More

    ರಸ್ತೆ ಕಾಮಗಾರಿ ಕಳಪೆ, ವಿಳಂಬ ಖಂಡಿಸಿ ಪ್ರತಿಭಟನೆ

    ಕೊಳ್ಳೇಗಾಲ: ಪಟ್ಟಣದ ಶಂಕನಪುರ ಬಡಾವಣೆಯ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ ಕಳಪೆ ಹಾಗೂ ವಿಳಂಬ ಖಂಡಿಸಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


    ಸುಮಾರು 55 ಲಕ್ಷ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 1 ಕಿ.ಮೀ.ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಂಡ ನಂತರ ನಿಯಮದಂತೆ ನಿಗದಿತ ಅವಧಿಯಲ್ಲಿ ಮುಗಿಯಬೇಕಾಗಿತ್ತು. ಆದರೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರ ಕೃಷ್ಣಪ್ಪ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅವಧಿ ಪೂರ್ಣಗೊಂಡು ಎರಡು ತಿಂಗಳಾದರೂ ಮುಗಿದಿಲ್ಲ.


    ರಸ್ತೆ ಕಾರ್ಯ ಮುಗಿಯದೆ ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆಯಲ್ಲೇ ಶಾಲೆಯಿದ್ದು ಮಕ್ಕಳು ಜಲ್ಲಿ ಹಾಕಿದ ರಸ್ತೆಯಲ್ಲಿ ಪ್ರಾಣಭಯದಲ್ಲಿ ಸಂಚರಿಸಬೇಕಾಗಿದೆ ಎಂದು ಗ್ರಾಮಸ್ಥರು ದೂರಿದರು.


    ಕಳಪೆ ಕಾಮಗಾರಿಯಿಂದ ಆಕ್ರೋಶಿತರಾಗಿದ್ದ ಪ್ರತಿಭಟನಾನಿರತರು ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.


    ಗ್ರಾಮಸ್ಥ ಶೇಖರ್ ಬುದ್ಧ ಮಾತಾನಾಡಿ, ಶಂಕನಪುರ ರಸ್ತೆ ಕಾಮಗಾರಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ವಿಳಂಬ ಧೋರಣೆಯಿಂದಾಗಿ ಗ್ರಾಮಸ್ಥರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ರಸ್ತೆ ಕಾಮಗಾರಿ ಕಳಪೆಯಾಗಿದ್ದು ರಸ್ತೆ ಬದಿಗೆ ಮಣ್ಣು ಸುರಿದು ಬುಲ್ಡೋಜರ್ ಮೂಲಕ ಮಟ್ಟ ಮಾಡದೆ ಜಲ್ಲಿ ಹಾಕಿ ಬಿಡಲಾಗಿದೆ. ಪರಿಣಾಮ ಜಲ್ಲಿ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ವಾಹನಗಳು ಜನರು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರನಿಗೆ ಕರೆಮಾಡಿ ಪ್ರಶ್ನೆಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ. ಈ ಕೂಡಲೇ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪರವಾನಗಿಯನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸುವಂತೆ ಒತ್ತಾಯಿಸಿದರು.


    ಜಿಲ್ಲಾ ಪಂಚಾಯಿತಿ ಇಇ ಇಬ್ರಾಹಿಂ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಗುತ್ತಿಗೆದಾರ ಹಾಗೂ ಇಂಜಿನಿಯರ್‌ಗಳಿಗೆ ತ್ವರಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡುತ್ತೇನೆ. ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿದ ಗುತ್ತಿಗೆದಾರನಿಗೆ ದಂಡ ವಿಧಿಸಲಾಗುವುದು. ಕಾಮಗಾರಿ ವೀಕ್ಷಣೆಗೆ ಬಾರದೆ ಕರ್ತವ್ಯಲೋಪ ಎಸಗಿರುವ ಇಂಜಿನಿಯರ್‌ಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.


    ಅಧಿಕಾರಿಗಳ ಮುಂದೆಯೇ ರಸ್ತೆ ಅಗೆದ ಗ್ರಾಮಸ್ಥರು: ರಸ್ತೆಗೆ ಸಿಮೆಂಟ್ ಮಿಶ್ರಿತ ಜಲ್ಲಿ, ಕಲ್ಲು ಹಾಗೂ ಮಣ್ಣನ್ನು ವ್ಯವಸ್ಥಿತವಾಗಿ ಹಾಕಿಲ್ಲ, ಪ್ರತಿಭಟನೆ ಮಾಡುತ್ತಾರೆ ಎಂಬ ಸುದ್ದಿ ತಿಳಿದು ರಸ್ತೆಗೆ ನೀರು ಸಿಂಪಡಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಪಟ್ಟು ಹಿಡಿದು ನ್ಯಾಯ ಕೇಳಿದ ಗ್ರಾಮಸ್ಥರು, ಗುಣಮಟ್ಟವನ್ನು ನೀವೇ ನೋಡಿ ಎಂದು ರಸ್ತೆಯನ್ನು ಅಗೆದು ತೋರಿಸಿದರು.


    ಶಂಕನಪುರದ ರಸ್ತೆಯಲ್ಲಿ ಗುಣಮಟ್ಟ ಕಾಮಗಾರಿ ನಡೆಯದಿದ್ದರೆ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
    ಜಿಲ್ಲಾ ಪಂಚಾಯಿತಿ ಎಇಇ, ಸಿದ್ದಪ್ಪಾಜಿಗೌಡ ಇಂಜಿನಿಯರ್ ಮಂಜು, ಪಿಎಸ್‌ಐ ಚೇತನ್, ಗ್ರಾಮಸ್ಥರಾದ ನಿಂಗರಾಜು, ರಾಜು ನಾಗೇಂದ್ರ, ದೊಡ್ಡಸಿದ್ದಯ್ಯ, ಶಿವಣ್ಣ, ನಾಗಮಲ್ಲು, ಚೇತನ್, ಮೋಹನ್, ಪ್ರೇಮ್, ಗಣೇಶ, ರಘು, ಮೋಹನ್, ಚೇತನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts