More

    ರಾಜ್ಯದಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲೋಲ್ಲ

    ಚಿತ್ರದುರ್ಗ: ದೇಶದಲ್ಲಿ ಎನ್‌ಡಿಎ ಮೈತ್ರಿಕೂಟ ಪ್ರಬಲವಾಗಿದ್ದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಒಂದೂ ಸ್ಥಾನ ಲಭಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದರು.

    ಎಸ್‌ಎಸ್‌ಕೆಎಸ್ ಸಮುದಾಯ ಭವನದಲ್ಲಿ ಲೋಕಸಭಾ ಚುನಾವಣೆ ಸಂಬಂಧ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮನ್ವಯ ಮತ್ತು ಚುನಾವಣಾ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದರು.

    ಪ್ರಧಾನಿ ನರೇಂದ್ರಮೋದಿ ಅವರು ದೇಶ ಮತ್ತು ಜನರಿಗಾಗಿ ಜೀವನ ಮುಡಿಪಾಗಿಟ್ಟಿದ್ದಾರೆ. ವಿದೇಶಿಗರು ನಮಗೆ ಇಂಥ ಪ್ರಧಾನಿ ಬೇಕೆನ್ನುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ರೈಲ್ವೆ, ಪಡಿತರ, ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ, ರೈತಪರ ಯೋಜನೆ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ತಂದಿದ್ದಾರೆ. ರಾಷ್ಟ್ರದ ಅಭಿವೃದ್ಧಿಗಾಗಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

    ಜೆಡಿಎಸ್ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ದೇಶ ಮತ್ತು ರಾಜ್ಯದ ಒಳಿತಿಗಾಗಿ ಮೈತ್ರಿ ಅನಿವಾರ್ಯತೆ ಇದ್ದು, ಬಿಜೆಪಿ ಜೊತೆ ಸಾಮರಸ್ಯದಿಂದ ಕೆಲಸ ಮಾಡಲಿದ್ದೇವೆ. ಕುಮಾರಣ್ಣ, ಬಿಎಸ್‌ವೈ ಮೈತ್ರಿ ಸರ್ಕಾರದ ಸಾಧನೆ ಇಂದಿಗೂ ಜನ ಮರೆತಿಲ್ಲ. ಮತ್ತೆ ಒಂದಾಗಿರುವ ಕುರಿತು ಮತದಾರರಲ್ಲೂ ಸಂತಸವಿದೆ. ಅನುಭವಿ ರಾಜಕಾರಣಿ ಗೋವಿಂದ ಕಾರಜೋಳ ಗೆಲ್ಲಿಸಿದರೆ, ಕ್ಷೇತ್ರದ ಅಭಿವೃದ್ಧಿಗೂ ಅನುಕೂಲ ಎಂದು ಹೇಳಿದರು.

    ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, 60 ವರ್ಷ ದೇಶ ಆಳಿದ್ದು, ಕಾಂಗ್ರೆಸ್. ಆದರೆ, ಅದರ ಎರಡು ಪಟ್ಟು ಅಭಿವೃದ್ಧಿ ಆಗಿರುವುದು ನರೇಂದ್ರ ಮೋದಿ ಅವರು 10 ವರ್ಷ ಪ್ರಧಾನಿಯಾದ ಅವಧಿಯಲ್ಲಿ. ದೇಶದ ಭದ್ರತೆಗೆ ಹೆಚ್ಚು ಒತ್ತು ನೀಡಿದ್ದಾರೆ. 23 ವರ್ಷದಿಂದ ಸಾಂವಿಧಾನಿಕ ಉನ್ನತ ಹುದ್ದೆಯಲ್ಲಿದ್ದು, ಒಂದೂ ಭ್ರಷ್ಟಾಚಾರದ ಆರೋಪವಿಲ್ಲದಂತೆ ಆಡಳಿತ ನಡೆಸಿದ್ದಾರೆ ಎಂದರು.

    ಸರ್ವೋದಯ ಸಿದ್ಧಾಂತ, ಅಂತ್ಯೋದಯ ಸಂಕಲ್ಪ, ಭ್ರಷ್ಟಾಚಾರ ಮುಕ್ತ ಭಾರತವೇ ಮೋದಿ ಅವರ ಗುರಿ. ಮೂರನೇ ಬಾರಿ ಪ್ರಧಾನಿ ಆಗಿಸಲು ಜನ ಸಿದ್ಧರಿದ್ದಾರೆ. ಹಾಲು-ಜೇನಿನಂತೆ ಒಗ್ಗೂಡಿ ಕೆಲಸ ಮಾಡಿದರೆ, ಎಲ್ಲ ಕ್ಷೇತ್ರಗಳನ್ನೂ ಜಯಿಸಬಹುದು ಎಂದು ದೇವೇಗೌಡರೇ ಹೇಳಿದ್ದಾರೆ. ಇದಕ್ಕೆ ಬದ್ಧರಾಗಿ ಕೆಲಸ ಮಾಡೋಣ ಎಂದು ಹೇಳಿದರು.

    ಜಿಲ್ಲೆಯ ಪ್ರಗತಿಗೆ ಬದ್ಧ: ಅಭಿವೃದ್ಧಿ ಆಗದ ಚಿತ್ರದುರ್ಗ ಜಿಲ್ಲೆಯ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ದುಡಿಯಲಿದ್ದೇನೆ. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿಸಲು ಸಾಕಷ್ಟು ಪ್ರಯತ್ನಿಸಿದ್ದೆ. ಹೀಗಾಗಿ ಕೇಂದ್ರ ಸರ್ಕಾರ 5,300 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಅದಕ್ಕೆ ಬೇಕಾದ ದಾಖಲೆ ಒದಗಿಸಿ ಹಣ ತರುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಅಲ್ಲದೆ, ಬಿಎಸ್‌ವೈ, ಬೊಮ್ಮಾಯಿ ಅವಧಿಯ ಯೋಜನೆ ಅರ್ಧಕ್ಕೆ ನಿಲ್ಲಿಸಿದೆ ಎಂದು ಕಾರಜೋಳ ತಿಳಿಸಿದರು.

    ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಈ ಮೈತ್ರಿ ಕಾಂಗ್ರೆಸ್ಸಿಗರ ಎದೆ ನಡುಗಿಸುವಂತಿದೆ. ಇದೊಂದು ವಿಶೇಷ ಚುನಾವಣೆಯಾಗಿದ್ದು, ನಮಗೀಗ ಮೋದಿ, ದೇವೇಗೌಡರು ಇಬ್ಬರೂ ಪ್ರಧಾನಿ ಇದ್ದು, ದೇಶಕ್ಕಾಗಿ ಈ ನಾಯಕರ ಹಾಗೂ ರಾಜ್ಯಕ್ಕೆ ಬಿ.ಎಸ್.ಯಡಿಯೂರಪ್ಪ, ಕುಮಾರಣ್ಣ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನೀಡಿದ ಕೊಡುಗೆ ಮೇಲೆ ಧೈರ್ಯವಾಗಿ ಮತಯಾಚಿಸಬಹುದು. ಕೇಂದ್ರ ಸಚಿವ ನಿತೀನ್‌ಗಡ್ಕರಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸಿದಷ್ಟು ಇನ್ಯಾರೂ ಮಾಡಿಲ್ಲ ಎಂದರು.

    28 ಕ್ಷೇತ್ರ ಗೆಲ್ಲುತ್ತೇವೆ: ಹೊಂದಾಣಿಕೆ ಆಗಿದ್ದು, 28 ಕ್ಷೇತ್ರ ಗೆಲ್ಲುವಲ್ಲಿ ಯಾವ ಅನುಮಾನ ಇಲ್ಲ. ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಅವಧಿಯಲ್ಲಿ ಜನರಿಗೆ ನೀಡಿದ ಕೊಡುಗೆಗಳನ್ನು ತಿಳಿಸುವ ಕೆಲಸ ಆಗಬೇಕು. ಅನ್ಯೋನ್ಯತೆಯೊಂದಿಗೆ ಕಾರಜೋಳ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಜೆಡಿಎಸ್ ಎಂಎಲ್ಸಿ ತಿಪ್ಪೇಸ್ವಾಮಿ ಸಲಹೆ ನೀಡಿದರು.

    ಎಂಎಲ್ಸಿಗಳಾದ ಎನ್.ರವಿಕುಮಾರ್, ಕೆ.ಎಸ್.ನವೀನ್, ಚಿದಾನಂದ ಗೌಡ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಎ.ಮುರಳಿ, ಜೆಡಿಎಸ್ ತುಮಕೂರು ಅಧ್ಯಕ್ಷ ಅಂಜಿನಪ್ಪ, ಚಿತ್ರದುರ್ಗದ ಅಧ್ಯಕ್ಷ ಎಂ.ಜಯಣ್ಣ, ಮುಖಂಡರಾದ ಡಿ.ಯಶೋಧರ, ರವೀಶ್, ಬಿ.ಕಾಂತರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts