More

    ರಾಷ್ಟ್ರೀಯ ಹೆದ್ದಾರಿ ಅಗಲೀಕರಣ: ಒಂದೇ ಭಾಗದಲ್ಲಿ ಭೂಸ್ವಾಧೀನಕ್ಕೆ ವಕೀಲರ ವಿರೋಧ

    ಸಾಗರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆ ಒಂದೇ ಭಾಗದ ಭೂಸ್ವಾಧೀನ ವಿರೋಧಿಸಿ ಗುರುವಾರ ಸಾಗರ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಎನ್‌ಜಿಒ ಹೋಮ್‌ನಿಂದ ಪೊಲೀಸ್ ಸ್ಟೇಷನ್ ವೃತ್ತದವರೆಗೆ ಒಂದೇ ಭಾಗದಲ್ಲಿ ಸ್ವಾಧೀನಕ್ಕೆ ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರ ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಕೆ.ದಿವಾಕರ್ ಮಾತನಾಡಿ, ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ ಮುಂದಾಗಿದ್ದು ಇದಕ್ಕೆ ಕಾನೂನಾತ್ಮಕ ಹೋರಾಟವನ್ನು ಮಾಡೋಣ. ನಾನು ನಿಮ್ಮೊಂದಿಗೆ ಇದ್ದು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
    ನ್ಯಾಯಾಲಯ ಸಂಕೀರ್ಣಕ್ಕೆ ಇರುವುದು ಮೂರು ಎಕರೆ ಜಾಗ. ಅಗಲೀಕರಣ ಹೆಸರಿನಲ್ಲಿ ನ್ಯಾಯಾಲಯದ ಒಂದು ಭಾಗವನ್ನು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ನ್ಯಾಯಾಲಯ ವಿರೋಧಿ ನೀತಿಯಾಗಿದೆ. ಇದರ ಜತೆಗೆ ಲಕ್ಷಾಂತರ ಜನರಿಗೆ ವಿದ್ಯಾದಾನ ನೀಡಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಒಂದು ಭಾಗ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವುದು ಖಂಡನೀಯ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತಕ್ಷಣ ತನ್ನ ತಪ್ಪನ್ನು ಸರಿಪಡಿಸಿಕೊಂಡು ರಸ್ತೆಯ ಎರಡೂ ಭಾಗದಲ್ಲೂ ಭೂಸ್ವಾಧೀನ ಮಾಡಿಕೊಂಡು ರಸ್ತೆ ಅಗಲೀಕರಣ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟದ ಜತೆಗೆ ಇನ್ನಷ್ಟು ಉಗ್ರವಾದ ಪ್ರತಿಭಟನೆ ನಡೆಸಲಾಗುವುದು. ಅಭಿವೃದ್ಧಿಯ ಹೆಸರಿನಲ್ಲಿ ವೈಯಕ್ತಿಕ ಪ್ರತಿಷ್ಠೆ ಮೆರೆಯುವ ಕೆಲಸ ಮಾಡಿದರೆ ಜನಕ್ಕೆ ತಿಳಿಯುತ್ತದೆ. ಎಲ್ಲದಕ್ಕೂ ಉತ್ತರ ನೀಡುತ್ತೇವೆ ಎಂದು ಗುಡುಗಿದರು.
    ವಕೀಲರ ಸಂಘದ ಅಧ್ಯಕ್ಷ ಇ.ನಾಗರಾಜ್ ಮಾತನಾಡಿ, ನ್ಯಾಯಾಲಯದ ಸಂಕೀರ್ಣಕ್ಕೆ 3.06 ಎಕರೆ ಸ್ಥಳ ಮೀಸಲಾಗಿದ್ದು ಎರಡು ನ್ಯಾಯಾಲಯಗಳು ಮಾತ್ರ ಕೆಲಸ ನಿರ್ವಹಿಸುತ್ತಿದ್ದವು. ಈಗ ಇದೇ ಜಾಗದಲ್ಲಿ 5 ನ್ಯಾಯಾಲಯಗಳು ಕೆಲಸ ನಿರ್ವಹಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಗಲೀಕರಣ ನಡೆಸಿದರೆ ವಾಹನಗಳ ಸದ್ದಿನಿಂದ ಕಲಾಪವನ್ನು ಕೂಡ ಮಾಡಲು ಸಾಧ್ಯವಿಲ್ಲ, ಎರಡೂ ಕಡೆಗಳಲ್ಲಿ ಸಮಾನವಾದ ಅಗಲೀಕರಣವಾಗಬೇಕು. ಈ ರೀತಿಯ ಅವೈಜ್ಞಾನಿಕ ಕಾಮಗಾರಿ ನಡೆಸಲು ನಾವು ಬಿಡುವುದಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಖಾಸಗಿಯವರ ಹಿತ ಕಾಪಾಡುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ನಾವು ಸಾರ್ವಜನಿಕ ಹಿತ ದೃಷ್ಟಿಯಿಂದ ಈ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ಎಲ್ಲರ ಸಹಕಾರದಿಂದ ತಾರ್ಕಿಕ ಅಂತ್ಯ ಮುಟ್ಟಿಸುತ್ತೇವೆ ಎಂದು ಹೇಳಿದರು.
    ಕೋರ್ಟ್ ಕಲಾಪಕ್ಕೆ ತೊಂದರೆ: ರಸ್ತೆ ಅಗಲೀಕರಣಕ್ಕೆ ನ್ಯಾಯಾಲಯದ ಜಾಗವನ್ನು ವಶಪಡಿಸಿಕೊಂಡರೆ ಕಲಾಪಕ್ಕೆ ತೊಂದರೆಯಾಗುತ್ತದೆ. ಜ್ಯೂನಿಯರ್ ಕಾಲೇಜು ಭಾಗದಲ್ಲಿ ಭೂಸ್ವಾಧೀನ ಮಾಡಿದರೆ ಮಕ್ಕಳು ಕಾಲೇಜಿನಿಂದ ಹೊರಗೆ ಬರುವುದೇ ಕಷ್ಟವಾಗುತ್ತದೆ. ಜತೆಗೆ ಪೊಲೀಸ್ ಠಾಣೆ ಪೂರ್ಣ ಭೂಸ್ವಾಧೀನ ಪ್ರಕ್ರಿಯೆಗೆ ಹೋಗುತ್ತದೆ. ಪೊಲೀಸ್ ಠಾಣೆ ಊರಿನ ಹೃದಯ ಭಾಗದಲ್ಲಿ ಇರಬೇಕು, ಈಗ ಇರುವ ಸ್ಥಳವು ಅತ್ಯಂತ ಸೂಕ್ತವಾಗಿದ್ದು ಇದನ್ನು ಇಲ್ಲಿಯೇ ಉಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ. ನಮ್ಮ ಸಂಘಟನೆ ಕಾನೂನಾತ್ಮಕವಾಗಿಯೂ ಹೋರಾಟ ನಡೆಸುತ್ತದೆ ಎಂದು ಹಿರಿಯ ನ್ಯಾಯವಾದಿ ಕೆ.ಎನ್.ಶ್ರೀಧರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts