More

    ರುದ್ರಭೂಮಿಗೆ ಬೇಕು ಸೌಲಭ್ಯ

    ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ

    ಗ್ರಾಮದ ಹಿಂದು ಮರಾಠಾ ಸಮಾಜದ ರುದ್ರಭೂಮಿ ಮೂಲಸೌಲಭ್ಯ, ನಿರ್ವಹಣೆ ಕೊರತೆಯಿಂದ ಬಳಲುತ್ತಿದ್ದು, ಅಂತ್ಯಸಂಸ್ಕಾರಕ್ಕೆ ಆಗಮಿಸುವ ಸಾರ್ವಜನಿಕರು ಪರದಾಡುವಂತಾಗಿದೆ.

    ಗ್ರಾಮದ ಹೊಸ ಬಸ್ ನಿಲ್ದಾಣದಿಂದ ಅರ್ಧ ಕಿ.ಮೀ. ದೂರದ ಚಿಕ್ಕಹಳ್ಳದ ಪಕ್ಕದಲ್ಲಿರುವ 28 ಗುಂಟೆ ಜಮೀನನ್ನು ರುದ್ರಭೂಮಿಗೆಂದು ನೀಡ ಲಾಗಿದೆ. ಇಲ್ಲಿ ನಾಮದೇವ ಶಿಂಪಿ, ದೇವಾಂಗ ಸಮಾಜ, ವಿಶ್ವಕರ್ಮ ಮತ್ತು ಯಲಿಗಾರ ಸಮಾಜದವರು ತಮ್ಮ ಕುಟುಂಬದವರು ನಿಧನ ಹೊಂದಿದರೆ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ.

    ಹೊಸ ಬಸ್ ನಿಲ್ದಾಣದಿಂದ ಧಾರವಾಡಕ್ಕೆ ತೆರಳುವ ಮುಖ್ಯ ರಸ್ತೆಯ ಎಡ ಭಾಗದಲ್ಲಿ ಬರುವ ಸರ್ವಿಸ್ ರಸ್ತೆ ನೇರವಾಗಿ ಸ್ಮಶಾನಕ್ಕೆ ಹೋಗುತ್ತದೆ. ರಸ್ತೆಯ ಅಗಲ 30 ಅಡಿಗೂ ಅಧಿಕವಾಗಿದೆ. ಆದರೆ, ರಸ್ತೆಯುದ್ದಕ್ಕೂ ಮುಳ್ಳು ಕಂಟಿಗಳು ಬೆಳೆದಿದ್ದರಿಂದ ರಸ್ತೆಯನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ಅಂತ್ಯ ಸಂಸ್ಕಾರಕ್ಕೆಂದು ಶವ ಹೊತ್ತು ಬರುವವರಿಗೆ ತೀವ್ರ ತೊಂದರೆಯುಂಟಾಗುತ್ತಿದೆ.

    ಇದೇ ರಸ್ತೆಯಲ್ಲಿ ಜನತೆ ಶೌಚ ಮಾಡುವುದರಿಂದ ಗಲೀಜಿನಲ್ಲೇ ಓಡಾಡಬೇಕಿದೆ. ರಾತ್ರಿ ಹೊತ್ತಿನಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ ತೆರಳುವುದು ಕಷ್ಟದಾಯಕವಾಗಿದೆ. ದಾಖಲೆಗಳ ಪ್ರಕಾರ 28 ಗುಂಟೆ ಸ್ಥಳ ರುದ್ರಭೂಮಿಗೆ ಸೇರಿದೆ. ಆದರೆ, ವಾಸ್ತವದಲ್ಲಿ ಅಷ್ಟು ಜಾಗ ಕಂಡುಬರುವುದಿಲ್ಲ. ಬೇರೆ ಧರ್ಮಗಳ ಸ್ಮಶಾನಗಳಲ್ಲಿ ಕಂಡು ಬರುವ ವ್ಯವಸ್ಥೆ ಇಲ್ಲಿಲ್ಲ ಎಂದು ಸಮಾಜದವರು ದೂರಿದ್ದಾರೆ.

    ರಸ್ತೆಯೇ ಆಧಾರ: ರುದ್ರಭೂಮಿಯು ಹಳ್ಳದ ಪಕ್ಕ ಇರುವುದರಿಂದ ಮಳೆ ಬಂದರೆ ಒಳಗೆ ಹೋಗುವುದು ಅಸಾಧ್ಯ. ಗರಗ, ನರೇಂದ್ರ, ಧಾರವಾಡ ಭಾಗದಲ್ಲಿ ಹೆಚ್ಚು ಮಳೆಯಾದರೆ ಹಳ್ಳ ತುಂಬಿ ಸ್ಮಶಾನದೊಳಗೆ ನೀರು ಹರಿದುಬರುತ್ತದೆ. ಈ ವೇಳೆ ರಸ್ತೆಯಲ್ಲಿಯೇ ಶವ ಸಂಸ್ಕಾರ ಮಾಡಿದ ಉದಾಹರಣೆಯೂ ಇದೆ.

    ಇಷ್ಟೊಂದು ಸಮಸ್ಯೆಗಳಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೌಲಭ್ಯ ಒದಗಿಸಲು ಮುಂದಾಗುತ್ತಿಲ್ಲ. ಸ್ಮಶಾನ ಅಭಿವೃದ್ಧಿಗೆಂದು ಸಾಕಷ್ಟು ಅನುದಾನವಿದ್ದರೂ ಅದನ್ನು ಬಳಕೆ ಮಾಡುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸುತ್ತಿದ್ದಾರೆ.

    ಗ್ರಾಮದ ಚಿಕ್ಕಹಳ್ಳದ ಪಕ್ಕ ಇರುವ ಸ್ಮಶಾನಕ್ಕೆ ತೆರಳುವ ರಸ್ತೆಯುದ್ದಕ್ಕೂ ಅಡ್ಡಲಾಗಿ ಗಿಡಗಂಟಿಗಳು ಬೆಳೆದಿದ್ದರಿಂದ ಶವ ತೆಗೆದುಕೊಂಡು ಹೋಗುವುದು ಕಷ್ಟವಾಗಿದೆ. ದಹನ ಸ್ಥಳದ ಸುತ್ತಲೂ ಮುಳ್ಳುಕಂಟಿಗಳು ಬೆಳೆದಿದ್ದರಿಂದ ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ಶವ ಸಂಸ್ಕಾರಕ್ಕೆಂದು ಬಂದವರಿಗೆ ನಿಲ್ಲುವಷ್ಟು ಸ್ಥಳವಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಸ್ಮಶಾನ ಅಭಿವೃದ್ಧಿಪಡಿಸುವ ಜೊತೆಗೆ ರಸ್ತೆ ಡಾಂಬರೀಕರಣ ಮಾಡಬೇಕು.

    | ವಿನೋಬಾ ಓರಣಕರ ಗ್ರಾಮಸ್ಥ

    ಉಪ್ಪಿನಬೆಟಗೇರಿ ಗ್ರಾಮದ ಹಿಂದು ಮರಾಠ ಸಮಾಜದ ರುದ್ರಭೂಮಿ ಹಾಗೂ ರಸ್ತೆ ಸಮಸ್ಯೆ ಕುರಿತು ಈಗ ಗಮನಕ್ಕೆ ಬಂದಿದ್ದು, ಕೂಡಲೆ ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಲಾಗುವುದು. ಗಿಡಗಂಟಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.

    | ಬಿ.ಎ. ಬಾವಾಕಾನವರ ಪಿಡಿಒ, ಉಪ್ಪಿನಬೆಟಗೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts