More

    ರಾಜ್ಯ ಸರ್ಕಾರದ ಆರ್ಥಿಕತೆ ಸದೃಢ

    ಮುಧೋಳ: ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಹಲವರು ಆಡಿಕೊಳ್ಳುತ್ತಿದ್ದಾರೆ. ಆದರೆ ಈಗ ನನ್ನ ಕ್ಷೇತ್ರವೊಂದರಲ್ಲಿಯೇ 43.12 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುತ್ತಿದ್ದೇನೆ. ನಮ್ಮ ಸರ್ಕಾರ ಆರ್ಥಿಕತೆಯನ್ನು ಚೆನ್ನಾಗಿ ನಿಭಾಯಿಸುತ್ತಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

    ನಗರದ ರನ್ನ ಭವನದಲ್ಲಿ ಮಂಗಳವಾರ ತಾಲೂಕು ವ್ಯಾಪ್ತಿಯ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ತಾಲೂಕುಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ತಾಲೂಕಿನಲ್ಲಿನ ಕೆಲಸಗಳನ್ನು ನಾನು ಮಾಡಿದ್ದೇನೆ, ನಾನು ಮಾಡಿದ್ದೇನೆ ಎಂದು ಓಡಾಡುವವರು ಸತ್ಯಾಸತ್ಯತೆ ಅರಿತು ಮಾತನಾಡಬೇಕು. ಮಂಟೂರ ಮಹಾಲಕ್ಷ್ಮೀ ಏತ ನೀರಾವರಿಗೆ ಸಿದ್ದರಾಮಯ್ಯ 50 ಕೋಟಿ ರೂ. ನೀಡಿದ್ದರು. ನೀರಾವರಿ ಯೋಜನೆಗೆ ನೀಲಿನಕ್ಷೆ ಹಾಕಿದ್ದೇ ನಮ್ಮ ಸರ್ಕಾರ. ಆದರೆ ಅದನ್ನು ಕೆಲವರು ನಾವು ಮಾಡಿದ್ದು, ನಾವು ಮಾಡಿದ್ದು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅಂಥವರು ಬಹಿರಂಗ ಸವಾಲಿಗೆ ಬಂದರೆ ನಾನು ಉತ್ತರ ಕೊಡಲು ಸಿದ್ಧನಿದ್ದೇನೆ ಎಂದರು.

    ಎಲ್ಲ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಂಡು ಓಡಾಡುವವರು ಬರಗಾಲ ಸ್ಥಿತಿಯಲ್ಲಿ ಕೇಂದ್ರದಿಂದ ಹಣ ತರುವ ಧೈರ್ಯ ತೋರುತ್ತಿಲ್ಲ. ಬಡವರಿಗೆ ನೆರವಾಗಲು ಕೇಂದ್ರದವರು ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಲು ಹಿಂದೇಟು ಹಾಕಿದರು ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು.
    ಬಡವರಿಗಾಗಿ ನಮ್ಮ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ನೀವು ಮುಂದಿನ ದಿನಗಳಲ್ಲಿ ನಮ್ಮ ಕೈಬಲಪಡಿಸಬೇಕು. ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿದ್ದೀರಿ. ನಿಮ್ಮ ಋಣ ತೀರಿಸಲು ತಾಲೂಕಿನ ಅಭಿವೃದ್ಧಿ ಕೆಲಸದಲ್ಲಿ ಸದಾ ಒಂದು ಹೆಜ್ಜೆ ಮುಂದಿರುತ್ತೇನೆ ಎಂದರು.

    ಗೃಹಜ್ಯೋತಿ, ಗೃಹಲಕ್ಷ್ಮಿ, ಬಿ.ಆರ್.ಅಂಬೇಡ್ಕರ್ ಹಾಗೂ ರಾಜೀವ ಗಾಂಧಿ ವಸತಿ ಯೋಜನೆ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
    ತಹಸೀಲ್ದಾರ್ ವಿನೋದ ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೂಗಿಯ ಅಡವಿಮಠದ ನಿತ್ಯಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಗರಸಭೆ ಸದಸ್ಯರಾದ ಸತೀಶ ಮಲಘಾಣ, ಸಂತೋಷ ಪಾಲೋಜಿ, ತಾ.ಪಂ. ಇಒ ಸಂಜೀವ ಹಿಪ್ಪರಗಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts