More

    ರೆಡ್ ಕ್ರಾಸ್… 24X7 ಸರ್ವೀಸ್..

    ಧಾರವಾಡ: ಕರೊನಾ ಸಂದರ್ಭದಲ್ಲಿ ನಗರದ ಜನರಿಗೆ ಅನೇಕ ಸಂಘ-ಸಂಸ್ಥೆಗಳು ಸಹಾಯ ಹಸ್ತ ಚಾಚುತ್ತಿವೆ. ಆದರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಾಯದ ಜತೆಗೆ ಜನರಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ವಿಶೇಷ.
    ರೆಡ್ ಕ್ರಾಸ್ ಜಿಲ್ಲಾ ಘಟಕಕ್ಕೆ ವಾರ್ಷಿಕ ಅನುದಾನವೇ ಅಲ್ಪ. ಆದರೆ, ಪದಾಧಿಕಾರಿಗಳು ಈ ಅನುದಾನ ನೆಚ್ಚದೆ ಜಿಲ್ಲಾಡಳಿತ, ಕಾರ್ವಿುಕ ಇಲಾಖೆ ಸಹಾಯದ ಜತೆಗೆ ಸ್ವಂತ ಹಣದಲ್ಲಿ ಜನರಿಗೆ ಆರೋಗ್ಯ ಸುರಕ್ಷತಾ ಕಿಟ್ ಜತೆಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ.
    ಜಿಲ್ಲೆಯಲ್ಲಿ ಕರೊನಾ ಆರ್ಭಟ ಶುರುವಾದ ದಿನದಿಂದ ಈ ಸಂಸ್ಥೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕಾರ್ವಿುಕರು, ಸ್ಲಂ ಜನ, ವ್ಯಾಪಾರಸ್ಥರು, ಪೊಲೀಸರು, ಆಶಾ ಕಾರ್ಯಕರ್ತೆಯರು, ನಿರಾಶ್ರಿತರು, ಸೌಕರ್ಯ ಇಲ್ಲದ ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಈ ಸಂಸ್ಥೆ, ಕರೊನಾ ವೈರಸ್ ಹರಡುವ ಬಗೆ, ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎಂಬ ಮಾಹಿತಿಯೊಂದಿಗೆ, ಇದರಿಂದ ಪಾರಾಗಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಸಮಗ್ರ ಮಾಹಿತಿಯ ಕರಪತ್ರಗಳನ್ನು ನೀಡಿ ಜಾಗೃತಿ ಮೂಡಿಸುತ್ತಿದೆ.
    ಕಳೆದ ವರ್ಷ ಲಾಕ್​ಡೌನ್​ನಲ್ಲಿ ಹು-ಧಾ ಅವಳಿನಗರದ 25 ಸಾವಿರ ಜನರಿಗೆ ಆಹಾರ ಧಾನ್ಯಗಳ ಕಿಟ್, 75 ಸಾವಿರ ಜನರಿಗೆ ಮಾಸ್ಕ್, ಸ್ಯಾನಿಟೈಸರ್​ಗಳನ್ನು ವಿತರಿಸಿದೆ. ಇದಲ್ಲದೆ, ಪ್ರಾಥಮಿಕ ಶಾಲೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೌಷ್ಟಿಕ ಜ್ಯೂಸ್ ನೀಡುವ ಕೆಲಸ ಮಾಡಿದೆ. ಇನ್ನಷ್ಟು ಜನರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಉದ್ದೇಶ ಹೊಂದಿದೆ.
    ಜಿಲ್ಲಾ ಘಟಕದಲ್ಲಿನ ಬಹುತೇಕ ಸದಸ್ಯರು ವೈದ್ಯ ವೃತ್ತಿಯಲ್ಲಿದ್ದಾರೆ. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸುವುದು ಸುಲಭವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗಿಂತ ಧಾರವಾಡ ಜಿಲ್ಲಾ ಘಟಕ ಸಾಕಷ್ಟು ಸಕ್ರಿಯವಾಗಿದೆ. ಸಂಸ್ಥೆಯ ಹಿಂದಿನ ಸಭಾಪತಿ ದಿ. ಡಾ.ವಿ.ಡಿ. ಕರ್ಪರಮಠ ಶ್ರಮವೇ ಕಾರಣ ಎನ್ನುತ್ತಾರೆ ಘಟಕದ ಪದಾಧಿಕಾರಿಗಳು. ಈ ಕೆಲಸವನ್ನು ಸಂಸ್ಥೆಯ ಈಗಿನ ಸಭಾಪತಿ ಡಾ. ಕವನ ದೇಶಪಾಂಡೆ ನೇತೃತ್ವದಲ್ಲಿ ಡಾ. ಉಮೇಶ ಹಳ್ಳಿಕೇರಿ, ಡಾ. ಧೀರಜ್ ವೀರನಗೌಡರ, ಮಾರ್ತಾಂಡಪ್ಪ ಕತ್ತಿ ಮೊದಲಾದವರು ನಡೆಸುತ್ತಿದ್ದಾರೆ.


    ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ವೇಗವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಾ ಸಾಮಗ್ರಿಗಳನ್ನು ನೀಡುವ ಜತೆಗೆ ವೈರಸ್​ನಿಂದ ಆರೋಗ್ಯ ಕಾಪಾಡಿಕೊಳ್ಳುವ ಜಾಗೃತಿ ಜನರಿಗೆ ಬೇಕಿದೆ. ಈ ಕುರಿತು ಅರಿವು ಮೂಡಿಸುವ ಕೆಲಸವನ್ನು ರೆಡ್ ಕ್ರಾಸ್ ಸಂಸ್ಥೆ ಮಾಡುತ್ತಿದೆ.
    | ಡಾ. ಕವನ ದೇಶಪಾಂಡೆ
    ರೆಡ್ ಕ್ರಾಸ್ ಜಿಲ್ಲಾ ಸಭಾಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts