More

    ರಾಜಕಾರಣಿಗಳಿಗೆ ನಾಲಿಗೆ ಹಿಡಿತ ಇರಲಿ

    ಬೆಳಗಾವಿ: ಸದಾ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳ ನಡೆ, ನುಡಿಗಳು ಜನರ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಹಾಗಾಗಿ ಎಲ್ಲ ಪಕ್ಷದ ರಾಜಕಾರಣಿಗಳು ಮಾತನಾಡುವ ಮುನ್ನ ನಾಲಿಗೆ ಮೇಲೆ ಹಿಡಿತವಿಟ್ಟುಕೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬುದ್ಧಿವಾದ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರ ಜೀವನದಲ್ಲಿರುವವರ ಮಾತುಗಳಿಗೆ ಬೆಲೆ ಜಾಸ್ತಿ. ಹಾಗಾಗಿ ಮಾತನಾಡುವ ಮುನ್ನ ಎಚ್ಚರ ವಹಿಸಬೇಕು. ರಾಜಕೀಯ ಭಾಷಣಗಳನ್ನು ಕಾನೂನು ಭಾಗವಾಗಿ ನೋಡುವುದು ಕಷ್ಟ ಎಂದರು.

    ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯನವರು ಉಚಿತ ಅಕ್ಕಿ, ವಿದ್ಯುತ್ ಸೇರಿ ಇತರ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಕೆಲವರು ಬಹಿರಂಗವಾಗಿ ಕುಕ್ಕರ, ಮಿಕ್ಸರ್ ಇತರ ವಸ್ತುಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮತದಾರರನ್ನು ಸೆಳೆದುಕೊಳ್ಳಲು ಕಸರತ್ತು ನಡೆಸುತ್ತಿರುವ ಮತ್ತು ಅಡ್ಡದಾರಿ ತುಳಿಯುತ್ತಿರುವ ಕುರಿತು ಎಲ್ಲ ಪಕ್ಷದ ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ ಎಂದಿದ್ದಾರೆ.

    ನನ್ನ ರಾಜಕೀಯ ಜೀವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಕೀಳು ಮಟ್ಟದ ರಾಜಕಾರಣ ಮಾಡಿರುವುದನ್ನು ನೋಡಿರಲಿಲ್ಲ. ಬಯಲಾಟದಲ್ಲಿ ದೆವ್ವ ಬಂದವರಂತೆ ಸಿದ್ದರಾಮಯ್ಯನವರು ಆಡುತ್ತಿದ್ದಾರೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಸಾರ್ವಜನಿಕರ ಸಭೆಯಲ್ಲಿ ಮತದಾರರಿಗೆ ಹಣ ನೀಡುವ ಕುರಿತು ಮಾತನಾಡಿರುವ ಬಗ್ಗೆ ಮಾಹಿತಿ ಇಲ್ಲ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಅದಕ್ಕಾಗಿ ಚುನಾವಣೆ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.

    ಶೀಘ್ರವೇ ಕಳಸಾ ಬಂಡೂರಿಗೆ ಅಡಿಗಲ್ಲು: ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ದಿನದಿಂದ ಇಲ್ಲಿಯವರೆಗೆ ಕಳಸಾ ಬಂಡೂರಿ ಯೋಜನೆಗಾಗಿ ನಿರಂತರ ಪ್ರಯತ್ನ ಮಾಡಿಕೊಂಡು ಬರುತ್ತಿದೆ. ಹೀಗಾಗಿ ನ್ಯಾಯಾಧಿಕರಣ ತೀರ್ಪು ನಮ್ಮ ಪರವಾಗಿ ಬಂದಿದೆ. ಕಳಸಾದಲ್ಲಿ 1.72 ಟಿಎಂಸಿ, ಬಂಡೂರಲ್ಲಿ 2.18 ಟಿಎಂಸಿ ಸೇರಿ ಒಟ್ಟು 3.9 ಟಿಎಂಸಿ ನೀರು ಹಂಚಿಕೆಯಾಗಿದೆ. ನಮ್ಮ ಪಾಲದ ಕುಡಿಯುವ ನೀರನ್ನು ಪಡೆಯಲು ಯಾರ ಅಪ್ಪಣೆ ಬೇಕಾಗಿಲ್ಲ. ಯಾರ ಭಿಕ್ಷೆಯೂ ಬೇಕಾಗಿಲ್ಲ. ಎಲ್ಲ ಆಯಾಮಗಳಲ್ಲಿ ಕ್ಲಿಯರ್ ಮಾಡಿಕೊಂಡು ಯೋಜನೆಗೆ ಅಡಿಗಲ್ಲು ಹಾಕುತ್ತೇವೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

    ಕೃಷ್ಣಾ ಮೇಲ್ದಂಡೆ ತೀರ್ಪು ನಮ್ಮ ಪರ: ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ 5.91 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ. ನಮಗೆ ಹಂಚಿಕೆಯಾಗಿರುವ 130 ಟಿಎಂಸಿ ನೀರು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಕೃಷ್ಣಾ ಮೇಲ್ದಂಡೆ ಎರಡನೇ ಹಂತದ ಯೋಜನೆಗೆ ಗಜೆಟ್ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ನ್ಯಾಯಾಲಯದಲ್ಲಿ ವಾದ ಮಂಡಿಸಿವೆ. ಆಂಧ್ರಪ್ರದೇಶದ ವಾದ ಬಾಕಿ ಉಳಿದುಕೊಂಡಿದೆ. ಇದರಲ್ಲಿ ನಮ್ಮ ಪರವಾಗಿ ತೀರ್ಪು ಬರಲಿದೆ ಎಂದು ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

    ನಾನಾಗಲಿ, ನನ್ನ ಕುಟುಂಬದವರಾಗಲಿ ಬೆಳಗಾವಿ ಜಿಲ್ಲೆಯಲ್ಲಿ ಯಾವತ್ತೂ ರಾಜಕಾರಣ ಮಾಡುವುದಿಲ್ಲ. ಸದ್ಯ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಪುತ್ರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದಾರೆ.
    | ಗೋವಿಂದ ಕಾರಜೋಳ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts