More

    ರಸ್ತೆ ಮಧ್ಯೆ ಚಿಮ್ಮಿದ ಅಡುಗೆ ಅನಿಲ!

    ಹುಬ್ಬಳ್ಳಿ: ಮನೆಮನೆಗೆ ಅಡುಗೆ ಅನಿಲ ಪೂರೈಸುವ ಪೈಪ್ ಒಡೆದು ಗ್ಯಾಸ್ ಚಿಮ್ಮಿ , ತಾಸಿಗೂ ಹೆಚ್ಚು ಕಾಲ ಜನರನ್ನು ಆತಂಕಕ್ಕೆ ತಳ್ಳಿದ ಘಟನೆ ನವನಗರದ ಕರ್ನಾಟಕ ವೃತ್ತ ಬಳಿ ಅಮಾವಾಸ್ಯೆಯ ದಿನ ಸೋಮವಾರ ಬೆಳಗ್ಗೆ ನಡೆದಿದೆ.

    ಇಂಡಿಯನ್ ಆಯಿಲ್ ಅದಾನಿ ಗ್ಯಾಸ್ ಕಂಪನಿಯವರು ನವನಗರದಲ್ಲಿ ಗೃಹಬಳಕೆ ಗ್ಯಾಸ್ ಪೂರೈಕೆ ಯೋಜನೆಯಡಿ ಸುಮಾರು 700 ಮನೆಗಳಿಗೆ ಅಡುಗೆ ಅನಿಲ ಪೂರೈಸುತ್ತಿದ್ದಾರೆ. ನವನಗರದ ಪ್ರತಿಯೊಂದು ರಸ್ತೆ ಬದಿಯೂ ಪೈಪ್​ಲೈನ್ ಅಳವಡಿಸಲಾಗಿದೆ.

    ಸೋಮವಾರ ಕರ್ನಾಟಕ ವೃತ್ತದ ಬಳಿ ರಸ್ತೆಯಲ್ಲಿ ಮಹಾನಗರ ಪಾಲಿಕೆಯವರು ಒಳಚರಂಡಿ ದುರಸ್ತಿ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

    ಒಳಚರಂಡಿಗಾಗಿ ಜೆಸಿಬಿಯಿಂದ ಅಂದಾಜು 4.5 ಅಡಿ ಆಳದಲ್ಲಿ ಅಗೆಯುವಾಗ ಗ್ಯಾಸ್ ಪೈಪ್​ಗೆ ತಾಗಿ ಒಡೆದು ಹೋಗಿದೆ. ಸುಮಾರು 20 ಅಡಿಯಷ್ಟು ಎತ್ತರಕ್ಕೆ ಧೂಳು ಹಾಗೂ ಗ್ಯಾಸ್ ಚಿಮ್ಮಿ ಅಕ್ಕಪಕ್ಕದ ಮನೆಯವರಿಗೆ ಭಯ ಮೂಡಿಸಿತು. ಜನರು ಏನು ಮಾಡಬೇಕು ತೋಚದಂತಾಗಿದ್ದರು. ಅನೇಕ ಜನ ಮನೆಯಲ್ಲಿನ ಗ್ಯಾಸ್ ಸಂಪರ್ಕ ಸ್ಥಗಿತಗೊಳಿಸಿ ಹೊರಗೆ ಓಡಿ ಬಂದರು.

    ಸುದ್ದಿ ತಿಳಿದ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.

    ‘ಸುಮಾರು ಅರ್ಧ ತಾಸಿಗೂ ಹೆಚ್ಚು ಹೊತ್ತು ಗ್ಯಾಸ್ ಚಿಮ್ಮುತ್ತಲೇ ಇತ್ತು. ಸಮೀಪದ ವಾಲ್ವ್ ಬಂದ್ ಮಾಡಲು ಪ್ರಯತ್ನ ಪಟ್ಟೆವು. ಅದಾನಿ ಕಂಪನಿ ಅಧಿಕಾರಿಗಳು ಆಗಮಿಸಿ ಮುಖ್ಯ ವಾಲ್ವ್ ಬಂದ್ ಮಾಡಿದ ನಂತರ ಆತಂಕ ಕಡಿಮೆಯಾಯಿತು’ ಎಂದು ಸ್ಥಳೀಯ ನಿವಾಸಿ ಸ್ವಾಮಿ ಮಹಾಜನಶೆಟ್ಟರ್ ತಿಳಿಸಿದ್ದಾರೆ.

    ಅಗ್ನಿಶಾಮಕ ದಳದ ಸಿಬ್ಬಂದಿ ನೀರು, ಇತರೆ ಸಾಮಗ್ರಿಗಳ ಮೂಲಕ ಚಿಮ್ಮುತ್ತಿದ್ದ ಗ್ಯಾಸ್​ನ ವೇಗ ಕಡಿಮೆ ಮಾಡಿ ಸಂಭಾವ್ಯ ಅವಘಡ ತಪ್ಪಿಸಿದರು.

    ಅಗೆಯುವ ಮೊದಲು ಸಂರ್ಪಸಲು ಮನವಿ

    ಇಂಡಿಯನ್ ಆಯಿಲ್ ಅದಾನಿ ಗ್ಯಾಸ್ ಕಂಪನಿಯವರು ನವನಗರದಲ್ಲಿ ಎಲ್ಲಿಯೇ ಅಗೆಯುವ ಮೊದಲು ತಮ್ಮನ್ನು ಸಂರ್ಪಸಿ ಎಂದು ಕೆಲ ತಿಂಗಳ ಹಿಂದೆಯೇ ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದಾರೆ. ಆದರೆ, ಇಲ್ಲಿ ಒಳಚರಂಡಿ ದುರಸ್ತಿ ಕಾರ್ಯ ಕೈಗೊಳ್ಳುವ ಮುನ್ನ ಯಾರಿಗೂ ತಿಳಿಸಿಲ್ಲ ಎಂಬುದು ಕಂಪನಿ ಆರೋಪ. ಒಳಚರಂಡಿ ಪೈಪ್​ಲೈನ್ ಕೆಳಗಡೆಯೇ ಗ್ಯಾಸ್ ಪೈಪ್ ಇರುವುದರಿಂದ ಇಕ್ಕಟ್ಟಿನಲ್ಲಿ ದುರಸ್ತಿ ಕಾರ್ಯ ಮಾಡುವಾಗ ಧಕ್ಕೆಯಾಗಿದೆ ಎಂದು ಮಹಾನಗರ ಪಾಲಿಕೆ ವಲಯ ಕಚೇರಿ 4ರ ಅಧಿಕಾರಿ ರಮೇಶ ನೂಲ್ವಿ ತಿಳಿಸಿದ್ದಾರೆ.

    ಪತ್ರ ಬರೆದಿದ್ದೇವೆ

    ಗ್ಯಾಸ್ ಪೈಪ್​ಲೈನ್ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿದ್ದೇವೆ. ಪೈಪ್ ಮೇಲೆ ವಾರ್ನಿಂಗ್ ಮ್ಯಾಟ್ ಹಾಕಿ ಮುಚ್ಚಲಾಗಿದೆ. ಅಗೆಯುವಾಗ ಗೊತ್ತಾಗಬೇಕಿತ್ತು. ಅಲ್ಲದೇ ಅಗೆಯುವ ಮುನ್ನ ಗಮನಕ್ಕೆ ತರಲು ಈಗಾಗಲೇ ಪಾಲಿಕೆಗೆ ಪತ್ರ ಕೂಡ ಬರೆದಿದ್ದೇವೆ. ಆದರೆ, ಅವರು ನಮಗೆ ತಿಳಿಸಿಲ್ಲ. ಹಾಗಾಗಿ ಅವಘಡ ಸಂಭವಿಸಿದೆ ಎಂದು ಗ್ಯಾಸ್ ಕಂಪನಿಯ ಹಿರಿಯ ಇಂಜಿನಿಯರ್ ಶ್ರೀಪಾದ ಕುಲಕರ್ಣಿ ತಿಳಿಸಿದ್ದಾರೆ. ಇದು ಎಲ್​ಪಿಜಿಯಂತಲ್ಲ. ಗಾಳಿಗಿಂತಲೂ ಕಡಿಮೆ ತೂಕದ ನೈಸರ್ಗಿಕ ಅನಿಲ ಆಗಿದ್ದರಿಂದ ಸೋರಿಕೆ ಆದಾಗ ಮೇಲ್ಮುಖವಾಗಿ ಚಲಿಸಿ ಗಾಳಿಯಲ್ಲಿ ಬೆರೆತು ಬಿಡುತ್ತದೆ. ಇಲ್ಲಿ ಅಗ್ನಿ ಆಕಸ್ಮಿಕ ಕಡಿಮೆ. ಹೊರ ಚೆಲ್ಲುವಿಕೆ (ಲೀಕೇಜ್) ಸರಿಪಡಿಸಿ ಮತ್ತೆ ಯಥಾಪ್ರಕಾರ ಪೂರೈಕೆ ಆರಂಭಿಸಿದ್ದೇವೆ. ಹಾಗಾಗಿ ಜನರು ಹೆಚ್ಚು ಆತಂಕ ಪಡಬಾರದು ಎಂದೂ ಕುಲಕರ್ಣಿ ಮನವಿ ಮಾಡಿದ್ದಾರೆ.

    ಜನರ ಆಕ್ರೋಶ

    ಸ್ಥಳಕ್ಕೆ ಆಗಮಿಸಿದ ಅದಾನಿ ಕಂಪನಿ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳೀಯರು ವಾಗ್ವಾದಕ್ಕೆ ಇಳಿದರು. ಜನರ ಬಗ್ಗೆ ಕಾಳಜಿ ಇಲ್ಲದೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಇದರಿಂದ ಅನಾಹುತವಾದರೆ ಯಾರು ಹೊಣೆ? ಅಧಿಕಾರಿಗಳ ಮಧ್ಯೆ ಸಮನ್ವಯ ಇಲ್ಲ. ಪಾಲಿಕೆ ಹಾಗೂ ಗ್ಯಾಸ್ ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಅಗೆಯುವ ಮೊದಲು ತಿಳಿಸುವಂತೆ ಪಾಲಿಕೆಗೆ ಪತ್ರ ಬರೆದಿರುವುದಾಗಿ ಹೇಳುತ್ತೀರಿ. ಆದರೆ, ಸ್ಥಳದಲ್ಲೇ ಅಲ್ಲಲ್ಲಿ ಫಲಕ ಹಾಕಲಿಲ್ಲ ಏಕೆ? ಸಾರ್ವಜನಿಕರು ಯಾವುದಾದರೂ ಉದ್ದೇಶಕ್ಕೆ ಅಗೆಯಲು ಮುಂದಾದರೆ ಗ್ಯಾಸ್ ಪೈಪ್​ಲೈನ್ ಇರುವುದು ಹೇಗೆ ಗೊತ್ತಾಗಬೇಕು ಎಂದು ಅದಾನಿ ಕಂಪನಿಯವರನ್ನು ನಾಗರಿಕರು ಖಾರವಾಗಿ ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts