More

    ರಾಣೆಬೆನ್ನೂರ ತಾಲೂಕಿನಾದ್ಯಂತ ಆತಂಕಕಾರಿ ಟಾಪ್ ಸವಾರಿ

    ರಾಣೆಬೆನ್ನೂರ: ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಬಸ್​ಗಳ ಸಂಚಾರ ಕಡಿಮೆಯಾಗಿದೆ. ಕೆಲ ಖಾಸಗಿ ವಾಹನದವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಜತೆಗೆ ಜನರೂ ತಮ್ಮ ಜೀವ ಮತ್ತು ಸುರಕ್ಷತೆ ಲೆಕ್ಕಿಸದೆ ಕ್ರೂಸರ್, ಟಂಟಂ ಹಾಗೂ ಟಾಟಾ ಏಸ್ ವಾಹನಗಳ ಮೇಲೆ ಕುಳಿತು ಪ್ರಯಾಣಿಸುತ್ತಿದ್ದಾರೆ.

    ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಜಾರಿಗೊಳಿಸಿದ ನಿಯಮಗಳು ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ಸೂಕ್ತ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ. ಇದರಿಂದಾಗಿ ತಾಲೂಕಿನಾದ್ಯಂತ ಖಾಸಗಿ ವಾಹನಗಳಲ್ಲಿ ಮನಬಂದಂತೆ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ.

    ತಾಲೂಕಿನಲ್ಲಿ 108 ಗ್ರಾಮಗಳಿವೆ. ಕರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಗ್ರಾಮಗಳಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೆಲವೆಡೆ ಬಸ್ ಸೌಕರ್ಯವಿದ್ದರೂ ಸಮಯಕ್ಕೆ ಸರಿಯಾಗಿ ದೊರೆಯದ ಕಾರಣ ಗ್ರಾಮೀಣ ಜನ ಕ್ರೂಸರ್​ನಂತಹ ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ. ಆದರೆ, ಖಾಸಗಿ ವಾಹನಗಳ ಮಾಲೀಕರು ಹಾಗೂ ಚಾಲಕರು ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುತ್ತಿದ್ದಾರೆ.

    14ರ ಬದಲು 30 ಜನರ ಪ್ರಯಾಣ: ಕ್ರೂಸರ್ ವಾಹನದಲ್ಲಿ 14 ಜನರ ಪ್ರಯಾಣಕ್ಕೆ ಅವಕಾಶವಿದೆ. ಆದರೆ, 30ಕ್ಕೂ ಅಧಿಕ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ. ಟಂಟಂ ವಾಹನದಲ್ಲಿ 7 ಜನರ ಬದಲು ಅಂದಾಜು 15 ಜನರನ್ನು ಸಾಗಿಸಲಾಗುತ್ತಿದೆ. ಜನ ಕೂಡ ಸರ್ಕಾರಿ ಬಸ್​ಗಳಿಗೆ ಕಾಯುವ ಬದಲು ತುರ್ತಾಗಿ ಸಿಗುವ ಖಾಸಗಿ ವಾಹನಗಳನ್ನೇ ಅನಿವಾರ್ಯವಾಗಿ ಬಳಸುತ್ತಿದ್ದಾರೆ.

    ತಾಲೂಕಿನ ಕಮದೋಡ, ಮೇಡ್ಲೇರಿ, ಇಟಗಿ, ಹಿರೇಬಿದರಿ, ಸುಣಕಲ್ಲಬಿದರಿ ಸೇರಿ ಕೆಲ ಗ್ರಾಮಗಳ ರಸ್ತೆಗಳು ಇಕ್ಕಟ್ಟಾಗಿವೆ. ಜತೆಗೆ ರಸ್ತೆಯ ಎರಡೂ ಬದಿ ಗಿಡಗಂಟಿ ಬೆಳೆದಿವೆ. ಇಕ್ಕಟ್ಟಾದ ರಸ್ತೆಯಲ್ಲಿ ಹೆಚ್ಚಿನ ಜನರನ್ನು ಹೊತ್ತು ಸಾಗುವ ವಾಹನಗಳು ಬಿದ್ದು ಪ್ರಾಣ ಹಾನಿಯಂತಹ ಘಟನೆಗಳು ನಡೆದಿವೆ. ಇಂಥ ಪ್ರಯಾಣಕ್ಕೆ ಕಡಿವಾಣ ಹಾಕಬೇಕಾದ ಸಂಚಾರ ಠಾಣೆ, ಆರ್​ಟಿಒ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ.

    ಸೂಕ್ತ ಕ್ರಮ ಕೈಗೊಳ್ಳಿ: ರಾಣೆಬೆನ್ನೂರ ವಾಣಿಜ್ಯ ನಗರಿಯಾಗಿರುವುದರಿಂದ ನಿತ್ಯವೂ ಸಾವಿರಾರು ಜನ ಬಂದು ಹೋಗುತ್ತಾರೆ. ಅಪಾಯಕಾರಿ ಪ್ರಯಾಣಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ನಿಯಮ ಉಲ್ಲಂಘಿಸಿದವರಿಗೆ ಸಾವಿರಾರು ರೂ. ದಂಡ ಹಾಗೂ ವಾಹನ ಜಪ್ತಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ ಸಂಚಾರ ಠಾಣೆ ಪೊಲೀಸರು, ಆರ್​ಟಿಒ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರ ಒತ್ತಾಯಿಸಿದ್ದಾರೆ.

    ಖಾಸಗಿ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದು ಸೂಕ್ತವಲ್ಲ. ಈ ಬಗ್ಗೆ ಸಿಬ್ಬಂದಿಗೆ ಸೂಚಿಸಿ ಕೂಡಲೆ ಅಂಥ ವಾಹನಗಳ ಮಾಲೀಕರಿಗೆ ದಂಡ ವಿಧಿಸಲು ತಿಳಿಸುತ್ತೇನೆ. ಅದಕ್ಕೂ ಸರಿಪಡಿಸಿಕೊಳ್ಳದಿದ್ದರೆ ಅಂಥವರ ವಾಹನಗಳನ್ನು ಜಪ್ತಿ ಮಾಡುತ್ತೇವೆ.
    | ಟಿ.ವಿ. ಸುರೇಶ, ಡಿವೈಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts