More

    ರಿಜಿಸ್ಟ್ರಾರ್ ಕಚೇರಿಗೆ ಕಾವೇರಿ-2 ತಂತ್ರಾಂಶ ಅಳವಡಿಕೆ

    ಯಳಂದೂರು: ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಗೆ ಗುರುವಾರ ಕಾವೇರಿ-2 ತಂತ್ರಾಂಶ ಅಳವಡಿಸಿ ಚಾಲನೆ ನೀಡಲಾಯಿತು.

    ಉಪನೋಂದಣಾಧಿಕಾರಿ ರುದ್ರಯ್ಯ ಮಾತನಾಡಿ, ಈ ತಂತ್ರಾಂಶವನ್ನು ಈಗಾಗಲೇ ರಾಜ್ಯದ ಬಹುತೇಕ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲೂ ಅಳವಡಿಸಲಾಗಿದೆ. ಯಳಂದೂರಿನ ಕಚೇರಿಯಲ್ಲಿ ಇದಕ್ಕೆ ಗುರುವಾರದಿಂದ ಚಾಲನೆ ನೀಡಲಾಗಿದೆ. ಇದರಲ್ಲಿ ಎಲ್ಲ ನೋಂದಣಿ ಕಾರ್ಯಗಳು ಇನ್ನು ಮುಂದೆ ಆನ್‌ಲೈನ್ ಮೂಲಕವೇ ನಡೆಯಲಿವೆ. ಸಾರ್ವಜನಿಕರಿಗೆ ನಮ್ಮ ಕಚೇರಿಯಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಇನ್ನು ಮುಂದೆ ಮತ್ತಷ್ಟು ಸುಲಭವಾಗಿ ಲಭಿಸಲಿದೆ. ಆನ್‌ಲೈನ್ ಮೂಲಕ ಎಲ್ಲ ಪ್ರಕ್ರಿಯೆಗಳು ನಡೆಯುವುದರಿಂದ ಮುಂದೆ ಎಲ್ಲ ದಾಖಲೆಗಳು ಡಿಜಿ ಲಾಕರ್‌ನಲ್ಲೇ ಇರುತ್ತವೆ. ಇದರಿಂದ ಭೌತಿಕ ದಾಖಲೆಗಳ ಕಡತಗಳನ್ನು ಇನ್ನಷ್ಟು ಸ್ಮಾರ್ಟ್‌ಗೊಳಿಸುವ ಕೆಲಸವನ್ನು ಇಲಾಖೆ ಮಾಡಿದೆ. ಎಲ್ಲ ಪ್ರಕ್ರಿಯೆಗಳು ಕಂಪ್ಯೂಟರೀಕರಣ ಆಗಿರುವುದರಿಂದ ನೋಂದಣಿ ಪ್ರಕ್ರಿಯೆಗಳಿಗೆ ದಿನಗಟ್ಟಲೆ ಅಲೆಯುವ ಪ್ರಸಂಗಗಳು ಕಡಿಮೆಯಾಗಲಿವೆ. ಇದರಿಂದ ಮಾನವ ಶಕ್ತಿ, ಸಮಯದ ಉಳಿತಾಯವೂ ಆಗಲಿದೆ. ಇದಕ್ಕಾಗಿ ಕಚೇರಿಯನ್ನು ಆಧುನೀಕರಣಗೊಳಿಸಲಾಗಿದೆ. ಕಂಪ್ಯೂಟರ್ ಸೆಕ್ಷನ್, ಬೇರೆ ಮಾಡಲಾಗಿದೆ. ಪ್ರತಿ ಸೆಕ್ಷನ್‌ನಲ್ಲೂ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಹೊಸದಾಗಿ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ನುರಿತ ಇಂಜಿನಿಯರ್‌ಗಳು ಈ ತಂತ್ರಾಂಶದ ಬಗ್ಗೆ ನಮ್ಮ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುತ್ತಿದ್ದಾರೆ. ಇದು ಹೊಸ ತಂತ್ರಾಂಶವಾಗಿದ್ದು ಅಗತ್ಯ ದಾಖಲೆಗಳನ್ನು ನೀಡಲು ಕೆಲವು ಮಾರ್ಪಾಡುಗಳಿವೆ. ಈ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಕಚೇರಿಗೆ ತೆರಳಿ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

    ಸ್ಥಳದಲ್ಲೇ ಹೊಸ ತಂತ್ರಾಂಶದಿಂದ ರಿಜಿಸ್ಟ್ರಾರ್ ಮಾಡಿದ ಪ್ರತಿಯನ್ನು ಫಲಾನುಭವಿಗಳಿಗೆ ನೀಡುವ ಮೂಲಕ ಇದಕ್ಕೆ ಚಾಲನೆ ನೀಡಲಾಯಿತು. ಇಂಜಿನಿಯರ್‌ಗಳಾದ ಅನಿಲ್, ರಾಘವೇಂದ್ರ, ನರೇಂದ್ರ ನಾಯಕ್ ಕಂಪ್ಯೂಟರ್ ಆಪರೇಟರ್‌ಗಳಾದ ಮಹೇಶನಾಯಕ, ನಾಗರತ್ನ, ಪ್ರಕಾಶ, ರಾಜಮಣಿ, ರಂಗಸ್ವಾಮಿ, ಮಹದೇವನಾಯಕ, ನೇತ್ರಾವತಿ, ಪತ್ರಬರಹಗಾರರಾದ ಸತ್ಯನಾರಾಯಣ, ವರಹಾರಾವ್, ರಾಮಪುರ ರಂಗಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts