More

    ರಾಜ್ಯ ಮಟ್ಟದ ಕುಸ್ತಿ ಹಬ್ಬ 22ರಿಂದ

    ಧಾರವಾಡ: ನಗರದಲ್ಲಿ ಫೆ. 22ರಿಂದ 25ರವರೆಗೆ ನಗರದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ 2ನೇ ಕುಸ್ತಿ ಹಬ್ಬದ ಲಾಂಛನವನ್ನು ಶಾಸಕ ಅಮೃತ ದೇಸಾಯಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬಿಡುಗಡೆ ಮಾಡಿದರು.

    ‘ಕುಸ್ತಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಕುಸ್ತಿ ಹಬ್ಬ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಕುಸ್ತಿಹಬ್ಬವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು. ಕುಸ್ತಿಹಬ್ಬದ ಸವಿನೆನಪಿಗಾಗಿ ಜಿಲ್ಲೆಯಲ್ಲಿ ಮಾದರಿ ಗರಡಿ ಮನೆಯನ್ನು ನಿರ್ವಿುಸಲಾಗುವುದು’ ಎಂದರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಕುಸ್ತಿಪಟುಗಳ ನೋಂದಣಿಯನ್ನು ಫೆ. 22ರಿಂದ ಕರ್ನಾಟಕ ಕಾಲೇಜು ಮೈದಾನದಲ್ಲಿ ಮಾಡಲಾಗುತ್ತದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿ ರಾಜ್ಯದ ವಿವಿಧ ಸಚಿವರು ಹಾಗೂ ಕ್ರೀಡಾ ಸಚಿವರು, ಜಿಲ್ಲೆಯ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಜಿಲ್ಲೆಯ ಹಿರಿಯ ಕುಸ್ತಿಪಟುಗಳು, ಸ್ಥಳೀಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ 16 ಉಪ ಸಮಿತಿಗಳನ್ನು ರಚಿಸಲಾಗಿದೆ. ಸರ್ಕಾರದಿಂದ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಪಂದ್ಯಾವಳಿ ಆಯೋಜನೆಗೆ 1.20 ಕೋಟಿ ರೂ. ಹಾಗೂ ನಗದು ಬಹುಮಾನಕ್ಕೆ 80 ಲಕ್ಷ ರೂ. ಹಂಚಿಕೆ ಮಾಡಲಾಗಿದೆ ಎಂದರು.

    ನಿವೃತ್ತ ಐಜಿಪಿ ಹಾಗೂ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕರ್ತಾರ ಸಿಂಗ್, ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ರಾಜೀವಗಾಂಧಿ ಖೇಲ್​ರತ್ನ, ಪದ್ಮಶ್ರಿ, ಅರ್ಜುನ ಪ್ರಶಸ್ತಿ ಹಾಗೂ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಯೋಗೇಶ್ವರ ದತ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

    ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಸಂಘಟಕ ನಾಗನಗೌಡ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪೈಲ್ವಾನರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಾಕೀರ ಅಹ್ಮದ್ ಕಾರ್ಯಕ್ರಮ ನಿರ್ವಹಿಸಿದರು.

    ಲಾಂಛನದ ವಿಶೇಷತೆ: ಕರ್ನಾಟಕ ಕುಸ್ತಿ ಹಬ್ಬದ ಲಾಂಛನವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಸಂಭ್ರಮಾಚರಣೆಯ ಛತ್ರಿ, ಚಾಮರಗಳು, ಕುಸ್ತಿಯ ಬೆಳ್ಳಿ ಗದೆಗಳು, ಹು-ಧಾ ಬಿಆರ್​ಟಿಎಸ್​ನ ಗುರುತಾಗಿರುವ ಚಿಗರಿಗಳೊಂದಿಗೆ ವೃತ್ತಾಕಾರದಲ್ಲಿ ರಚನೆಗೊಂಡಿರುವ ಲಾಂಛನದ ಕೇಂದ್ರ ಭಾಗದಲ್ಲಿ ನಗರದ ಪ್ರತಿಷ್ಠಿತ ಕರ್ನಾಟಕ ಕಾಲೇಜು ಕಟ್ಟಡ, ಅದರ ಮುಂಭಾಗದಲ್ಲಿ ಕುಸ್ತಿ ಆಡುತ್ತಿರುವ ಪೈಲ್ವಾನರ ರೇಖಾಚಿತ್ರಗಳನ್ನು ಚಿತ್ರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts