More

    ರಾಮೋತ್ಸವಕ್ಕೆ ಮದಕರಿ, ಓಬವ್ವಳ ನಾಡು ಸಜ್ಜು

    ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ರಾಮೋತ್ಸವ ಆಚರಣೆಗೆ ಮದಕರಿನಾಯಕ, ಓಬವ್ವಳ ನಾಡು ಸಂಪೂರ್ಣ ಸಜ್ಜುಗೊಂಡಿದೆ. ವಿಶೇಷ ಪೂಜೆ, ಅಲಂಕಾರ ಇತರೆ ಧಾರ್ಮಿಕ ಕಾರ್ಯಕ್ರಮಗಳು ಕಳೆಗಟ್ಟಲಿವೆ.

    ಶ್ರೀರಾಮ, ಆಂಜನೇಯ, ಶಿವ, ದೇವಿ ಸೇರಿ ಹಲವು ದೇಗುಲಗಳು ವಿದ್ಯುದ್ದೀಪಾಲಂಕಾರಗೊಂಡಿವೆ. ಆಯಾ ದೇಗುಲಗಳಲ್ಲಿ ಎಲ್ಲ ಮೂರ್ತಿಗಳಿಗೂ ವಿಶೇಷ ಅಲಂಕಾರದ ಜತೆಗೆ ಪೂಜೆ, ಆರಾಧನೆ, ಪ್ರಾರ್ಥನೆ, ಭಜನೆ, ಪ್ರಸಾದ ವಿತರಣೆಗೆ ಭರದಿಂದ ಸಿದ್ಧತೆ ನಡೆದಿವೆ.

    ಕೋಟೆನಗರಿಯ ಕೆಲವೆಡೆ ಕೇಸರಿ ಬಾವುಟ, ಬಂಟಿಂಗ್ಸ್‌ಗಳು, ಶ್ರೀರಾಮ, ಆಂಜನೇಯನ ಕಟೌಟ್‌ಗಳು ರಾರಾಜಿಸುತ್ತಿವೆ. ಸಂಜೆಯ ದೀಪಾರಾಧನೆಗೂ ವಿವಿಧ ಹಿಂದು ಸಂಘಟನೆಗಳು ತಯಾರಿ ಮಾಡಿಕೊಂಡಿವೆ.

    ಹೊರವಲಯದ ತಮಟಕಲ್ಲು ಆಂಜನೇಯ, ಮಾನಂಗಿ ಆಂಜನೇಯ, ಹೊಳಲ್ಕೆರೆ ರಸ್ತೆ 8ನೇ ಮೈಲು ಆಂಜನೇಯ, ಬರಗೇರಿ ಆಂಜನೇಯ, ಹೌಸಿಂಗ್ ಬೋರ್ಡ್ ಕಾಲನಿಯ ಪಂಚಮುಖಿ ಆಂಜನೇಯ, ಬುರುಜನಹಟ್ಟಿ ತಗ್ಗಿನ ಆಂಜನೇಯ, ಕೋಟೆ ಆಂಜನೇಯ, ಜಿಲ್ಲಾ ಕ್ರೀಡಾಂಗಣ ಮಾರ್ಗದ ವೀರಾಂಜನೇಯ, ಮದಕರಿನಾಯಕ ವೃತ್ತ ಸಮೀಪದ ರಕ್ಷಾಂಜನೇಯ ಸೇರಿ ವಿವಿಧ ಆಂಜನೇಯ ಸ್ವಾಮಿ ದೇಗುಲಗಳಲ್ಲಿ ರಾಮೋತ್ಸವ ಜರುಗಲಿದೆ. ರಂಗಯ್ಯನ ಬಾಗಿಲು ಸಮೀಪದ ಆಂಜನೇಯ ಸನ್ನಿಧಿ ಮುಂಭಾಗ ಜೈ ಶ್ರೀರಾಮ್ ಬಳಗದಿಂದ ಪೂಜೆ, ಪ್ರಸಾದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

    ಕಣಿವೆ ಆಂಜನೇಯ ಸ್ವಾಮಿ ಸನ್ನಿಧಿಗೂ ಸಾವಿರಾರು ಭಕ್ತರು ಭೇಟಿ ನೀಡುವ ನಿರೀಕ್ಷೆ ಇದ್ದು, ಅಲ್ಲಿಯೂ ಸಿದ್ಧತೆ ಭರದಿಂದ ಸಾಗಿದೆ. ನಗರ ಹಾಗೂ ತಾಲೂಕಿನ ಹಲವು ಗ್ರಾಮೀಣ ಭಾಗಗಳಲ್ಲೂ ಅನ್ನ ಸಂತರ್ಪಣೆ, ಉಪಾಹಾರ, ಸಿಹಿ ವಿತರಣೆ ನಡೆಯಲಿದೆ. ಭಕ್ತರು, ವರ್ತಕರು, ಕಿರಾಣಿ ಅಂಗಡಿಗಳ ಮಾಲೀಕರು ದೇಣಿಗೆ-ಧಾನ್ಯದ ರೂಪದಲ್ಲಿ ಭಕ್ತಿ ಸಮರ್ಪಿಸಿದ್ದಾರೆ.

    ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿ ದೇಗುಲದಲ್ಲೂ ವಿಶೇಷಾಲಂಕಾರ ಸೇವೆ, ಮಹಾಮಂಗಳಾರತಿ, ಪ್ರಸಾದ ವ್ಯವಸ್ಥೆ ಇರಲಿದೆ. ಹಲವು ಶಕ್ತಿದೇವತೆ, ಶಿವನ ದೇಗುಲಗಳಲ್ಲೂ ಪೂಜೆ, ಪ್ರಾರ್ಥನೆ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts