More

    ರಸ್ತೆ ಅಭಿವೃದ್ಧಿಗೆ ಸಾವಿರ ಕೋಟಿ ರೂ.

    ಹುಬ್ಬಳ್ಳಿ: ಸಿಆರ್​ಎಫ್ ಅಡಿ ನಿರ್ವಣಗೊಳ್ಳುತ್ತಿರುವ ಹುಬ್ಬಳ್ಳಿ-ಧಾರವಾಡದ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಇನ್ನುಳಿದ ರಸ್ತೆಗಳ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಶೀಘ್ರ ಬಿಡುಗಡೆಗೊಳಿಸಲಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದರು.

    ಗುರುವಾರ ಇಲ್ಲಿ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಕೆಯುಐಡಿಎಫ್​ಸಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಸ್ತೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

    ಮಹಾನಗರ ಪಾಲಿಕೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 150 ಕೋಟಿ ರೂ., 15ನೇ ಹಣಕಾಸು ಯೋಜನೆಯಡಿ 51.50 ಕೋಟಿ ರೂ., ಎಸ್​ಎಫ್​ಸಿ, ಮುಖ್ಯ ನಿಧಿ ಸೇರಿದಂತೆ ಎಲ್ಲ ಯೋಜನೆಗಳಿಂದ ಒಟ್ಟು 229 ಕೋಟಿ ರೂ. ನೀಡಲಾಗಿದೆ. ಈ ಎಲ್ಲ ಮೊತ್ತವನ್ನು ರಸ್ತೆ ಅಭಿವೃದ್ಧಿಗೆ ಬಳಸಲಾಗುವುದು ಎಂದರು.

    ಬರುವ ಬೇಸಿಗೆಯಲ್ಲಿ ನಗರದ ಎಲ್ಲ ರಸ್ತೆ ಹಾಗೂ ಒಳಚರಂಡಿಗಳನ್ನು ದುರಸ್ತಿ ಮಾಡಲಾಗುವುದು. ಮಹಾನಗರ ವ್ಯಾಪ್ತಿಯಲ್ಲಿ 77 ಕೋಟಿ ರೂ. ವೆಚ್ಚದಲ್ಲಿ ಎಲ್​ಇಡಿ ಲೈಟ್ ಅಳವಡಿಸಲು ಕಾರ್ಯುದೇಶ ನೀಡಲಾಗುವುದು ಎಂದು ಹೇಳಿದರು.

    ಮಹಾನಗರ ಪಾಲಿಕೆಗೆ ಬರಬೇಕಿದ್ದ 121 ಕೋಟಿ ರೂ. ಬಾಕಿ ಪಿಂಚಣಿಯಲ್ಲಿ ಈಗಾಗಲೇ 71 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಬಾಕಿ 50 ಕೋಟಿ ರೂ.ಗಳನ್ನು ಮುಂದಿನ ವರ್ಷ ನೀಡಲಾಗುವುದು ಎಂದು ಹೇಳಿದರು.

    ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಇತರರಿದ್ದರು.

    ಕಾಮಗಾರಿ ವಿಳಂಬಕ್ಕೆ ಅಸಮಾಧಾನ

    ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಸಚಿವ ಬಿ.ಎ. ಬಸವರಾಜ ಅಸಮಾಧಾನ ವ್ಯಕ್ತಪಡಿಸಿದರು.

    ಸ್ಮಾರ್ಟ್ ಸಿಟಿ ಯೋಜನೆ ಪ್ರಧಾನ ಮಂತ್ರಿಯವರ ಕನಸಿನ ಕೂಸು. ಗುಣಮಟ್ಟದ ವಿಷಯದಲ್ಲಿ ರಾಜಿಯಾಗುವುದಿಲ್ಲ. ಕಾಲಮಿತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಹೇಳಿದರು.

    ಸ್ಮಾರ್ಟ್ ಸಿಟಿ ಅನುಷ್ಠಾನಗೊಳಿಸಲು ಒಂದೂವರೆ ವರ್ಷ ಕಾಲಾವಕಾಶವಿದೆ ಎಂದರು.

    ಅತಿಕ್ರಮಣ ತೆರವುಗೊಳಿಸಿ….

    –ಅತಿಕ್ರಮಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

    — ಕರ ಸಂಗ್ರಹಣೆಯಲ್ಲಿ ನಿರ್ಲಕ್ಷ್ಯ ತೋರುವ ಪಾಲಿಕೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ.

    — ಸಾರ್ವಜನಿಕರು ಸುಲಭವಾಗಿ ಕರ ಪಾವತಿಸಲು ವ್ಯವಸ್ಥೆ ಕಲ್ಪಿಸಬೇಕು.

    –ಬರುವ ಮಾರ್ಚ್​ವರೆಗೆ ಬಾಕಿ ಸಹಿತ ಎಲ್ಲ ಕರ ಸಂಗ್ರಹಿಸಬೇಕು.

    –ಟಿಪ್ಪರ್​ಗಳಿಂದ ಕಸ ಸಂಗ್ರಹಿಸುವಲ್ಲಿ ದೋಷ ಕಂಡಲ್ಲಿ ಸಂಬಂಧಿಸಿದ ಅಧಿಕಾರಿ ವಿರುದ್ಧ ಕಠಿಣ ಕ್ರಮ.

    –ಅವಳಿ ನಗರಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳನ್ನು ಸ್ವಚ್ಛವಾಗಿ ಇಡಬೇಕು.

    –ಎಲ್ಲ ವಾರ್ಡ್​ಗಳಲ್ಲಿ ಸಂಪೂರ್ಣ ಸ್ವಚ್ಛತಾ ಅಭಿಯಾನ ನಡೆಸಬೇಕು.

    — ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲಾಗುವುದು.

    ಡಿಕೆಶಿ ಭ್ರಮಾಲೋಕದಿಂದ ಹೊರಬರಲಿ

    ಹುಬ್ಬಳ್ಳಿ: ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದು ಸಚಿವರಾದವರು ಪುನಃ ಕಾಂಗ್ರೆಸ್​ಗೆ ಮರಳುವರೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಹೇಳಿಕೆ ಕೇವಲ ಭ್ರಮೆಯಷ್ಟೇ. ಅವರು ಭ್ರಮಾಲೋಕದಿಂದ ಹೊರಬರಬೇಕು. ನಮ್ಮ ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲಿಯೇ ಇರುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಸಚಿವರಾದವರಿಗೆ ಮರಳಿ ಕಾಂಗ್ರೆಸ್ ಸೇರುವ ಯಾವುದೇ ಉದ್ದೇಶ ಇಲ್ಲ ಎಂದರು.

    ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಹೆಚ್ಚುದಿನ ಮುಂದುವರಿಯುವುದಿಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರು ಯಾವಾಗ ಜ್ಯೋತಿಷಿಯಾದರು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ ಸಚಿವರು, ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.

    ಅನುದಾನ ಹಂಚಿಕೆಯಲ್ಲಿ ಮುಖ್ಯಮಂತ್ರಿಯವರು ಯಾವುದೇ ತಾರತಮ್ಯ ಮಾಡಿಲ್ಲ. ಪಕ್ಷಾತೀತವಾಗಿ ಎಲ್ಲ ಶಾಸಕರಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟಿದ್ದು. ಬೇರೆ ಪಕ್ಷದಿಂದ ಬಿಜೆಪಿಗೆ ಬಂದವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇವೆ. ಅವರು ಪಕ್ಷದ ವರಿಷ್ಠರೊಂದಿಗೆ ರ್ಚಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದು ತಿಳಿಸಿದರು.

    ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts