More

    ರಸ್ತೆಗೆ ಕಲ್ಲಿನ ಕಂಬ ನೆಟ್ಟು ಬಸ್ ಸಂಚಾರಕ್ಕೆ ತಡೆ, ಕಚ್ಚಾ ರಸ್ತೆಯಲ್ಲಿ ಧೂಳಿನ ಸಮಸ್ಯೆಗೆ ಕಂಗೆಟ್ಟ ಸ್ಥಳೀಯರು

    ನೆಲಮಂಗಲ: ಬಿಎಂಟಿಸಿ ಬಸ್ ಸಂಚಾರದಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಬೆಂಗಳೂರು ಉತ್ತರ ತಾಲೂಕಿನ ಶಿವನಪುರ ಬಿಎಂಟಿಸಿ ಡಿಪೋ ಬಳಿ ರಸ್ತೆಗೆ ಕಂಬ ನೆಟ್ಟು ಸಂಚಾರ ನಿರ್ಬಂಧಿಸಲಾಗಿದೆ.

    ಬಿಎಂಟಿಸಿ 43ನೇ ಡಿಪೋದಿಂದ ಈ ಭಾಗದಲ್ಲಿ ನಿತ್ಯ 50ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಇಲ್ಲಿ ಸಮರ್ಪಕ ರಸ್ತೆ ಇಲ್ಲದ ಪರಿಣಾಮ ಕಚ್ಚಾ ರಸ್ತೆಗಳು ಹಾಳಾಗಿವೆ. ಜತೆಗೆ ರಸ್ತೆಯಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಿದ್ದು, ಬಡಾವಣೆ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ. ಬಸ್‌ಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದರು. ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಕಾಶೆಯಲ್ಲಿರುವ ರಸ್ತೆಯನ್ನು ಬಿಟ್ಟು ಉಳಿದ ಜಾಗಕ್ಕೆ ಕಲ್ಲುಕಂಬನೆಟ್ಟು ತಂತಿ ಬೇಲಿ ಹಾಕಿದ್ದಾರೆ. ಇದರಿಂದ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿದೆ.

    2 ವರ್ಷದಿಂದ ಬಡಾವಣೆಯ ಕೆಲವರು ಉದ್ದೇಶ ಪೂರ್ವಕವಾಗಿ ರಸ್ತೆಯಲ್ಲಿ ಕಲ್ಲು ಹಾಕುತ್ತಿದ್ದಾರೆ. ಡಿಪೋ ವ್ಯವಸ್ಥಾಪಕರಿಗೆ ಈ ಕುರಿತು ಸಾಕಷ್ಟು ಬಾರಿ ತಿಳಿಸಲಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬಡಾವಣೆ ನಿವಾಸಿಗಳು ರಸ್ತೆಗೆ ಅಡ್ಡವಾಗಿ ಕಲ್ಲು ನಿಲ್ಲಿಸಿ ತಂತಿ ಬೇಲಿ ಕಟ್ಟಿದ್ದಾರೆ ಎಂದು ಬಿಎಂಟಿಸಿ ಬಸ್ ಚಾಲಕ ಉಮೇಶ್ ತಿಳಿಸಿದರು.

    ಜನರ ಮನವೊಲಿಸಲು ಪ್ರಯತ್ನ: 2014ರಲ್ಲಿ ಶಿವನಪುರ 43ನೇ ಡಿಪೋ ನಿರ್ಮಿಸಿದ್ದು, ಸುಮಾರು 8ವರ್ಷದಿಂದ ಬಸ್‌ಗಳು ಗಂಗಾಧರ್ ಬಡಾವಣೆ, ಅರಿಶಿನಕುಂಟೆ ಮೂಲಕ ನೆಲಮಂಗಲ ನಗರ ಬಸ್ ನಿಲ್ದಾಣಕ್ಕೆ ಬಂದು ನಂತರ ವಿವಿಧ ಪ್ರದೇಶಕ್ಕೆ ತೆರಳುತ್ತಿದ್ದವು. 2014ರಿಂದ ಪಂಚಾಯಿತಿ ರಸ್ತೆಯಲ್ಲಿ ಸಂಚರಿಸುತ್ತಿದ್ದು ಇತ್ತೀಚೆಗೆ ಕೆಲ ನಿವಾಸಿಗಳು ಬಿಎಂಟಿಸಿ ಬಸ್ ಸಂಚಾರಕ್ಕೆ ಸಾಕಷ್ಟು ತೊಂದರೆ ನೀಡುತ್ತಿದ್ದರು. ಸಾರ್ವಜನಿಕ ಅನುಕೂಲಕ್ಕಾಗಿ ಸಂಚರಿಸುವ ಬಸ್‌ಗಳ ಸಂಚಾರಕ್ಕೆ ಅಡ್ಡಲಾಗಿ ಕಲ್ಲು ನಿಲ್ಲಿಸಿರುವುದು ಬೇಸರದ ಸಂಗತಿ. ಈ ಸಂಬಂಧ ದಾಸನಪುರ ಗ್ರಾಪಂ ಪಿಡಿಒ ಹಾಗೂ ಮಾದನಾಯಕನಹಳ್ಳಿ ಠಾಣೆ ಗಮನಕ್ಕೆ ತರಲಾಗಿದೆ. ಬಿಎಂಟಿಸಿ ಬಸ್‌ಗಳು ಗಂಗಾಧರ್ ಬಡಾವಣೆ ಮೂಲಕ ನಗರಕ್ಕೆ ಸಂಚರಿಸುವುದರಿಂದ ಸಮಯ, ಇಂಧನ ಉಳಿತಾಯವಾಗುತ್ತದೆ. ಆದಷ್ಟು ಶೀಘ್ರ ಸಾರ್ವಜನಿಕ ಮನವೊಲಿಸಿ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts