More

    ರಾಮಗಿರಿಗೆ ಮತ್ತೊಮ್ಮೆ ಗಾಂಧಿ ಗ್ರಾಮದ ಗರಿ!

    ಲಕ್ಷ್ಮೇಶ್ವರ: ತಾಲೂಕಿನ ರಾಮಗಿರಿ ಗ್ರಾಮ ಪಂಚಾಯಿತಿಗೆ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. 2017-18ನೇ ಸಾಲಿನಲ್ಲಿಯೂ ಈ ಪುರಸ್ಕಾರಕ್ಕೆ ಪಾತ್ರವಾಗಿತ್ತು.

    ನರೇಗಾ ಕಾರ್ಯಕ್ರಮಗಳ ಅನುಷ್ಠಾನ, ಶೌಚಗೃಹ ನಿರ್ವಣ, ಸ್ವಚ್ಛತೆ, ಕರ ವಸೂಲಾತಿ ಪ್ರಗತಿ, ಕುಡಿಯುವ ನೀರು, ಗ್ರಾಮ ಸಭೆಗಳ ನಿರ್ವಹಣೆ, ಸರ್ಕಾರದ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ, ಉದ್ಯೋಗ ಸೃಷ್ಟಿ, ವಸತಿ ಯೋಜನೆಗಳ ಸಮರ್ಪಕ ಅನುಷ್ಠಾನ, ಆದಾಯದ ಮೂಲ ಮತ್ತು ಕೈಗೊಂಡ ವಿನೂತನ ಯೋಜನೆಗಳು ಸೇರಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮೇಲೆ ಒಟ್ಟು 150 ಅಂಕಗಳ ಪ್ರಶ್ನಾವಳಿ ರೂಪಿಸಿ ಆನ್​ಲೈನ್ ಮೂಲಕ ಉತ್ತರ ಪಡೆಯಲಾಗಿರುತ್ತದೆ. ಅ. 2ರಂದು ಗಾಂಧಿ ಜಯಂತಿಯಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ. ಈ ಪುರಸ್ಕಾರ 5 ಲಕ್ಷ ರೂ. ನಗದು, ಪಾರಿತೋಷಕ ಮತ್ತು ಅಭಿನಂದನಾ ಪತ್ರ ಹೊಂದಿರುತ್ತದೆ.

    ರಾಮಗಿರಿ ಪಂಚಾಯಿತಿ ವೈಶಿಷ್ಟ್ಯ ರಾಮಗಿರಿ ಗ್ರಾಮ ಪಂಚಾಯಿತಿಯು ರಾಮಗಿರಿ, ಬಸಾಪೂರನ ಸದಸ್ಯರು ಸೇರಿ ಒಟ್ಟು 10 ಗ್ರಾಪಂ ಸದಸ್ಯರನ್ನು ಒಳಗೊಂಡಿದೆ. ಒಟ್ಟು ಜನಸಂಖ್ಯೆ 3138 ಇದ್ದು, 538 ಕುಟುಂಬಗಳು ಇಲ್ಲಿ ನೆಲೆಸಿವೆ. 2019-20 ರಲ್ಲಿ ಗ್ರಾಮ ಪಂಚಾಯಿತಿ ‘ನಮ್ಮ ಗ್ರಾಮ ನಮ್ಮ ಯೋಜನೆ’ಯಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಪ್ಲಾ್ಯನ ಪ್ಲಸ್/ ಇ-ಗ್ರಾಮ ಸ್ವರಾಜ ತಂತ್ರಾಂಶಗಳ ಮೂಲಕ ಪ್ರತಿಶತ 100ರಷ್ಟು ಕಾಮಗಾರಿ ಅನುಷ್ಠಾನಗೊಳಿಸಿದ್ದು ಈ ಗ್ರಾಪಂ ವೈಶಿಷ್ಟ್ಯಾಗಿದೆ. 2019-20 ನರೇಗಾ ಯೋಜನೆಯಡಿ ಗ್ರಾಪಂ ವ್ಯಾಪ್ತಿಯ ನೋಂದಾಯಿತ ಕೂಲಿಕಾರ್ವಿುಕರಿಗೆ ಸಕಾಲದಲ್ಲಿ ಕೆಲಸ ನೀಡಿ ನಿಗದಿತ ಸಮಯಕ್ಕೆ ಕೂಲಿ ಹಣ ಪಾವತಿಸಿರುವುದು, ವಾರ್ಷಿಕ ಮಾನವ ದಿನಗಳ ಸೃಜನೆಯ ಗುರಿಯನ್ನು ಶೇ 100ರಷ್ಟು ಸಾಧಿಸಿರುವುದು, ಸ್ವಚ್ಛ ಭಾರತ ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತವಾಗಿ ಮಾಡಿರುವುದು ಗಮನಾರ್ಹ ಸಾಧನೆಗಳಾಗಿವೆ.

    ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳ ಪೈಕಿ ಶೇ. 80ರಷ್ಟು ಮನೆಗಳ ನಿರ್ವಣದಲ್ಲಿ ಪ್ರಗತಿ ಸಾಧಿಸಿರುವುದು, ಲಭ್ಯವಿರುವ ಪೌರಕಾರ್ವಿುಕರನ್ನು ಬಳಸಿಕೊಂಡು ಗ್ರಾಮ ನೈರ್ಮಲ್ಯ ಕಾಪಾಡುವಲ್ಲಿ ಮತ್ತು ಜನಜಾಗೃತಿ ಮೂಡಿಸುವಲ್ಲಿ ಸ್ಥಳೀಯ ಗ್ರಾಪಂ ಯಶಸ್ವಿಯಾಗಿದೆ. ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಗ್ರಾಮದ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಿರುವುದು, ಸ್ವಚ್ಛತೆ, ಪ್ಲಾಸಿಕ್ ನಿಷೇಧ ಹಾಗೂ ತ್ಯಾಜ್ಯ ವಿಲೇವಾರಿಯ ನಿರ್ವಹಣೆ ಮತ್ತು ಜಾಗೃತಿ ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡಿರುವ ಪಂಚಾಯತ್​ರಾಜ್ ಇಲಾಖೆಯು ರಾಮಗಿರಿ ಪಂಚಾಯಿತಿಯನ್ನು 2ನೇ ಬಾರಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

    ಲಕ್ಷ್ಮೇಶ್ವರ ತಾಲೂಕಿನಲ್ಲಿ ಗೊಜನೂರ, ಬಟ್ಟೂರ, ಯಳವತ್ತಿ, ಪು. ಬಡ್ನಿ, ರಾಮಗೇರಿ ಸೇರಿ ಒಟ್ಟು 5 ಗ್ರಾಪಂಗಳು ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿದ್ದವು. ರಾಮಗಿರಿ ಗ್ರಾಮ ಪಂಚಾಯಿತಿ ಆಯ್ಕೆಯ ಎಲ್ಲ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದಾರೆ. ರಾಮಗಿರಿ ಪಂಚಾಯಿತಿ ವ್ಯಾಪ್ತಿಯ ಜನಪ್ರತಿನಿಧಿಗಳು, ಪಿಡಿಒ, ಸಿಬ್ಬಂದಿ ಹಾಗೂ ಗ್ರಾಮದ ಸಾರ್ವಜನಿಕರ ಪಾತ್ರ ಮುಖ್ಯವಾಗಿದ್ದು, ಇವರೆಲ್ಲರಿಗೂ ಅಭಿನಂದಿಸುತ್ತೇನೆ. ಪಂಚಾಯಿತಿಗಳ ಕಾರ್ಯವೈಖರಿಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವುದು ಈ ಪ್ರಶಸ್ತಿ ಉದ್ದೇಶವಾಗಿದೆ. ಈ ಪುರಸ್ಕಾರ ಇತರೆಲ್ಲ ಗ್ರಾಮ ಪಂಚಾಯಿತಿಗಳಿಗೂ ಪ್ರೇರಣೆ.

    | ಆರ್.ವೈ. ಗುರಿಕಾರ ತಾಪಂ ಇಒ, ಲಕ್ಷ್ಮೇಶ್ವರ

    ಗಾಂಧಿ ಗ್ರಾಮ ಪುರಸ್ಕಾರ ಪಡೆಯುವಲ್ಲಿ ಗ್ರಾಮದ ಜನರ ಸಹಭಾಗಿತ್ವ ಮಹತ್ವ, ಆಡಳಿತ ಮಂಡಳಿಯ ಸರ್ವರೂ ಹಾಗೂ ಗ್ರಾಮದ ಗುರು-ಹಿರಿಯರು, ಸಾರ್ವಜನಿಕರು, ಯುವಕರು ಹಾಗೂ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಎಸ್.ಬಿ. ಹರ್ತಿ ಅವರ ಸಲಹೆ-ಸಹಕಾರದಿಂದ 2 ನೇ ಬಾರಿಗೆ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರವು ಗ್ರಾಪಂಗೆ ಲಭಿಸಲು ಕಾರಣವಾಗಿದೆ.

    | ಜಗದೀಶ ಕುರುಬರ

    ಪಿಡಿಒ ರಾಮಗಿರಿ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts