More

    ರಸ್ತೆ ನುಂಗಿದ ಕಂದಕ!


    ಭಟ್ಕಳ: ಕಳೆದ ವಾರ ಇಡೀ ಭಟ್ಕಳವನ್ನೆ ಮುಳುಗಿಸಿದ್ದ ಮಳೆ ಮಾಡಿರುವ ಅವಾಂತರಗಳು ಅಷ್ಟಿಷ್ಟಲ್ಲ. 10 ದಿನಗಳಾದರೂ ದಿನಕ್ಕೊಂದು ಹಾನಿ ಘಟನೆಗಳು ಹೊರಬರುತ್ತಿವೆ.
    ಆ. 2ರ ನಸುಕಿನ ವೇಳೆ ಇಡೀ ಭಟ್ಕಳವನ್ನೇ ನಡುಗಿಸಿದ್ದ ಜಲಪ್ರಳಯದ ಆಘಾತದಿಂದ ಭಟ್ಕಳದ ಜನರು ಇನ್ನೂ ಹೊರ ಬಂದಿಲ್ಲ. ಅಂದು ರಾತ್ರಿಯೇ ತಾಲೂಕಿನ ಕೊಪ್ಪ ಹೊಸಮಕ್ಕಿ ಕಾನಕಿ ಪ್ರದೇಶದಲ್ಲಿ ಕಾಲು ದಾರಿಯಲ್ಲಿ ಇದ್ದಕ್ಕಿದ್ದಂತೆಯೇ ಕಂದಕವೊಂದು ಸೃಷ್ಟಿಯಾಗಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಮೇಲ್ನೋಟಕ್ಕೆ ಸಾಧಾರಣ ಹೊಂಡದಂತೆ ಕಂಡರೂ ನೂರಾರು ಅಡಿ ಆಳದವರೆಗೆ ಸುರಂಗ ಕೊರೆದುಕೊಂಡು ಹೋಗಿದೆ. ಅಷ್ಟೆ ಅಲ್ಲದೆ, ಭೂಮಿಯ ಆಳದಲ್ಲಿ ನೀರು ಹರಿಯುವ ಶಬ್ದ ಕೇಳುತ್ತಿರುವುದು ಸ್ಥಳೀಯರ ಚಿಂತೆಗೆ ಕಾರಣವಾಗಿದೆ. ಭೂಮಿಯ ಮೇಲ್ಮೈ ಮತ್ತಷ್ಟು ಕುಸಿಯುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
    ಅಷ್ಟೇ ಅಲ್ಲದೆ, ಸಮೀಪದ ಬಾಬಣ್ಣ ಹೆಗಡೆ ಎಂಬುವರ ತೋಟದಲ್ಲಿ ಜಲಪ್ರಳಯದ ದಿನವೇ ಭೂಮಿಯ ಆಳದಿಂದ ನೀರು ಕಾರಂಜಿಯಂತೆ ಉಕ್ಕಿ ಭೂಮಿಯ ಮೇಲಕ್ಕೆ ಬಂದು ತೋಟವನ್ನೆಲ್ಲ ಆವರಿಸಿಕೊಂಡಿದೆ. ಪರಿಣಾಮವಾಗಿ ನೀರಿನೊಂದಿಗೆ ಗದ್ದೆ, ತೋಟದಲ್ಲಿ ಮಣ್ಣು, ಕೆಸರು ಶೇಖರಣೆಗೊಂಡಿದೆ. ಕೊಪ್ಪದಲ್ಲಿ ನೆಲದೊಳಗಿಂದ ಹೊಳೆಯಾಗಿ ನೀರು ಮೇಲೇರಿ ಬಂದಿರುವುದು ಮತ್ತಷ್ಟು ಭಯ ಸೃಷ್ಟಿಸಿದೆ.

    ಪರಿಶೀಲನೆಗೆ ಆಗ್ರಹ: ಕಾನಕ್ಕಿಗೆ ಸಮೀಪ ಇರುವ ಬಸವನಬಾವಿ, ಐನೊಳೆ, ಉತ್ತರಕೊಪ್ಪ ಹೊಳೆ ಎಲ್ಲವೂ ಭಟ್ಕಳದ ಕಡವಿನಕಟ್ಟೆ ಹೊಳೆಯೊಂದಿಗೆ ಸಂಬಂಧ ಬೆಸೆದುಕೊಂಡಿವೆ. ಜಲಪ್ರಳಯದ ದಿನವೇ ಕೊಪ್ಪದಲ್ಲಿ ನೂರಾರು ಅಡಿ ಸುರಂಗ ಸೃಷ್ಟಿಯಾಗಿರುವುದು, ಅದರೊಳಗೆ ನಿರಂತರ ನೀರು ಹರಿದು ಹೋಗುತ್ತಿರುವುದರ ಕುರಿತು ಭೂಗರ್ಭ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ಮಾಡಬೇಕು. ಯಾವ ಕಾರಣಕ್ಕೆ ಹೀಗೆ ಆಗಿದೆ, ಭೂಮಿಯ ಪದರುಗಳ ಸ್ಥಿತಿ ಹೇಗಿದೆ, ಇನ್ನೂ ಕುಸಿತ/ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆಯೆ ಎನ್ನುವ ಕುರಿತು ಸರಿಯಾದ ಮಾಹಿತಿ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



    ಭೂಮಿಯ ಆಳದಲ್ಲಿ ಜಲ ಒತ್ತಡದಿಂದ ಇಂತಹ ಕಂದಕ, ಅನಾಹುತ ಸೃಷ್ಟಿಯಾಗಿರಬಹುದು. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯ ಇದೆ. ಸಂಬಂಧಿಸಿದ ಇಲಾಖೆ ಕೂಡಲೆ ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾನಿ ಅನುಭವಿಸುತ್ತಿರುವ ಸ್ಥಳೀಯರಿಗೆ ಸೂಕ್ತ ಪರಿಹಾರ ನೀಡಬೇಕು.
    | ಬಾಬಣ್ಣ ಹೆಗಡೆ, ಸ್ಥಳೀಯ ನಿವಾಸಿ


    ಕೊಪ್ಪ ಗ್ರಾಮ ಪಂಚಾಯಿತಿಯ ಕಾನಕ್ಕಿ ರಸ್ತೆಯಲ್ಲಿ ಸುರಂಗದಂತೆ ಕಾಣಿಸಿಕೊಂಡಿರುವ ಕಂದಕದ ಬಗ್ಗೆ ತಿಳಿದು ಬಂದಿದೆ. ಇದರ ಕುರಿತು ನಿಖರವಾಗಿ ಭೂಗರ್ಭ ಶಾಸ್ತ್ರಜ್ಞರೇ ಅಧ್ಯಯನ ನಡೆಸಿ ತಿಳಿಸಬೇಕು. ಈಗಲೇ ನಾವು ಮೇಲಿನಿಂದ ಮಣ್ಣು ಹಾಕಿ ರಸ್ತೆ ಸಮತಟ್ಟು ಮಾಡಲು ಯತ್ನಿಸಿದರೆ ಮುಂದೊಂದು ದಿನ ಮತ್ತೆ ಏನಾದರೂ ಸಂಭವಿಸಬಹುದು.
    | ಶರತ್ ಶೆಟ್ಟಿ, ಆರ್​ಎಫ್​ಒ ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts