More

    ರಾಸುಗಳ ಸೋಂಕು ತಡೆಗೆ ಕೌ ಮ್ಯಾಟ್, ಪಶುಸಂಗೋಪನೆ ಇಲಾಖೆಯಿಂದ ಮೊದಲ ಬಾರಿ ವಿತರಣೆ, ತಿಂಗಳೊಳಗೆ ಯೋಜನೆ ಅನುಷ್ಠಾನ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಗುಣಮಟ್ಟದ ಹಾಲು ಉತ್ಪಾದನೆ ಹಾಗೂ ರಾಸುಗಳ ಆರೋಗ್ಯ ರಕ್ಷಣೆ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಜಿಲ್ಲಾ ಪಶು ಸಂಗೋಪನಾ ಇಲಾಖೆ ವತಿಯಿಂದ ರೈತಾಪಿ ವರ್ಗಕ್ಕೆ ಸಬ್ಸಿಡಿ ದರದಲ್ಲಿ ಮಿಲ್ಕ್ ಮಿಷನ್ (ಹಾಲು ಕರೆಯುವ ಯಂತ್ರ) ಹಾಗೂ ಕೌಮ್ಯಾಟ್ (ರಾಸುಗಳ ನೆಲಹಾಸು) ವಿತರಣೆಗೆ ಮುಂದಾಗಿದೆ.

    ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ರಾಜ್ಯ ಸರ್ಕಾರ ರೂಪಿಸಿರುವ ಈ ಯೋಜನೆಯಡಿ ಜಿಲ್ಲಾ ಪಶುಸಂಗೋಪನೆ ಇಲಾಖೆ ಮಿಲ್ಕ್‌ಮಿಷನ್ ಹಾಗೂ ಕೌಮ್ಯಾಟ್ ವಿತರಣೆಗೆ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಟೆಂಡರ್ ಕರೆದಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇನ್ನೊಂದು ತಿಂಗಳಲ್ಲಿ ಲಾನುಭವಿಗಳ ಮನೆ ಬಾಗಿಲಿಗೆ ಯೋಜನೆ ತಲುಪಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

    ಮೂಳೆ ಮುರಿತ ತಪ್ಪಿಸುವ ಸಾಧನ: ಸಾಮಾನ್ಯವಾಗಿ ಕೊಟ್ಟಿಗೆಯಲ್ಲಿ ರಾಸುಗಳು ಜಾರಿಬೀಳುವ ಪ್ರಕರಣ ಹೆಚ್ಚುತ್ತಿದ್ದು, ಮೂಳೆ ಮುರಿಯುವ ಪ್ರಕರಣ ಸಾಮಾನ್ಯ ಎನ್ನುವಂತಾಗಿದೆ. ಕೌಮ್ಯಾಟ್ ಬಳಕೆಯಿಂದ ಜಾರುವುದು ತಪ್ಪುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

    ಸ್ವಚ್ಛತೆ ಮುಖ್ಯ: ಆರೋಗ್ಯವಂಥ ಜಾನುವಾರು ಸಾಕಣೆಗೆ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯವಾಗಿದೆ, ಕೌಮ್ಯಾಟ್ ಬಳಕೆಯಿಂದ ಕೊಟ್ಟಿಗೆಯನ್ನು ಸ್ವಚ್ಛವಾಗಿಡಬಹುದು, ಮ್ಯಾಟ್‌ಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು. ಇದರಿಂದ ಕೊಟ್ಟಿಗೆಯಲ್ಲಿ ಆರೋಗ್ಯಪೂರ್ಣ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶೇ.90 ಸಬ್ಸಿಡಿ: ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರು ಯೋಜನೆಗೆ ಅರ್ಹರಾಗಿದ್ದು, ಕನಿಷ್ಠ ಎರಡರಿಂದ ಮೂರು ರಾಸುಗಳ ಪಾಲನೆ ಮಾಡುತ್ತಿರಬೇಕು. ಈ ಯೋಜನೆಯಡಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಶೇ.90 ಸಬ್ಸಿಡಿ ದರದಲ್ಲಿ ಕೌಮ್ಯಾಟ್ ಹಾಗೂ ಮಿಲ್ಕ್‌ಮಿಷನ್ ಯಂತ್ರ ನೀಡಲಾಗುತ್ತದೆ.
    ಜಿಲ್ಲಾದ್ಯಂತ 1.87 ಲಕ್ಷ ರಾಸುಗಳಿದ್ದು, ಇದಕ್ಕಾಗಿಯೇ ಆಯಾ ತಾಲೂಕು ಶಾಸಕರ ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸಲಾಗಿದ್ದು, ಕಮಿಟಿಯಲ್ಲಿ ಅರ್ಹ ಲಾನುಭವಿಗಳ ಆಯ್ಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಶುಸಂಗೋಪನೆ ಇಲಾಖೆಯಿಂದ 15 ರಿಂದ 18 ಸಾವಿರ ಮೊತ್ತದ ಮಿಲ್ಕ್ ಮಿಷನ್ ಹಾಗೂ ರಾಸುಗಳಿಗೆ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಎರಡು ಕೌ ಮ್ಯಾಟ್ ವಿತರಣೆಗಾಗಿ ಬಾಕಿ ಇರುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಶೀಘ್ರದಲ್ಲೇ ಯೋಜನೆ ಅನುಷ್ಠಾನಗೊಳ್ಳಲಿದೆ.
    ವಿಜಯಾ ರವಿಕುಮಾರ್, ಅಪರ ಜಿಲ್ಲಾಧಿಕಾರಿ

    ಸಾಮಾನ್ಯವಾಗಿ ರಾಸುಗಳಲ್ಲಿ ಕಾಣಿಸಿಕೊಳ್ಳುವ ಕೆಚ್ಚಲುಬಾವು ನಿಯಂತ್ರಣದಲ್ಲಿ ಕೌ ಮ್ಯಾಟ್ ಹಾಗೂ ಮಿಲ್ಕ್ ಮಿಷನ್ ಬಹಳ ಸಹಕಾರಿಯಾಗಲಿದೆ, ರಾಸುಗಳ ಆರೋಗ್ಯ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಈ ಯೋಜನೆ ಪೂರಕವಾಗಿದೆ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಿಂಗಳೊಳಗೆ ಯೋಜನೆ ಅನುಷ್ಠಾನಗೊಳ್ಳಲಿದೆ.
    ಡಾ.ಅನಿಲ್‌ಕುಮಾರ್, ಪಶು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts