More

    ರಾಜ್ಯಕ್ಕೆ ಹೆಮ್ಮೆ ತಂದ ಅಕ್ಷಯ ದೇಶಪಾಂಡೆ

    ಬೆಳಗಾವಿ: ಇಲ್ಲಿನ ಯುವ ಪರ್ವತಾರೋಹಿ ಅಕ್ಷಯ ದೇಶಪಾಂಡೆ ಅವರು ಎವರೆಸ್ಟ್ ಪೂರ್ವ ಶಿಖರಾರೋಹಣ ಪೂರ್ತಿಗೊಳಿಸುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

    ಆ.26ರಂದು 12:45ಕ್ಕೆ ದೇಶದ ನಾನಾ ಭಾಗಗಳ ಪರ್ವತಾರೋಹಿಗಳ ತಂಡ ಉತ್ತರಾಖಂಡದ ಗಂಗೋತ್ರಿ ರಾಷ್ಟ್ರೀಯ ಉದ್ಯಾನದ ಅತ್ಯಂತ ಎತ್ತರದ ಶಿಖರವಾದ ಪರ್ವಾಲ್‌ನಲ್ಲಿರುವ ಹಿಮಾಲಯ ಶ್ರೇಣಿಯ 7075 ಮೀಟರ್ ಎತ್ತರದ ಸತೋಪಂಥ್ ಶಿಖರ ಏರಿತು. ನವದೀಪ್ ಸೂದ, ರೋಹಿತ್ ಪಾಟೀಲ್, ಸತ್ಯಬ್ರತ ದಾಸ್, ಸಚಿನ್ ಕುಮಾರ ಅವರನ್ನೊಳಗೊಂಡ ಈ ತಂಡದಲ್ಲಿ ಬೆಳಗಾವಿಯ ಅಕ್ಷಯ್ ದೇಶಪಾಂಡೆ ಅವರೂ ಇದ್ದರು.

    ಸತೋಪಂಥ್ ದಂಡ ಯಾತ್ರೆಯನ್ನು ‘ಎವರೆಸ್ಟ್ ಪೂರ್ವ ಶಿಖರಾರೋಹಣ’ ಎಂದು ಕರೆಯಲಾಗುತ್ತದೆ. ಪೂರ್ವ ಸಿದ್ಧತೆಗಳಿಲ್ಲದೆ ಎವರೆಸ್ಟ್ ಪರ್ವತ ಏರುವುದು ಸುಲಭವಲ್ಲ. ಅದಕ್ಕಾಗಿ ಅನೇಕ ಪರ್ವತಾರೋಹಿಗಳು ಎವರೆಸ್ಟ್ ಏರಲು ಪೂರ್ವಸಿದ್ಧತೆಯಂತೆ ಈ ಶಿಖರವನ್ನು ಏರುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಾರೆ.

    ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿರುವ ಅಕ್ಷಯ್ ಅವರು ಕರಕುಶಲ ವಸ್ತುಗಳು ಮತ್ತು ಖಾದಿ ಪ್ರಚಾರ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕ್ರೀಡೆಗಳು, ಜತೆಗೆ ಸಾಹಸ ರಾಕ್ ಕೈಂಬಿಂಗ್ ಹಾಗೂ ಪರ್ವತಾರೋಹಣದಲ್ಲಿ ಔಪಚಾರಿಕ ತರಬೇತಿ ಪಡೆದಿದ್ದಾರೆ. ಇದೇ ವರ್ಷದ ಮೇ ತಿಂಗಳಲ್ಲಿ ಅವರು ಎವರೆಸ್ಟ್ ಪೂರ್ವ ಶಿಖರಾರೋಹಣದಲ್ಲಿ ಪಾಲ್ಗೊಂಡಿದ್ದರು.

    ಆದರೆ ದೇಹದಲ್ಲಿ ಆಮ್ಲಜನಕದ ಕೊರತೆಯಾಗಿದ್ದರಿಂದ ಪ್ರಯತ್ನದಲ್ಲಿ ವಿಫಲರಾಗಿದ್ದರು. 2ನೇ ಬಾರಿ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಷಯ್ ದೇಶಪಾಂಡೆ ಮೌಂಟ್ ಎವರೆಸ್ಟ್ ಏರುವ ಗುರಿ ಇಟ್ಟುಕೊಂಡಿದ್ದಾರೆ. ಜತೆಗೆ ಎಲ್ಲ ಖಂಡಗಳ ಅತ್ಯುನ್ನತ ಶಿಖರಗಳನ್ನು ಏರುವ ಗುರಿ ಕೂಡ ಅವರದ್ದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts