ್ಬಂದಿ ಜನತೆಗೆ ತೊಂದರೆ ಕೊಡುತ್ತಿದ್ದಾರೆ.

    ಜತೆಗೆ, ಕುಡಿಯುವ ನೀರು, ಕಸ ವಿಲೇವಾರಿ ಸೇರಿ ಮೂಲಸೌಲಭ್ಯ ಒದಗಿಸುವಲ್ಲೂ ನಗರಸಭೆ ವಿಲವಾಗಿದೆ. ಇದನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಹಿಂದೆ ಬಿದ್ದಿದ್ದೇವೆ. ಇದೀಗ ಜನರ ಗೋಳು ಕೇಳುವವರೂ ಇಲ್ಲದಂತಾಗಿದ್ದು, ನಗರಸಭೆ ಆಡಳಿತವನ್ನು ಸ್ವಚ್ಛ ಮಾಡಬೇಕಾಗಿದೆ.

    ಈ ಹಿನ್ನೆಲೆಯಲ್ಲಿ ನಗರಸಭೆ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದು, ಹಲವು ಸಂಘ-ಸಂಸ್ಥೆಗಳು, ಪಕ್ಷಾತೀತವಾಗಿ ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದು, ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದ್‌ಗೆ ಸಹಕಾರ ನೀಡಬೇಕು. ನಗರಸಭೆ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು ಎಂದರು.

    ಕಾಂಗ್ರೆಸ್ ಮುಖಂಡ ಸಯದ್ ಜಿಯಾವುಲ್ಲಾ ಮಾತನಾಡಿ, ರಾಮನಗರದಲ್ಲಿ ಮಾರುಕಟ್ಟೆಯೇ ಇಲ್ಲವೆಂದಾದರೆ ನಗರದ ಇತಿಹಾಸವೇ ಇಲ್ಲದಂತಾಗುತ್ತದೆ. ಕಳೆದ ಚುನಾವಣೆಯಲ್ಲಿ ಮತ ಹಾಕಿಲ್ಲ ಎನ್ನುವ ಕಾರಣಕ್ಕೆ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲು ಹೊರಟಿದ್ದಾರೆ.

    ಒಂದು ವೇಳೆ ಮಾರುಕಟ್ಟೆ ನಿಂತು ಹೋದರೆ ರಾಮನಗರದ ಎಲ್ಲ ವಹಿವಾಟು ನಿಂತು ಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಮನಗರದ ಇತಿಹಾಸ ಉಳಿಯಬೇಕಾದರೆ ರೇಷ್ಮೆ ಮಾರುಕಟ್ಟೆ ಇಲ್ಲಿಯೇ ಉಳಿಯಬೇಕು ಎಂದು ಆಗ್ರಹಿಸಿದರು.

    ರೇಷ್ಮೆ ನಗರಿ ಖ್ಯಾತಿ ಉಳಿಸಿ: ರಾಮನಗರದಲ್ಲಿ ರೇಷ್ಮೆಗೂಡು ಮಾರುಕಟ್ಟೆಗೆ ಈ ಹಿಂದೆ 3.17 ಎಕರೆ ಜಾಗ ಗುರುತಿಸಲಾಗಿತ್ತು, ಇದಕ್ಕಾಗಿ ಕೋಟಿಗಟ್ಟಲೇ ಹಣವನ್ನೂ ಕಟ್ಟಲಾಗಿತ್ತು. ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ. ರಾಮನಗರದಲ್ಲಿಯೇ ಬೇರೆ ಸ್ಥಳಗಳಿದ್ದು ಅವುಗಳಲ್ಲಿ ಮಾರುಕಟ್ಟೆ ನಿರ್ಮಾಣವಾಗಬೇಕು.

    ಈ ಮೂಲಕ ರೇಷ್ಮೆ ನಗರಿ ಎನ್ನುವ ಖ್ಯಾತಿ ರಾಮನಗರಕ್ಕೆ ಉಳಿಯುವಂತೆ ಮಾಡಬೇಕು. ಜತೆಗೆ ಸಾವಿರಾರು ಮಂದಿಗೆ ಆಗುವ ತೊಂದರೆ ತಪ್ಪಿಸಬೇಕು ಎಂದು ರೀಲರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಮುಯೀಬ್ ಪಾಷಾ ಹೇಳಿದರು.ಮುಖಂಡರಾದ ಶೇಷಾದ್ರಿ ಅಯ್ಯರ್, ಗಿರಿಗೌಡ, ಶಿವಶಂಕರ್, ಪಾರ್ವತಮ್ಮ ಮುಂತಾದವರು ಇದ್ದರು.

    ಮಾರುಕಟ್ಟೆ ಇರಲ್ಲ : ಫೆ.20ರಂದು ಬಂದ್ ಹಿನ್ನೆಲೆಯಲ್ಲಿ ರೇಷ್ಮೆಗೂಡು ವಹಿವಾಟು ಇರುವುದಿಲ್ಲ. ಇಂದಿನಿಂದಲೇ ರೈತರಿಗೆ ಮತ್ತು ಅಧಿಕಾರಿಗಳಿಗೆ ಈ ವಿಷಯ ಮನವರಿಕೆ ಮಾಡಿಕೊಡುತ್ತೇವೆ ಎಂದು ಮುಯೀಬ್ ಪಾಷಾ ತಿಳಿಸಿದರು.

    ಎಚ್‌ಡಿಕೆ ಜಿದ್ದು : ರಾಮನಗರದಿಂದ ಚನ್ನಪಟ್ಟಣಕ್ಕೆ ಮಾರುಕಟ್ಟೆ ಶಿಫ್ಟ್ ಮಾಡುತ್ತಿರುವ ಸಂಬಂಧ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿದೆವು.

    ಅಧಿಕಾರಿಗಳ ಬಳಿ ಮಾತನಾಡುತ್ತೇನೆ ಎಂದರು. ನಂತರ ಮಾತನಾಡಿದರೆ ಚನ್ನಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವುದು ಸೂಕ್ತ ಎನ್ನುವ ರೀತಿಯಲ್ಲಿ ಎಚ್‌ಡಿಕೆ ಮಾತನಾಡುತ್ತಿದ್ದಾರೆ.

    ಕಳೆದ ಬಾರಿ ಜನತೆ ಮತ ಹಾಕಲಿಲ್ಲ ಎನ್ನುವ ಕಾರಣಕ್ಕೆ ಕುಮಾರಸ್ವಾಮಿ ಅವರು ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿದ್ದಾರೆ ಎಂದು ಮುಯೀಬ್ ಪಾಷಾ ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts