More

    ರಾಜಕೀಯವಾಗಿ ಬೆಳೆಯಲು ಗೋಪಾಲಗೌಡರೇ ಕಾರಣ; ತತ್ವ, ಸಿದ್ಧಾಂತದ ಹೋರಾಟ ಹೇಳಿಕೊಟ್ಟರು: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ

    ಭದ್ರಾವತಿ: ಶಾಂತವೇರಿ ಗೋಪಾಲಗೌಡರು ನನ್ನ ಜೀವನದ ಮಾರ್ಗದರ್ಶಕರು. ಅವರ ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡ ಪರಿಣಾಮ ನಾನು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.
    ನಗರದ ಹುತ್ತಾ ಕಾಲನಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ಹಾಗೂ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಶನಿವಾರ ಆಯೋಜಿಸಿದ್ದ ದಿ. ಶಾಂತವೇರಿ ಗೋಪಾಲಗೌಡರ ಸಾಧನೆ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಉಳುವವನೆ ಭೂ ಒಡೆಯ ಚಳವಳಿಯಲ್ಲಿ ಅವರ ಪಾತ್ರ ಸಾಕಷ್ಟಿದೆ. ಅವರ ರಾಜಕೀಯ ಹೋರಾಟದಿಂದ ಪ್ರೇರಿತನಾದ ನಾನು 1972ನೇ ಇಸವಿಯಲ್ಲಿ ಮೊದಲ ಶಾಸನಸಭೆಯಲ್ಲಿ ಸತತ ಮೂರು ತಾಸು ಬಡವರು, ಗೇಣೀದಾರರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಪರಿಣಾಮವಾಗಿ ಒಂದು ಸಮಿತಿ ರಚನೆ ಮಾಡಲಾಯಿತು. ಆ ಸಮಿತಿ ಮೂಲಕ ನಾಲ್ಕೈದು ತಿಂಗಳುಗಳ ಹೋರಾಟದ ನಂತರ ಭೂಮಿಯ ಹಕ್ಕನ್ನು ಉಳುವವನಿಗೆ ಕೊಡಿಸಲು ಸಾಧ್ಯವಾಯಿತು ಎಂದರು.
    ರಾಜಕೀಯದಲ್ಲಿ ತತ್ವ-ಸಿದ್ಧಾಂತಗಳನ್ನು ಇಟ್ಟುಕೊಂಡು ಹೋರಾಟ ಮಾಡಬೇಕೆಂದು ಹೇಳಿಕೊಟ್ಟವರು ಗೋಪಾಲಗೌಡರು. ನನ್ನ ಇಳಿವಯಸ್ಸಿನವರೆಗೂ ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ. ಜೀವನದಲ್ಲಿ ಸಾಕ್ಷಾತ್ಕಾರ ಪಡೆದುಕೊಂಡಿದ್ದೇನೆ. ಹೆಣ್ಣು ಮಕ್ಕಳಿಗೂ ಸಮಾನ ಸ್ಥಾನಮಾನಗಳು ಲಭ್ಯವಾಗಬೇಕು. ಹೆಚ್ಚೆಚ್ಚು ರಾಜಕೀಯ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು. ಸಮಾಜವಾದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಇಚ್ಛಾಶಕ್ತಿಯನ್ನು ಬೆಳೆಸಿಕೊಂಡು ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ತಿಳಿಸಿದರು.
    ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಕಾಗೋಡು ತಿಮ್ಮಪ್ಪ ಮಂತ್ರಿಯಾಗಿದ್ದಾಗ ಭದ್ರಾವತಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಆಸ್ಪತ್ರೆಗಳ ಅಭಿವೃದ್ಧಿ, ಹಕ್ಕುಪತ್ರ ವಿತರಣೆ, ಎಂಪಿಎಂ ಹಾಗೂ ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದು ಕ್ಷೇತ್ರದ ಶಾಸಕನಾಗಿ ಅಭಿನಂದಿಸುತ್ತೇನೆ. ನಾನು ಮೂರು ಬಾರಿ ಸತತವಾಗಿ ಶಾಸಕನಾಗಲು ಅವರ ಮಾರ್ಗದರ್ಶನವೇ ಕಾರಣ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts