More

    ರಾಜ್ಯದ ಸಮಗ್ರ ಅಭಿವೃದ್ಧಿಯತ್ತ ಎಸ್ಸೆನ್ ಚಿತ್ತ

    ಚಿತ್ರದುರ್ಗ: ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಆದರ್ಶಗಳನ್ನು ಪ್ರಸ್ತುತ ರಾಜಕಾರಣಕ್ಕೆ ಅಳವಡಿಸುವ ಪ್ರಯತ್ನವಾಗಬೇಕಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
    ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಾನುವಾರ ಸೀಬಾರದ ಎಸ್.ನಿಜಲಿಂಗಪ್ಪ ಸ್ಮಾರಕ ‘ಪುಣ್ಯಭೂಮಿ’ಯಲ್ಲಿ ಏರ್ಪಡಿಸಿದ್ದ ನಿಜಲಿಂಗಪ್ಪ ಅವರ 121ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಅವರ ಕಾಲದಲ್ಲಿದ್ದ ಆದರ್ಶ, ಸರಳತೆ, ಸತ್ಯ, ನಿಷ್ಠುರ ರಾಜಕಾರಣವನ್ನು ನಾವಿಂದು ಕಾಣಲಾಗದು ಎಂದು ಹೇಳಿದರು.
    ನಿಜಲಿಂಗಪ್ಪ ಅವರ ಸರಳ, ಸಜ್ಜನಿಕೆ, ಸ್ವಾರ್ಥ ರಹಿತ ರಾಜಕಾರಣವನ್ನು ಪ್ರಸ್ತುತ ಅಳವಡಿಸಿಕೊಳ್ಳುವ ಮೂಲಕ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಬೇಕಿದೆ. ಆ ಮೂಲಕ ಭವಿಷ್ಯದ ಭವ್ಯ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕಿದೆ ಎಂದರು.
    ಮುಖ್ಯಮಂತ್ರಿಯಾಗಿದ್ದರೂ ಅವರಿಗೆ ಸ್ವಂತ ಕಾರು ಇರಲಿಲ್ಲ. ನಿಜಲಿಂಗಪ್ಪ ತಮ್ಮ ಅಧಿಕಾರಾವಧಿ, ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಒತ್ತು ನೀಡಿದರೆಂಬ ಆರೋಪಗಳ ನಡುವೆ, ಮುಖ್ಯಮಂತ್ರಿಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿ ಚಿಂತನೆ, ಸ್ವಾರ್ಥರಹಿತ ದೃಷ್ಟಿಕೋನ ಅವರದ್ದಾಗಿತ್ತು ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.
    ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ವ್ಯಕ್ತಿಯನ್ನು ಮರೆಯುವುದು ಸಹಜ. ಆದರೆ, ಅವರಿಂದ ಸಮಾಜದಲ್ಲಿ ಆದ ಬದಲಾವಣೆಗಳನ್ನು ಮರೆಯುವಂತೆ ಆಗಬಾರದು. ಕುಟುಂಬ ರಾಜಕಾರಣಕ್ಕೆ ಎಸ್‌ಎನ್ ಎಂದಿಗೂ ಅವಕಾಶ ನೀಡಲಿಲ್ಲ. ಅವತ್ತಿದ್ದ ರಾಜಕಾರಣ, ಇವತ್ತಿನ ದರ್ಪ, ಸ್ವಾರ್ಥ ರಾಜಕಾರಣದ ನಡುವೆ ಎಳ್ಳು ಕಾಳಿನ ಹೋಲಿಕೆ ಸಿಗದು ಎಂದು ಅಭಿಪ್ರಾಯಪಟ್ಟರು.
    ನಿಜಲಿಂಗಪ್ಪ ಅವರ ಆದರ್ಶಗಳನ್ನು ಪಠ್ಯದಲ್ಲಿ ಅಳವಡಿಸಬೇಕು, ವಿವಿಗಳಲ್ಲಿ ಅವರ ಕುರಿತು ಅಧ್ಯಯನ ನಡೆಯಬೇಕು ಎಂದು ತಿಳಿಸಿದ ಅವರು, ಸ್ಮಾರಕದ ಆವರಣದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
    ನಗರಸಭೆ ನಿವೃತ್ತ ಆಯುಕ್ತ ವಿಜಯಕುಮಾರ್ ಮಾತನಾಡಿ, ನಿಜಲಿಂಗಪ್ಪ ಅವರು ಎಂದಿಗೂ ತಮ್ಮ ತತ್ವಾದಾರ್ಶಗಳನ್ನು ಮಾರಿಕೊಳ್ಳಲಿಲ್ಲ. ಅಧಿಕಾರದ ನೆರಳು ಕೂಡ ಅವರ ಮಕ್ಕಳ ಮೇಲೆ ಬೀಳದಂತೆ ನೋಡಿಕೊಂಡಿದ್ದರು ಎಂದರು.
    ಟ್ರಸ್ಟ್ ಅಧ್ಯಕ್ಷ, ರಾಜ್ಯಸಭೆ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ ಮಾತನಾಡಿ, ಗ್ರಾಪಂ ವತಿಯಿಂದ ಪಾರ್ಲಿಮೆಂಟ್ ಸದಸ್ಯರಿಗೆ ಶಿಕ್ಷಣ ನೀಡಬೇಕಿದೆ. ಇದಕ್ಕಾಗಿ ಚಿತ್ರದುರ್ಗದಲ್ಲಿ ತರಬೇತಿ ಏರ್ಪಡಿಸಲು ಸ್ಪೀಕರ್ ಯು.ಟಿ.ಖಾದರ್ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ 2 ಕೋಟಿ ರೂ. ಮಂಜೂರು ಮಾಡಿದ್ದರು. ಒಂದು ಕೋಟಿ ರೂ. ವೆಚ್ಚದಲ್ಲಿ ಜಮೀನು ಖರೀದಿಸಲಾಗಿದೆ ಎಂದು ತಿಳಿಸಿದರು.
    ಮುಖಂಡರಾದ ಮಂಜಣ್ಣ, ರವಿಕುಮಾರ್, ಕನಕರಾಜ್, ವೀರೇಶ್, ಪ್ರಕಾಶ್, ಉಜ್ಜನಪ್ಪ, ರಾಜಶೇಖರ್, ಶಂಕರಪ್ಪ, ಖಾದಿ ರಮೇಶ್ ಮೊದಲಾದವರು ಇದ್ದರು. ಕೆಇಬಿ ಷಣ್ಮುಖಪ್ಪ ಸ್ವಾಗತಿಸಿದರು. ನಾಗರಾಜ್ ಸಂಗಂ ನಿರೂಪಿಸಿದರು.

    *ಕೋಟ್
    ಮುಖ್ಯಮಂತ್ರಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ನಿಜಲಿಂಗಪ್ಪ ಸ್ವಾರ್ಥರಹಿತ ಆಡಳಿತ ನೀಡಿದರು. ಪಕ್ಷದ ಸಂಘಟನೆಯಲ್ಲಿ ಸಮರ್ಥರಿದ್ದರು. ರಾಜಕಾರಣದಲ್ಲಿ ಆರೋಪಗಳು ಸಹಜ, ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ಕನಸಿತ್ತು. ತ್ವರಿತಗತಿಯಲ್ಲಿ ಪ್ರಗತಿಯಲ್ಲಿರುವ ಈ ಯೋಜನೆ ಪೂರ್ಣಗೊಳಿಸಲು ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಲಿದೆ.
    ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts