More

    ರಸ್ತೆ ಅತಿಕ್ರಮಣ ತಡೆಯಲೇಬೇಕು

    ಕುಮಟಾ: ಗ್ರಾಮೀಣ ವ್ಯಾಪ್ತಿಯಲ್ಲಿ ಪಿಡಬ್ಲು ್ಯ ರಸ್ತೆಗಳಲ್ಲಿ ಸಾಕಷ್ಟು ಅತಿಕ್ರಮಣಗಳಾಗುತ್ತಿವೆ. ಇತರ ಇಲಾಖೆಗಳ ಸಹಯೋಗದೊಂದಿಗೆ ಅತಿಕ್ರಮಣಕ್ಕೆ ಕಡಿವಾಣ ಹಾಕುವತೆ ತಾಪಂ ಇಒ ಸಿ.ಟಿ. ನಾಯ್ಕ ಖಡಕ್ ಎಚ್ಚರಿಕೆ ನೀಡಿದರು.

    ತಾಪಂ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆಡಿಪಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ರಸ್ತೆ ಅತಿಕ್ರಮಣಕ್ಕೆ ನಿಯಂತ್ರಣವಿಲ್ಲದಂತಾಗಿದೆ. ಒಬ್ಬ ಅತಿಕ್ರಮಣದಾರರಿಗೆ ನೋಟಿಸ್ ಕೊಟ್ಟಿದ್ದೀರಾ ಎಂದು ಪಿಡಬ್ಲ್ಯುಡಿ ಇಂಜಿನಿಯರ್ ರಾಜು ಶಾನಭಾಗ ಅವರನ್ನು ಪ್ರಶ್ನಿಸಿದರು.

    ಪ್ರತಿಕ್ರಿಯಿಸಿದ ರಾಜು ಶಾನಭಾಗ, ಗ್ರಾಮೀಣ ಭಾಗದಲ್ಲಿ ಹಾದುಹೋಗುವ ರಸ್ತೆಗಳು ಮೇಲ್ದರ್ಜೆಗೇರಿ ನಮ್ಮ ಇಲಾಖೆಗೆ ಹಸ್ತಾಂತರವಾಗುತ್ತವೆ. ಆದರೆ, ರಸ್ತೆಯ ಕ್ಷೇತ್ರ ವ್ಯಾಪ್ತಿ ಬಗ್ಗೆ ಸರಿಯಾದ ದಾಖಲೆ ಇರುವುದಿಲ್ಲ. ಸರ್ಕಾರ ಸರ್ವೆ ಮಾಡುತ್ತಿಲ್ಲ. ಖಾಸಗಿ ಸರ್ವೆ ಸಾಧುವಲ್ಲ. ಸ್ಥಳೀಯ ಪಂಚಾಯಿತಿ ಸಹಕಾರವಿಲ್ಲದೆ ಅತಿಕ್ರಮಣ ನಿಯಂತ್ರಿಸುವುದು ಕಷ್ಟ ಎಂದು ವಿವರಿಸಿದರು. ಇದನ್ನೊಪ್ಪದ ಇಒ ನಾಯ್ಕ, ರಸ್ತೆ ನಿಮ್ಮ ಇಲಾಖೆಗೆ ಸಂಬಂಧಪಟ್ಟಿದ್ದರಿಂದ ಅತಿಕ್ರಮಣ ತಡೆಯುವ ಕಾರ್ಯಾಚರಣೆಗೆ ನೀವೇ ಮೊದಲು ಹೆಜ್ಜೆ ಇಡಬೇಕು. ಬೇಕಾದರೆ ನಾವೂ ಸಹಕಾರ ಕೊಡುತ್ತೇವೆ ಎಂದರು.

    ಕಾಮಗಾರಿಗಳಿಗೆ ಅಂದಾಜು ವೆಚ್ಚಕ್ಕಿಂತ ಬಹಳ ಕಡಿಮೆ ಟೆಂಡರ್ ಹಾಕುವ ಗುತ್ತಿಗೆದಾರರಿಂದ ಪ್ರಸ್ತಾವನೆಯಂತೆ ಗುಣಮಟ್ಟದ ಕೆಲಸ ಮಾಡಿಸಬೇಕು. 15 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು 10 ಲಕ್ಷ ರೂ. ಗೆ ಪೂರ್ಣಗೊಳಿಸುವುದೆಂದರೆ ಸಂಶಯಾಸ್ಪದವಾಗುತ್ತದೆ. ಕನಿಷ್ಠ ಟೆಂಡರ್ ಮೊತ್ತದ ಬಗ್ಗೆ ಇಲಾಖೆ ನಿಯಮಾವಳಿ ಇಲ್ಲದಿರುವುದು ವಿಚಿತ್ರ ಎಂದರು.

    ರಾಜು ಶಾನಭಾಗ ಮಾತನಾಡಿ, ತಾಲೂಕಿನಲ್ಲಿ ಮಂಜೂರಾಗಿದ್ದ ಹೊಸ ಕಾಮಗಾರಿಗಳನ್ನು ಮಳೆ ಕಡಿಮೆಯಾದ ನಂತರ ಮುಂದುವರಿಸಲಾಗುವುದು. ಆದರೆ, ಮೂರೂರು ರಸ್ತೆ ಕಾಮಗಾರಿ ಗುತ್ತಿಗೆದಾರನ ಅಸಹಕಾರದಿಂದ ನಿಂತಿದೆ. ಈ ಕುರಿತು ಶಾಸಕರ ಸಲಹೆ ಪಡೆದು ಮುಂದುವರಿಯುತ್ತಿದ್ದೇವೆ ಎಂದು ತಿಳಿಸಿದರು.

    ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ, ಹಳ್ಳಿಗಳಲ್ಲಿ ಹತ್ತಾರು ಮಕ್ಕಳನ್ನು ಅಲ್ಲಲ್ಲಿ ಒಂದುಗೂಡಿಸಿ ಶಿಕ್ಷಕರು ಕಲಿಸುತ್ತಿದ್ದಾರೆ. ಇದೇ ಕೆಲಸವನ್ನು ಶಾಲೆಯಲ್ಲಿ ಮಾಡಿದರೆ ತೊಂದರೆಯೇನು? ಮಕ್ಕಳು ಹಳ್ಳ, ಹೊಳೆ, ಸಂಕ ದಾಟಿ ನಿರ್ಜನ ಪ್ರದೇಶಗಳಲ್ಲಿ ಯಾರದ್ದೋ ಮನೆ, ಮಂದಿರ, ಸಭಾಭವನಕ್ಕೆ ಕಾಲ್ನಡಿಗೆೆಯಲ್ಲಿ ಬಂದು ಕಲಿಯಬೇಕಾಗಿದೆ. ಮಳೆಗಾಲದಲ್ಲಿ ಇದು ಅಪಾಯಕಾರಿ. ಆನ್​ಲೈನ್ ಪಾಠವಂತೂ ಬಡಕುಟುಂಬಗಳ ಜೀವ ಹಿಂಡುತ್ತಿದೆ. ವಿಧವಾ ವೇತನ ಪಡೆಯುತ್ತಿರುವವರು 60 ವರ್ಷದ ಬಳಿಕ ವೃದ್ಧಾಪ್ಯ ವೇತನ ಪಡೆಯುವಂತಾದರೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

    ಬಿಡಾಡಿ ದನಗಳ ಉಪಟಳ: ಬಹಳಷ್ಟು ಕಡೆ ಗದ್ದೆ ಮಾಡುವಾಗ ಎತ್ತು ಬೇಕು, ಹಾಲು ಕರೆಯುವಾಗ ಮಾತ್ರ ದನ ಬೇಕು ಎಂಬಂತೆ ಜನರ ಧೋರಣೆ ಇದೆ. ಇಂಥ ಬಿಡಾಡಿ ದನಗಳ ಉಪಟಳ ನಿಯಂತ್ರಿಸಬೇಕಾಗಿದೆ. ಅವುಗಳನ್ನು ಗೋಶಾಲೆಗಳಿಗೆ ಕಳಿಸುವ ಕುರಿತು ಸಭೆಯಲ್ಲಿ ಚರ್ಚೆಯಾಯಿತು. 662 ಕರೊನಾ ಪ್ರಕರಣ: ಆರೋಗ್ಯ ಇಲಾಖೆ ಸರದಿಯಲ್ಲಿ, ತಾಲೂಕಿನಲ್ಲಿ ಈವರೆಗೆ ಒಟ್ಟು 662 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ 42 ಮಂದಿ ಕರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶೆಷವಾಗಿ ಬೇರೆ ಯಾವುದೇ ಸೋಂಕಿನ ಪ್ರಕರಣಗಳು ದಾಖಲಾಗಿಲ್ಲ ಎಂಬ ವಿಷಯ ತಿಳಿಸಲಾಯಿತು. ಸಿಡಿಪಿಒ ಇಲಾಖೆಯಿಂದ ತಾಲೂಕಿನಲ್ಲಿ ಭರ್ತಿ ಮಾಡಲಾದ ಪೋಷಣ ಅಭಿಯಾನದ 2 ತಾಂತ್ರಿಕ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಪ್ರಾಮಾಣಿಕವಾಗಿಲ್ಲ ಎಂದು ಅಧ್ಯಕ್ಷೆ ವಿಜಯಾ ಪಟಗಾರ ಆರೋಪಿಸಿದರು. ಉಪಾಧ್ಯಕ್ಷೆ ಗೀತಾ ಮುಕ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts