More

    ರಾಜಬೀದಿಗಳಲ್ಲಿ ರಾಜಮಾತೆಯ ವೈಭವದ ಮೆರವಣಿಗೆ

    ಚಿತ್ರದುರ್ಗ: ರಾಜಮಾತೆ, ನಗರದ ಶಕ್ತಿದೇವತೆ ಉಚ್ಚಂಗಿಯಲ್ಲಮ್ಮ ದೇವತೆಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾಜಬೀದಿಗಳಲ್ಲಿ ವೈಭವದಿಂದ ಜೋಡೆತ್ತಿನ ಗಾಡಿಯ ರಥೋತ್ಸವ ಮೆರವಣಿಗೆ ನೆರವೇರಿತು.

    ಕೋಟೆನಾಡಿನ ಪಾಳೆಗಾರರ ಕುಲದೇವತೆ ಉತ್ಸವಾಂಬೆ ದೇವಿಯ ಉತ್ಸವ ಮೂರ್ತಿಗೆ ಕಮಲ, ಸಂಪಿಗೆ, ಸೇವಂತಿಗೆ, ಗುಲಾಬಿ, ಕನಕಾಂಬರ, ದುಂಡು ಮಲ್ಲಿಗೆ, ಕಾಕಡ, ಪತ್ರೆ, ಸುಗಂದರಾಜ ಸೇರಿ ವಿವಿಧ ಪುಷ್ಪ, ಸಾವಿರಾರು ಮಣಿಗಳಿಂದ ಅಲಂಕರಿಸಿದ ನಂತರ ಸುಸಜ್ಜಿತ ಉಚ್ಛಾಯದಲ್ಲಿ ಸಂಪ್ರದಾಯದಂತೆ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಉಧೋ ಉಧೋ ಹರ್ಷೋದ್ಗಾರ ಮೊಳಗಿತು.

    ಅಷ್ಟ ಭುಜಗಳುಳ್ಳ ಉತ್ಸವ ಮೂರ್ತಿ ನಾಡದೇವತೆ ಚಾಮುಂಡೇಶ್ವರಿ ದೇವಿಯಂತೆ ಕಂಗೊಳಿಸಿತು. ಕೈಗಳಲ್ಲಿ ತ್ರಿಶೂಲ, ಕತ್ತಿ, ಶಂಖ, ಖಡ್ಗ, ಗಧೆ ಇನ್ನಿತರೆ ಆಯುಧಗಳನ್ನು ಹಿಡಿದು ಶಕ್ತಿ ಸ್ವರೂಪಿಣಿ ದೇವಿ ಮಾದರಿಯ ಅಲಂಕಾರ ಎಲ್ಲರ ಗಮನ ಸೆಳೆಯಿತು.

    ಕೋಟೆ ರಸ್ತೆಯ ದೇವಿಯ ಸನ್ನಿಧಾನದ ಮುಂಭಾಗ ಮಹಾಮಂಗಳಾರತಿ ನೆರವೇರಿದ ನಂತರ ಮೆರವಣಿಗೆಗೆ ಚಾಲನೆ ದೊರೆಯಿತು. ಇಲ್ಲಿಂದ ಆರಂಭವಾಗಿ ಚಿಕ್ಕಪೇಟೆ, ಆನೆ ಬಾಗಿಲು, ಬುರುಜನಹಟ್ಟಿ, ಸಿಹಿನೀರು ಹೊಂಡದ ರಸ್ತೆ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಮಹಾತ್ಮಗಾಂಧಿ, ಎಸ್‌ಬಿಐ ವೃತ್ತ, ಧರ್ಮಶಾಲೆ ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಸುಣ್ಣದಗುಮ್ಮಿ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್ ಮಾರ್ಗವಾಗಿ ಸಂಚರಿಸಿ ರಾತ್ರಿ ದೇಗುಲ ತಲುಪಿತು.

    ಕಹಳೆ, ಉರುಮೆ, ತಮಟೆ, ಕರಡಿ ಚಮ್ಮಾಳ, ನಂದಿ ಕೋಲು, ಡೊಳ್ಳು, ಕೀಲುಕುದುರೆ, ಬೊಂಬೆ ಕುಣಿತ ಸೇರಿ ವಿವಿಧ ಜನಪದ ಕಲಾತಂಡಗಳು ಮೆರುಗು ನೀಡಿದವು. ವಾದ್ಯಗಳ ಸದ್ದಿಗೆ ಯುವಕರು ಕುಣಿದು ಸಂಭ್ರಮಿಸಿದರು. ಮಹಿಳಾ ಭಕ್ತರು ಮಾರ್ಗ ಮಧ್ಯೆ ಅಲ್ಲಲ್ಲಿ ತುಪ್ಪದಾರತಿ ಬೆಳಗಿ ಭಕ್ತಿ ಸಮರ್ಪಿಸಿದರು.

    ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ನೀರೆರಚಿ, ರಂಗೋಲಿ ಹಾಕಿ ಪುರ ಪ್ರವೇಶಿಸಿದ ದೇವಿಯನ್ನು ಭವ್ಯವಾಗಿಯೇ ಸ್ವಾಗತಿಸಿದರು. ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ಸೇರಿ ಪ್ರಸಾದ ವಿತರಿಸಲಾಯಿತು.

    ಕಂಗೊಳಿಸಿದ ಕಲಶಾಲಂಕಾರ: ದೇವಿಯ ವೈಭವೋಪೇತ ಅಲಂಕಾರ ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಅತ್ಯಂತ ಆಕರ್ಷಣೀಯವಾಗಿತ್ತು. ಕಲಶಾಲಂಕಾರ ಮಾದರಿ ಭಕ್ತರ ಕಣ್ಮನ ಸೆಳೆಯಿತು. ಕೊರಳಲ್ಲಿದ್ದ ನೆಕ್ಲೆಸ್ ರೂಪದ ಹಾರ ಕೂಡ ಗಮನ ಸೆಳೆಯಿತು. ಹಿಂಬದಿಯ ಅಲಂಕಾರವೂ ವಿಶೇಷವಾಗಿತ್ತು. ಕಲಶ ಮತ್ತು ಸೈಡ್ ಕುಚ್ಚುಗಳು ವಿದ್ಯುತ್ ಕಂಬ, ಮರಗಳಿಗೆ ತಗುಲದಂತೆ ತಂತ್ರಜ್ಞಾನ ಬಳಸಲಾಗಿತ್ತು.

    ದೇವಿಗೆ ಮೀಸಲು ಸಮರ್ಪಣೆ: ಮಕ್ಕಳು, ಕುಟುಂಬ ಸದಸ್ಯರೆಲ್ಲರೂ ಆರೋಗ್ಯವಾಗಿರಲಿ ಎಂಬ ಉದ್ದೇಶದಿಂದ ಸೀರೆ, ರವಿಕೆ, ಬಳೆ, ಅಕ್ಕಿ, ಬೇಳೆ, ಬೆಲ್ಲ, ಅರಿಷಿನ, ಕುಂಕುಮ, ಕೊಬ್ಬರಿ, ಎಲೆ, ಅಡಿಕೆ, ಹಣ್ಣು, ಕಾಯಿ ಒಳಗೊಂಡ ಮಡ್ಲಕ್ಕಿಯನ್ನು ದೇವಿಗೆ ಮೀಸಲು ರೂಪದಲ್ಲಿ ನೀಡುವ ಪ್ರತೀತಿ ಇದೆ. ಅದರಂತೆ ಭಕ್ತರು ದೇವಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿದರು.

    ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಉತ್ಸವಾಂಬ ದೇವಿಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಮಿಸಿದರು. ನಂತರ ಮೆರವಣಿಗೆಗೆ ಚಾಲನೆ ನೀಡಿದರು. ಕೆಲ ನಿಮಿಷ ಯುವಕರೊಂದಿಗೆ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts