More

    ರಾಜ್ಯದಲ್ಲಿ ಕೈಗಾರಿಕೆ ಆರಂಭಕ್ಕೆ ಕೃಷಿ ಭೂಮಿ ಸ್ವಾಧೀನ ಬೇಡ

    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ರಾಜ್ಯ ಸರ್ಕಾರ ಕೈಗಾರಿಕೆಗಳ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವ ನಿರ್ಧಾರವನ್ನು ಹಿಂಪಡೆದುಕೊಳ್ಳಬೇಕು. ರಾಜ್ಯದಲ್ಲಿರುವ ಬರಡು ಪ್ರದೇಶಗಳಲ್ಲಿ ಕಾರ್ಖಾನೆ ನಿರ್ಮಾಣ ಮಾಡಲು ಯೋಜನೆ ರೂಪಿಸಲು ಚಿಂತಿಸಲಿ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.
    ಚನ್ನರಾಯಪಟ್ಟಣ ಭೂ ಸ್ವಾಧೀನ ಹೋರಾಟ ಸಮಿತಿಯಿಂದ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತರ ಪಾದಯಾತ್ರೆ ಸಮಾರೋಪ ಮತ್ತು ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಸಿಎಂ ತವರು ಜಿಲ್ಲೆ ಹಾವೇರಿಯ ರೈತರ ಹಿತ ಕಾಪಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಂದಿರುವ ಕಾಳಜಿಯನ್ನು ಚನ್ನರಾಯಪಟ್ಟಣ ಹೋಬಳಿಯ ಕೃಷಿಕರ ಮೇಲೂ ತೋರಲಿ ಎಂದರು.
    ಕೃಷಿಯನ್ನೇ ನಂಬಿ ಅನ್ನದಾತರು ಜೀವನ ರೂಪಿಸಿಕೊಂಡಿದ್ದಾರೆ. ಬರಡು ಪ್ರದೇಶ, ಹಿಂದುಳಿದ ಜಿಲ್ಲೆಗಳ ಭೂಮಿಯಲ್ಲಿ ಕೈಗಾರಿಕೆ ಮಾಡಿ ಅಭಿವೃದ್ಧಿ ಯೋಜನೆ ರೂಪಿಸಿ ಉದ್ಯೋಗ ಸೃಷ್ಟಿ ಮಾಡಬೇಕು. ಅನ್ನ ಕೊಡುವ ರೈತರ ಭೂಮಿ ಕುರಿತು ಗಮನ ಹರಿಸುವುದು ಸರ್ಕಾರದ ಕರ್ತವ್ಯ ಎಂದರು.
    ಪ್ರಾಂತ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರತೇಜಸ್ವಿ ಮಾತನಾಡಿ, ಚನ್ನರಾಯಪಟ್ಟಣದ ಶೇ.70 ರೈತರು ಭೂಮಿ ನೀಡುವುದಿಲ್ಲ ಎಂದು ಸರ್ಕಾರಕ್ಕೆ ಲಿಖಿತ ಮಾಹಿತಿ ನೀಡಿದ್ದಾರೆ ಎಂದ ಅವರು, ತಾಲೂಕಿನ ಶೇ.50 ಕೃಷಿ ಭೂಮಿ ಬಂಡವಾಳ ಶಾಹಿಗಳ ಕೈಸೇರಿದ್ದು, ಈ ಭಾಗದಲ್ಲಿ ಕೊಳೆಗೇರಿ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ ಎಂದರು.
    ಮಾಜಿ ಸಚಿವ ವಹಿಮಪಟೇಲ್ ಮಾತನಾಡಿ, ಈಗಾಗಲೇ ಸಾಕಷ್ಟು ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಇಂದಿಗೂ ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಕೆಲವೆಡೆ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ಸೋತಿದೆ. ಅನ್ನ ಬೆಳೆಯುವ ಭೂಮಿಯನ್ನು ಬಂಡವಾಳ ಶಾಹಿಗಳ ಪ್ರಭಾವಕ್ಕೆ ಮಣಿದು ಸಾಧ್ವೀನಪಡಿಸಿಕೊಳ್ಳುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದರು.
    ಶಾಸಕ ಎಲ್.ಎನ್. ನಾರಾಯಣಸ್ವಾಮಿ ಮಾತನಾಡಿ, ಜೆಡಿಎಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೇ 24 ಗಂಟೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲಾಗುವುದು ಎಂದರು.
    ಸಮಾವೇಶದ ನಿರ್ಣಯ ಹಾಗೂ ತೀರ್ಮಾನಗಳ ಒಳಗೊಂಡ ಮನವಿಯನ್ನು ದೇವನಹಳ್ಳಿ ತಹಸೀಲ್ದಾರ್ ಶಿವರಾಜ್ ಅವರಿಗೆ ಸಲ್ಲಿಸಲಾಯಿತು.
    ಜಿಲ್ಲಾ ರೈತ ಸಂಘದ ಗೌರವ ಅಧ್ಯಕ್ಷ ವಿನೋದ್‌ಕುಮಾರ್ ಗೌಡ, ತಾಲೂಕು ಅಧ್ಯಕ್ಷ ಎಂ.ವೆಂಕಟೇಶ್, ಉಪಾಧ್ಯಕ್ಷ ನಾಣಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರಾದ ರಮೇಶ್, ವೆಂಕಟರಮಣಪ್ಪ, ಪ್ರಮೋದ್, ಪ್ರಭಾ, ತಿಮ್ಮರಾಯಪ್ಪ, ಕಾರಹಳ್ಳಿ ಶ್ರೀನಿವಾಸ್, ಅತ್ತಿಬೆಲೆ ನರಸಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಮುನೇಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts