More

    ರಾಗಿ ಮಾರಾಟಕ್ಕೆ ದಾಖಲೆ ಸಮಸ್ಯೆ

    ಮುಳಬಾಗಿಲು: ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡುತ್ತಿದ್ದರೂ ಹಲವಾರು ರೈತರು ಬೆಳೆ ಸರ್ವೇ ನಮೂದು ಮಾಡದೆ ಇರುವುದರಿಂದ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

    ಸಾಮಾನ್ಯವಾಗಿ ಈ ಭಾಗದಲ್ಲಿ ಬೆಳೆಯುವ ಕ್ವಿಂಟಾಲ್ ರಾಗಿ 1500ರಿಂದ 2000 ರೂ. ವರೆಗೂ ಮಾರಾಟವಾಗುತ್ತಿತ್ತು. ಆದರೆ ಸರ್ಕಾರ ಕ್ವಿಂಟಾಲ್‌ಗೆ 3,295 ರೂ. ನಂತೆ ಖರೀದಿ ಮಾಡುತ್ತಿದ್ದು, ಚೀಲಕ್ಕೆ 22 ರೂ. ನೀಡಲಾಗುತ್ತಿದೆ. ಎಪಿಎಂಸಿ ಯಾರ್ಡಿನಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಗೋದಾಮಿಗೆ ತಾಲೂಕಿನ 300ಕ್ಕೂ ಹೆಚ್ಚು ರೈತರು 6,700 ಕ್ವಿಂಟಾಲ್ ರಾಗಿಯನ್ನು ಮಾರ್ಚ್‌ನಲ್ಲಿ ಮಾರಾಟ ಮಾಡಿದ್ದಾರೆ.

    ತಾಲೂಕಿನಲ್ಲಿ 2.50 ಲಕ್ಷ ಟನ್ ರಾಗಿ: ತಾಲೂಕಿನಲ್ಲಿ 30 ಸಾವಿರ ರೈತರು, 12,500 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 2.50 ಲಕ್ಷ ಕ್ವಿಂಟಾಲ್ ರಾಗಿ ಬೆಳೆದಿದ್ದಾರೆ. ಎಲ್ಲ ರೈತರು ರಾಗಿ ಮಾರಾಟ ಮಾಡದೆ ಕುಟುಂಬದ ಬಳಕೆಗೆ ಉಪಯೋಗಿಸಿಕೊಳ್ಳುತ್ತಾರೆ. ಆದರೆ ಹೆಚ್ಚುವರಿ ರಾಗಿ ಮಾರಾಟ ಮಾಡಿ ಕೃಷಿ ಚಟುವಟಿಕೆಗೆ ಮತ್ತು ಕುಟುಂಬ ನಿರ್ವಹಣೆಗೆ ಬಳಕೆ ಮಾಡಿಕೊಳ್ಳುತ್ತಾರೆ. ಹೀಗೆ ಮಾರಾಟ ಮಾಡಲು ಮುಂದಾಗಿರುವ ರೈತರಿಗೆ ಪಹಣಿ ಸಮಸ್ಯೆ ಎದುರಾಗಿದ್ದು, ಇದರಿಂದ ರಾಗಿ ಮಾರಲು ಸಾಧ್ಯವಾಗುತ್ತಿಲ್ಲ. ಬಹುತೇಕ ರೈತರ ಪಹಣಿ ತಂದೆ, ತಾತನ ಹೆಸರಿನಲ್ಲಿರುವುದರಿಂದ ಬೆಂಬಲ ಬೆಲೆಯಲ್ಲಿ ರಾಗಿ ಮಾರಲು ಸಮಸ್ಯೆಯಾಗುತ್ತಿದೆ.

    ನೋಂದಾಯಿಗೆ ಸಮಸ್ಯೆ: ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲು ಮಾಡಬೇಕಿದ್ದು, ಆಗ ರಾಗಿ ಬೆಳೆ ನಮೂದು ಆಗದಿದ್ದಲ್ಲಿ ಈಗ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡಲು ಆಗುತ್ತಿಲ್ಲ. ಮಾ.31ರವರೆಗೂ ರಾಗಿ ಖರೀದಿ ಕೇಂದ್ರಗಳಿಗೆ ಅವಕಾಶವಿದ್ದು, ತಾಲೂಕಿನಲ್ಲಿ ನೋಂದಾಯಿಸಿದ 30 ರೈತರು ಮಾತ್ರ ರಾಗಿ ಪೂರೈಕೆ ಮಾಡಲು ಅವಕಾಶವಿದೆ. ಹೊಸದಾಗಿ ನೋಂದಾಯಿಸಲು ರೈತರಿಗೆ ದಾಖಲೆಗಳ ಸಮಸ್ಯೆ ಉಂಟಾಗಿದೆ.

    ರೈತರ ಖಾತೆಗಿಲ್ಲ ಹಣ: ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಿ ಒಂದು ತಿಂಗಳು ಕಳೆಯುತ್ತಾ ಬಂದರೂ ರೈತರ ಖಾತೆಗೆ ಇನ್ನೂ ಸರ್ಕಾರದಿಂದ ಹಣ ಜಮಾ ಆಗಿಲ್ಲ. ಗೋದಾಮಿಗೆ ರಾಗಿ ಮಾರಾಟ ಮಾಡಿರುವ ರೈತರು ಹಣಕ್ಕಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಮುಳಬಾಗಿಲು ಖರೀದಿ ಕೇಂದ್ರದಲ್ಲಿ ರೈತರು ದಾಖಲೆಯೊಂದಿಗೆ ಹೆಸರು ನೋಂದಾಯಿಸಿ ಬಂದ ತಕ್ಷಣ ರಾಗಿ ತೆಗೆದುಕೊಳ್ಳುತ್ತಿದ್ದೇವೆ. ಈಗಾಗಲೆ 6700 ಕ್ವಿಂಟಾಲ್ ರಾಗಿಯನ್ನು 350 ರೈತರಿಂದ ಪಡೆಯಲಾಗಿದೆ. ಇನ್ನೂ 30 ರೈತರು ನೋಂದಾಯಿಸಿದ್ದು ರಾಗಿ ತರಬೇಕಿದೆ.
    ಎಸ್.ಎನ್.ವೆಂಕಟೇಶ್, ರಾಗಿ ಖರೀದಿ ಅಧಿಕಾರಿ, ಆಹಾರ ನಾಗರಿಕ ಸರಬರಾಜು ಕೇಂದ್ರ ಮುಳಬಾಗಿಲು

    ರೈತರು ಬೆಳೆಯ ದಾಖಲೆಗಳನ್ನು ಸಂಬಂಧಿಸಿದ ನಾಡಕಚೇರಿ, ರೈತ ಸಂಪರ್ಕ ಕೇಂದ್ರದಲ್ಲಿ ನೀಡಿ ನಮೂದು ಮಾಡಬೇಕು. ಮುಂದಿನ ವರ್ಷದಿಂದ ಪ್ರತಿ ರೈತರೂ ಬೆಳೆಯನ್ನು ಕಡ್ಡಾಯವಾಗಿ ಮೊಬೈಲ್ ಆ್ಯಪ್ ಮೂಲಕ ನಮೂದು ಮಾಡಿಕೊಂಡರೆ ಸಮಸ್ಯೆ ಉದ್ಭವವಾಗುವುದಿಲ್ಲ. ರಾಗಿ ಹಾಕಿರುವ ರೈತರ ಹಣ ಪಾವತಿ ಬಗ್ಗೆ ಜಿಲ್ಲಾಡಳಿತ ಗಮನಕ್ಕೆ ತರಲಾಗುವುದು.
    ಕೆ.ಎನ್.ರಾಜಶೇಖರ್, ತಹಸೀಲ್ದಾರ್ ಮುಳಬಾಗಿಲು

    ಮೊಬೈಲ್ ಆ್ಯಪ್‌ನಲ್ಲಿ ಸರ್ವೇ ನಂಬರ್ ಸಹಿತ ಬೆಳೆ ನಮೂದು ಮಾಡಿರುವ ರೈತರಿಗೆ ಸಮಸ್ಯೆಯಾಗುವುದಿಲ್ಲ. ಒಂದು ಹೆಕ್ಟೇರ್‌ಗೆ 10 ಕ್ವಿಂಟಾಲ್‌ನಂತೆ ಒಬ್ಬ ರೈತನಿಂದ 50 ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆಗೆ ಖರೀದಿ ಮಾಡಲಾಗುತ್ತಿದೆ.
    ಅಮರನಾರಾಯಣರೆಡ್ಡಿ, ಹಿರಿಯ ಸಹಾಯಕ ಕೃಷಿ ನಿರ್ದೇಶಕ ಮುಳಬಾಗಿಲು

    ಮಾರ್ಚ್ ಮೊದಲ ವಾರದಲ್ಲಿ ಬೆಂಬಲ ಬೆಲೆಯಲ್ಲಿ ರಾಗಿ ಮಾರಿದ್ದು, ಇದುವರೆಗೆ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಖರ್ಚು ವೆಚ್ಚಗಳಿಗೆ ಖಾಸಗಿ ಸಾಲಕ್ಕೆ ಕೈ ಒಡ್ಡಬೇಕಾದ ಪರಿಸ್ಥಿತಿ ಎದುರಾಗಿದೆ.
    ಎಂ.ಮುನಿಯಪ್ಪ ನಲ್ಲೂರು ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts