More

    ರಾಶಿಗಿಂತ ಚಾಲಿ ಅಡಕೆ ಧಾರಣೆ ಹೆಚ್ಚು

    ಶಿರಸಿ: ಚಾಲಿ ಅಡಕೆ ದರ ವಾರದಿಂದ ಏರುಗತಿಯಲ್ಲಿ ಸಾಗುತ್ತಿದ್ದು, ಇದೀಗ ರಾಶಿ ಅಡಕೆ (ಕೆಂಪಡಕೆ) ದರವನ್ನೂ ಮೀರಿ ಮುನ್ನುಗ್ಗುತ್ತಿದೆ. ತಿಂಗಳ ಹಿಂದೆ ಚಾಲಿ ಅಡಕೆಗೆ ಕ್ವಿಂಟಾಲ್ ಒಂದಕ್ಕೆ 30 ಸಾವಿರದ ಆಸುಪಾಸಿನಲ್ಲಿದ್ದ ದರ ಪ್ರಸ್ತುತ 38 ಸಾವಿರ ರೂ. ಗಡಿ ದಾಟಿದೆ. ಅ.16ರಂದು ಶಿರಸಿಯ ಅಡಕೆ ಮಾರುಕಟ್ಟೆಯಲ್ಲಿ ರಾಶಿ ಅಡಕೆಗೆ ಕ್ವಿಂ. ಒಂದಕ್ಕೆ ಕನಿಷ್ಠ 36,698 ಹಾಗೂ ಗರಿಷ್ಠ 37,709 ರೂ. ದರ ದಾಖಲಾದರೆ, ಚಾಲಿ ಅಡಕೆ ಕ್ವಿಂ. ಒಂದಕ್ಕೆ ಕನಿಷ್ಠ 37,699 ಹಾಗೂ ಗರಿಷ್ಠ 38,328 ರೂ. ದಾಖಲಾಗುವ ಮೂಲಕ ಕೆಂಪಡಕೆ ದರವನ್ನೂ ಹಿಂದಿಕ್ಕಿದೆ. ನಿತ್ಯ 600 ರೂ.ಗಳಿಂದ 800 ರೂ.ವರೆಗೆ ದರ ಏರಿಕೆಯಾಗುತ್ತಿದ್ದು, ಮಾಸಾಂತ್ಯಕ್ಕೆ 40 ಸಾವಿರ ರೂ. ಗಡಿ ದಾಟುವ ಸಾಧ್ಯತೆಯಿದೆ. ಇದು ಚಾಲಿ ಅಡಕೆ ದರದ ಚೇತರಿಕೆಯ ಸೂಚನೆಯಾಗಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.

    ಗಡಿಯಲ್ಲಿ ಕಟ್ಟುನಿಟ್ಟು ಕಾರಣ: ಭಾರತದೊಂದಿಗಿನ ಸಂಬಂಧ ಕಳಚಿಕೊಂಡು ನೇಪಾಳವು ಚೀನಾದೊಂದಿಗೆ ಸಂಬಂಧ ಬೆಸೆದ ಕಾರಣ ನೇಪಾಳ ಹಾಗೂ ಭಾರತದ ಗಡಿಯಲ್ಲಿ ಬಿಗಿ ಕ್ರಮವಹಿಸಲಾಗುತ್ತಿದೆ. ಜತೆಗೆ, ಬಾಂಗ್ಲಾದೇಶದಲ್ಲಿ ಚುನಾವಣೆ ಘೊಷಣೆಯಾದ ಕಾರಣ ಅಲ್ಲಿನ ಗಡಿಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಕಳ್ಳಮಾರ್ಗ ಹಾಗೂ ಅನಧಿಕೃತವಾಗಿ ಸಾಕಷ್ಟು ಪ್ರಮಾಣದ ಅಡಕೆಯು ನೇಪಾಳ ಹಾಗೂ ಬಾಂಗ್ಲಾದಿಂದ ದೇಶದೊಳಗೆ ಬರುತ್ತಿತ್ತು. ಇದೀಗ ಅವೆಲ್ಲ ಅಕ್ರಮಕ್ಕೂ ಕಡಿವಾಣ ಬಿದ್ದ ಕಾರಣ ಸ್ಥಳೀಯ ಅಡಕೆಗೆ ದರ ಹೆಚ್ಚುತ್ತಿದೆ. ಕೇವಲ ಚಾಲಿ ಅಡಕೆಯೊಂದೇ ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ 26ರಿಂದ 32 ಸಾವಿರ ರೂ. ಕ್ವಿಂಟಾಲ್ ಒಂದಕ್ಕೆ ದರ ನಿಗದಿಯಾಗುತ್ತಿದ್ದ ಬಿಳೆಗೋಟಿಗೆ ಕನಿಷ್ಠ 26 ಸಾವಿರ ಹಾಗೂ 34 ಸಾವಿರ ದರ ಲಭ್ಯವಾಗುತ್ತಿದೆ. ಚಾಲಿ ಕೆಂಪು ಕ್ವಿಂ. ಒಂದಕ್ಕೆ 24ರಿಂದ 32 ಸಾವಿರ ರೂ. ದರ ಲಭಿಸುತ್ತಿದ್ದುದು, ಇದೀಗ ಕನಿಷ್ಠ 28 ಸಾವಿರ ರೂ. ಹಾಗೂ ಗರಿಷ್ಠ 35 ಸಾವಿರ ರೂ. ದಾಖಲಾಗಿ ಸಾರ್ವಕಾಲಿಕ ದರವಾಗಿ ಮುನ್ನುಗ್ಗುತ್ತಿದೆ ಎಂಬುದು ಮಾರುಕಟ್ಟೆ ತಜ್ಞರ ಮಾತಾಗಿದೆ.

    ಸದ್ಯದ ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಚಾಲಿ ಅಡಕೆಗೆ ಉತ್ತಮ ದರ ಲಭಿಸುತ್ತಿದೆ. ಕೆಂಪಡಕೆ ಹಾಗೂ ಚಾಲಿ ಅಡಕೆಯ ದರ ಬಹುತೇಕ ಒಂದೇ ಆಗಿದೆ. ಬಹುತೇಕ ರೈತರು ಚಾಲಿಯನ್ನು ದಾಸ್ತಾನಿಟ್ಟಿದ್ದು, ಇದೀಗ ಹೊರಗೆ ತರುತ್ತಿದ್ದಾರೆ. ಸರಾಸರಿ 38 ಸಾವಿರ ರೂ. ಪ್ರತಿ ಕ್ವಿಂ. ಒಂದಕ್ಕೆ ರೈತರಿಗೆ ಸಿಗುತ್ತಿದೆ. ಈ ದರ ಮುಂದಿನ ಹಂಗಾಮಿನವರೆಗಿದ್ದರೆ ಇನ್ನಷ್ಟು ರೈತರಿಗೆ ಅನುಕೂಲವಾಗಲಿದೆ.
    | ಸದಾಶಿವ ಭಟ್ಟ ಅಡಕೆ ಬೆಳೆಗಾರ

    ನೇಪಾಳ ಹಾಗೂ ಬಾಂಗ್ಲಾ ಗಡಿಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಬಿದ್ದ ಪರಿಣಾಮ ದೇಶದೊಳಗೆ ಬರುತ್ತಿದ್ದ ಅಕ್ರಮ ಅಡಕೆ ಪ್ರಮಾಣ ಕುಂಠಿತವಾಗಿದೆ. ಹೀಗಾಗಿ ಚಾಲಿ ಅಡಕೆಯ ದರ ಏರಿಕೆಯಾಗುತ್ತಿದೆ. ನವೆಂಬರ್ ಅಂತ್ಯದವರೆಗೂ ಈ ದರ ಲಭಿಸುವ ಸಾಧ್ಯತೆಯಿರುವ ಜತೆ 40 ಸಾವಿರ ರೂ.ಗಳ ಗಡಿ ದಾಟುವ ವಿಶ್ವಾಸವಿದೆ.
    | ರವೀಶ ಹೆಗಡೆ ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts