More

    ರಾಗಿ ಮಾರಲಾಗದೆ ರೈತ ಕಂಗಾಲು

    ಕೋಲಾರ: ಜಿಲ್ಲೆಯಲ್ಲಿ ಬೆಂಬಲ ಬೆಲೆಗೆ ರಾಗಿ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ ಸರ್ಕಾರದ ಕಠಿಣ ಮಾರ್ಗಸೂಚಿಗಳಿಂದಾಗಿ ರಾಗಿ ಮಾರಲಾಗದೆ ಸಾವಿರಾರು ರೈತರು ಕಂಗಾಲಾಗಿದ್ದಾರೆ.

    ಕೇಂದ್ರ ಸರ್ಕಾರ ಪ್ರಸಕ್ತ ಸಾಲಿಗೆ ರಾಜ್ಯಕ್ಕೆ 2.10 ಲಕ್ಷ ಮೆಟ್ರಿಕ್​ ಟನ್​ ರಾಗಿ ಖರೀದಿಗೆ ಅವಕಾಶ ನೀಡಿದ್ದು, ಅದರಂತೆ ಜ.1ರಿಂದ ಆನ್​ಲೈನ್​ ನೋಂದಣಿ ಪ್ರಾರಂಭವಾಗಿ ಜ.26ಕ್ಕೆ ಸ್ಥಗಿತಗೊಂಡಿದೆ. ಕಳೆದ ವರ್ಷ 6 ಲಕ್ಷ ಮೆಟ್ರಿಕ್​ ಟನ್​ ರಾಗಿ ಖರೀದಿಗೆ ಅವಕಾಶ ನೀಡಿದ್ದು, ಮಾರ್ಚ್​ ಅಂತ್ಯದವರೆಗೆ ರೈತರು ಅನಾಯಾಸವಾಗಿ ಮಾರಾಟ ಮಾಡಿದ್ದರು. ಪ್ರತಿ ರೈತನಿಂದ 70 ಕ್ವಿಂಟಾಲ್​ವರೆಗೆ ಪಡೆದುಕೊಳ್ಳಲಾಗಿತ್ತು. ಆದರೆ ಈ ಬಾರಿ ಸಣ್ಣ ಮತ್ತು ಅತಿಸಣ್ಣ ರೈತ 20 ಕ್ವಿಂಟಾಲ್​ ಮಾತ್ರ ಮಾರಬಹುದಾಗಿದೆ. ಜಮೀನು 2 ಎಕರೆಗಿಂತ ಹೆಚ್ಚಿಗೆ ಇದ್ದವರು, ಪಹಣಿಯಲ್ಲಿ ರಾಗಿ ಬೆಳೆ ನಮೂದಾಗದವರು, ತಡವಾಗಿ ನೋಂದಣಿ ಮಾಡಿಸಿದರಾಯಿತು ಎಂದು ಮೈ ಮರೆತವರು ರಾಗಿ ಬೆಳೆದಿದ್ದರೂ ಕೇಂದ್ರದ ಮಾರ್ಗಸೂಚಿಯಂತೆ ನೋಂದಣಿ ಮಾಡಿಸಲಾಗಿಲ್ಲ.

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ಕಾರ ನಿಯೋಜಿಸಿರುವ ಏಜನ್ಸಿಯಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಖರೀದಿ ಕೇಂದ್ರಗಳನ್ನು ತೆರೆದಿದ್ದು, ಫೆ.11ರಿಂದಲೇ ನೋಂದಾಯಿತ ರೈತರಿಂದ ಕ್ವಿಂಟಾಲ್​ಗೆ 3377 ರೂ. ನೀಡಿ ರಾಗಿ ಖರೀದಿಸುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 7119 ರೈತರು ಹೆಸರು ದಾಖಲಿಸಿದ್ದು, ಸೋಮವಾರದವರೆಗೆ 1522 ರೈತರು 21,436 ಕ್ವಿಂಟಾಲ್​ ರಾಗಿ ಮಾರಾಟ ಮಾಡಿದ್ದಾರೆ. ಕಳೆದ ವರ್ಷ 1.5 ಲಕ್ಷ ಕ್ವಿಂಟಾಲ್​ ರಾಗಿ ಖರೀದಿಸಲಾಗಿತ್ತು. ಆದರೆ ಈ ಬಾರಿ 1 ಲಕ್ಷ ಕಿಂಟಾಲ್​ ಸಹ ಸಂಗ್ರಹವಾಗುವುದು ಅನುಮಾನ ಎಂಬ ಮಾತುಗಳು ಅಧಿಕಾರಿ ವರ್ಗದಿಂದ ಕೇಳಿಬರುತ್ತಿವೆ.

    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 66.5 ಸಾವಿರ ಹೆಕ್ಟೇರ್​ನಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಅತಿವೃಷ್ಟಿಯಿಂದ ಬೆಳೆ ಹಾಳಾಗಿ ಹಲವು ರೈತರು ನಷ್ಟ ಅನುಭವಿಸಿದರು. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ರಾಗಿ ಬೆಳೆದಿರುವವರು ಮುಕ್ತ ಮಾರುಕಟ್ಟೆಯಲ್ಲಿ ಮಾರೋಣವೆಂದರೆ 1500ರಿಂದ 2000 ರೂ.ಒಳಗೆ ವ್ಯಾಪಾರಸ್ಥರು ಕೇಳುತ್ತಿದ್ದಾರೆ. ಕ್ವಿಂಟಾಲ್​ ರಾಗಿ ಬೆಳೆಯಲು 4 ಸಾವಿರ ರೂಪಾಯಿಗೂ ಅಧಿಕ ಖರ್ಚು ಬರುತ್ತದೆ. ನಮ್ಮ ಗೋಳು ಕೇಳುವವರೇ ಇಲ್ಲ ಎಂದು ಅನ್ನದಾತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಕಳೆದ ಬಾರಿಯಂತೆ ಮಾರ್ಚ್​ ಅಂತ್ಯದವರೆಗೆ ನೋಂದಣಿಗೆ ಅವಕಾಶ ನೀಡಬೇಕೆಂದು ರೈತರು, ರೈತಪರ ಸಂಘಟನೆಗಳು ಹೋರಾಟ ನಡೆಸಿವೆ. ಜಿಲ್ಲೆಯ ಯಾವ ಜನಪ್ರತಿನಿಧಿಯೂ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಧಿಕಾರಿಗಳು ಮನವಿ ಸ್ವೀಕರಿಸಿ ಕೇಂದ್ರ, ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸಿ ಸುಮ್ಮನಾಗಿದ್ದಾರೆ. ರಾಗಿ ಬೆಳೆದ ರೈತರು ಮಾರಾಟದ ಅವಕಾಶಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

    ನೋಂದಣಿ ಮಾಡಿಸಿರುವ ರೈತರು ಮಾರ್ಚ್​ ಅಂತ್ಯದವರೆಗೆ ಖರೀದಿ ಕೇಂದ್ರಗಳಿಗೆ ರಾಗಿ ತಂದು ನೀಡಬಹುದು. ಎಲ್ಲ ತಾಲೂಕುಗಳಲ್ಲಿ ಖರೀದಿ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಕೇಂದ್ರದ ಮಾನದಂಡಗಳನ್ವಯ ಎಫ್​ಎಕ್ಯೂ ಗುಣಮಟ್ಟ ದೃಢೀಕರಿಸಿದ ನಂತರ ರಾಗಿ ಪಡೆದುಕೊಳ್ಳಲಾಗುತ್ತಿದೆ.
    ಚೌಡೇಗೌಡ, ಜಿಲ್ಲಾ ವ್ಯವಸ್ಥಾಪಕ, ಕೆಎಫ್​ ಆ್ಯಂಡ್​ ಸಿಎಸ್​ಸಿ

    ಪಹಣಿಯಲ್ಲಿ ರಾಗಿ ಬೆಳೆ ನಮೂದಾಗಿರಬೇಕು. ಕೃಷಿ ಇಲಾಖೆಯಲ್ಲಿ ಎಫ್​ಐಡಿ ಸಂಖ್ಯೆ ನೀಡಲಾಗುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಸಣ್ಣ, ಅತಿಸಣ್ಣ ರೈತನ ದೃಢೀಕರಣ ಪತ್ರ ನೀಡಿರಬೇಕು. ಇದೆಲ್ಲ ಮಾಹಿತಿ ಜತೆ ರೈತ ಆಧಾರ್​ ಕಾರ್ಡ್​, ಪಾಸ್​ಬುಕ್​ ಜೆರಾಕ್ಸ್​ ಮತ್ತಿತರ ದಾಖಲೆ ನೀಡಿ ನೋಂದಾಯಿಸಿಕೊಳ್ಳಬೇಕಿತ್ತು. ಮೂರೇ ವಾರಕ್ಕೆ ಕೇಂದ್ರ ಟಾರ್ಗೆಟ್​ ಮುಕ್ತಾಯವಾದದ್ದು ನಮ್ಮ ದುರಂತವೇ ಸರಿ.
    ನಾಗರಾಜ್​, ರೈತ, ಕೋಲಾರ ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts