More

    ರಸ್ತೆ ಸಂಚಾರ ತಡೆ ನಡೆಸಿದ ರೈತರು

    ಗುಂಡ್ಲುಪೇಟೆ: ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಪೂರ್ವ ಮುಂಗಾರು ಮಳೆ ಬೀಳುತ್ತಿದ್ದರೂ ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡದಿರುವುದನ್ನು ವಿರೋಧಿಸಿ ಬೇಗೂರಿನಲ್ಲಿ ರೈತರು ಸಂಚಾರ ತಡೆ ನಡೆಸಿದರು.

    ಬೇಗೂರು ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ರೈತರು ಹತ್ತಿ, ಸೂರ್ಯಕಾಂತಿ ಹಾಗೂ ಜೋಳ ಬಿತ್ತನೆಗೆ ಮುಂದಾಗಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬೀಜಕಂಪನಿಗಳು ಹಾಗೂ ಸರ್ಕಾರದ ನಡುವೆ ಇನ್ನೂ ದರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಕೃಷಿ ಇಲಾಖೆಯು ಸಬ್ಸಿಡಿ ದರದಲ್ಲಿ ಸೂರ್ಯಕಾಂತಿ ಹಾಗೂ ಜೋಳ ಬಿತ್ತನೆ ಬೀಜ ಪೂರೈಸಲು ಸಾಧ್ಯವಾಗುತ್ತಿಲ್ಲ. ಮಳೆ ಬಿದ್ದರೂ ಬಿತ್ತನೆ ಬೀಜ ದೊರಕದ ಕಾರಣ ಕೃಷಿಕರು ಆಕ್ರೋಶಗೊಂಡಿದ್ದಾರೆ.

    ಸೋಮವಾರ ಬೇಗೂರು ಹಾಗೂ ಗುಂಡ್ಲುಪೇಟೆಯ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಹತ್ತಿ ಬೀಜ ಮಾರಾಟಕ್ಕೆ ಮುಂದಾಗಿದ್ದರೂ ಸಾವಿರಾರು ರೈತರು ಏಕಕಾಲದಲ್ಲಿ ಖರೀದಿಗೆ ನುಗ್ಗಿದ ಕಾರಣ ಪ್ರಕ್ರಿಯೆ ಬಂದ್ ಮಾಡಲಾಯಿತು. ಬೇಗೂರಿನಲ್ಲಿ ಮಂಗಳವಾರ ಬಂದೋಬಸ್ತ್‌ನಲ್ಲಿ ಹತ್ತಿ ಬೀಜ ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಸಾವಿರಾರು ಜನ ಕಾದುನಿಂತಿದ್ದರೂ ಮಳಿಗೆ ತೆರೆಯಲೇ ಇಲ್ಲ. ಇದರಿಂದ ಆಕ್ರೋಶಗೊಂಡ ಕೃಷಿಕರು ರಸ್ತೆ ಸಂಚಾರ ತಡೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತರನ್ನು ಚದುರಿಸಿದರು. ಅಗತ್ಯ ಪ್ರಮಾಣದ ಬೀಜದ ದಾಸ್ತಾನು ಇಲ್ಲದ ಕಾರಣ ಮಾರಾಟ ಮಳಿಗೆಯನ್ನು ಬಂದ್ ಮಾಡಲಾಯಿತು.

    ಗೊಬ್ಬರವೂ ಸಿಗಲಿಲ್ಲ: ಮಂಗಳವಾರ ಬೆಳ್ಳಂಬೆಳಗ್ಗೆ ಪಟ್ಟಣದ ಗೊಬ್ಬರದ ಅಂಗಡಿಗಳ ಎದುರು ಸೂರ್ಯಕಾಂತಿ, ಮುಸುಕಿನ ಜೋಳ ಹಾಗೂ ರಸಗೊಬ್ಬರ ಖರೀದಿಗೆ ಸಾವಿರಾರು ರೈತರು ಆಗಮಿಸಿದ್ದರು. ಪುರಸಭೆಯ ಆವರಣವನ್ನು ಸುತ್ತುವರಿದು ಮಹಿಳೆಯರು, ವೃದ್ಧರು ಸಾಲುಗಟ್ಟಿ ನಿಂತಿದ್ದರು. ಕಡಿಮೆ ಪ್ರಮಾಣದಲ್ಲಿ ಬೀಜ, ಗೊಬ್ಬರ ಬಂದಿದ್ದ ಕಾರಣ ರೈತರಿಗೆ ವಿತರಣೆ ಮಾಡಲಾಗಲಿಲ್ಲ. ಮಳೆಯಲ್ಲೇ ಕಾದು ನಿಂತು ನಿರಾಶರಾಗಿ ಮನೆಗೆ ಮರಳಿದ ಸಾವಿರಾರು ಕೃಷಿಕರು ಅವ್ಯವಸ್ಥೆ ವಿರುದ್ಧ ಅಧಿಕಾರಿಗಳಿಗೆ ಹಿಡಿಶಾಪಹಾಕಿದರು.

    ಸರ್ಕಾರ ಕ್ರಮ ವಹಿಸಲಿ: ಬಿತ್ತನೆ ಬೀಜಗಳು ದೊರಕದೆ ತಾಲೂಕಿನ ರೈತರು ಹೈರಾಣಾಗುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಬೀಜದ ಬೆಲೆ ನಿಗದಿಗೆ ಸರ್ಕಾರ ಮುಂದಾಗಿಲ್ಲ. ರೈತರು ಕಳಪೆ ಬೀಜಗಳನ್ನು ದುಬಾರಿ ಬೆಲೆತೆತ್ತು ಖರೀದಿಸುವಂತಾಗಿದೆ. ಇನ್ನಾದರೂ ಬೀಜ ಪೂರೈಕೆಗೆ ಕ್ರಮಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮುಖಂಡ ಹಂಗಳ ಮಾಧು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts